ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ
ಮಂಡ್ಯ

ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ

March 5, 2022

ಶ್ರೀರಂಗಪಟ್ಟಣ, ಮಾ.4(ವಿನಯ್ ಕಾರೇಕುರ)- ಕತ್ತು ಕೊಯ್ದು ಯುವಕನನ್ನು ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದರೆ, ಶುಕ್ರವಾರ ವೃದ್ಧೆ ಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ. ಬೆಳಗೊಳ ಹೋಬಳಿಯ ಕಾರೇಕುರ ಗ್ರಾಮದಲ್ಲಿ ಸಾಗರ್(28) ಎಂಬ ಯುವಕನನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ, ನಂತರ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರೆ, ಬೆಳಗೊಳ ಗ್ರಾಮದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಮಂಗಳಮ್ಮ(65) ಎಂಬ ವೃದ್ಧೆಯನ್ನು ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ 9.30ರೊಳಗೆ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಂದಿದ್ದಾರೆ.

ಯುವಕನ ಹತ್ಯೆ: ಕಾರೇಕುರ ಗ್ರಾಮದ ಸಾಗರ್ ಗುರುವಾರ ಸಂಜೆ ಮನೆಯಿಂದ ಹೊರ ಹೋಗಿದ್ದ. ರಾತ್ರಿ 8.30ರ ಸುಮಾರಿಗೆ ಮನೆಯವರ ದೂರವಾಣಿ ಕರೆ ಸ್ವೀಕರಿಸಿದ ಆತ, ನಾನು ಈಗ ಹೊಸಹಳ್ಳಿ ಗ್ರಾಮ ದಿಂದ ಚಿಕನ್ ತೆಗೆದುಕೊಂಡು ಮನೆಗೆ ಹೊರಟಿರುವು ದಾಗಿ ತಿಳಿಸಿದ್ದಾನೆ. ಆದರೆ ರಾತ್ರಿ ಎಷ್ಟೇ ಹೊತ್ತಾದರೂ ಮಗ ಬಾರದಿದ್ದಾಗ ತಂದೆ ಮಹದೇವು ಮತ್ತೆ ದೂರ ವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲವಾದ್ದರಿಂದ ಆತಂಕಗೊಂಡಿದ್ದರು. ಆದರೆ ಗ್ರಾಮದ ಸಮೀಪದ ಜಮೀನೊಂದರ ಬಳಿ ಈ ಯುವಕನ ರಕ್ತಸಿಕ್ತ ಮೃತದೇಹ ಕಂಡ ಕೃಷಿಕರು ಶ್ರೀರಂಗ ಪಟ್ಟಣ ಟೌನ್ ಪೆÇಲೀಸರಿಗೆ ಮಾಹಿತಿ ನೀಡಿz್ದÁರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಪರಿಶೀಲನೆ ನಡೆಸಿ, ರಸ್ತೆ ಹಾಗೂ ಅಕ್ಕಪಕ್ಕದ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಅದೇ ವೇಳೆ ಸ್ಥಳೀಯರೊಬ್ಬರು ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿ ಮನೆಗೆ ಬರುವಾಗ ಕೊಲೆ ನಡೆದ ಸ್ಥಳದ ಬಳಿ ಮೃತ ಸಾಗರ್‍ನ ಬೈಕ್ ಇದ್ದು ಪಕ್ಕದಲ್ಲಿ ಚಪ್ಪಲಿ ಇರುವು ದನ್ನು ಗಮನಿಸಿದ್ದರೆನ್ನಲಾಗಿದ್ದು, ಇಂದು ಬೆಳಗ್ಗೆ ಕುಟುಂಬಸ್ಥರಿಗೆ ಈ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಪ್ರಕಾರ ಈ ಘಟನೆ ರಾತ್ರಿ 10.30ರಿಂದ 11 ಗಂಟೆಯ ಆಸುಪಾಸಿ ನಲ್ಲಿ ನಡೆದಿದೆ ಎನ್ನಲಾಗಿದೆ. ಸಾಗರ್‍ಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, 9 ತಿಂಗಳ ಗಂಡು ಮಗು ಇದೆ. ಕುಟುಂಬ ವರ್ಗ ಈ ಕೊಲೆಯಿಂದ ಕಂಗಾಲಾಗಿದೆ. ಕೊಲೆಗೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ದುಷ್ಕರ್ಮಿಗಳು ಸ್ಥಳದಲ್ಲೇ ಬಿಟ್ಟು ಹೋಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‍ಪಿ ಎನ್.ಯತೀಶ್, ಡಿವೈಎಸ್‍ಪಿ ಸಂದೇಶ್ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಪುನೀತ್, ಸಬ್ ಇನ್ಸ್‍ಪೆಕ್ಟರ್ ರೇಖಾ ಭೇಟಿ ನೀಡಿದ್ದರು. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

ವೃದ್ಧೆ ಹತ್ಯೆ: ಬೆಳಗೊಳ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಮಂಗಳಮ್ಮ (65) ಎಂಬುವರನ್ನು ಇಂದು ಮಧ್ಯಾಹ್ನದಿಂದ ರಾತ್ರಿ 9.30ರ ನಡುವೆ ದುಷ್ಕರ್ಮಿಗಳು ಆಕೆಯ ಮನೆಯಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ವೃದ್ಧೆ ವಾಸಿಸುತ್ತಿದ್ದ ಮನೆಯ ಸುತ್ತಮುತ್ತಲೂ ಮನೆಗಳಿದ್ದು, ಆಕೆಯ ಪರಿಚಯಸ್ಥರೇ ಈ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಾತ್ರಿ 9.30ರ ಸುಮಾರಿನಲ್ಲಿ ಆಕೆಯ ಮನೆಗೆ ಮೊಮ್ಮಗ ಬಂದಾಗ ಹತ್ಯೆ ನಡೆದಿರುವುದು ತಿಳಿದಿದೆ. ಈ ಸಂಬಂಧ ಕೆಆರ್‍ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್‍ಪಿ ಸಂದೇಶ್ ಕುಮಾರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿದ್ದರು. ಬೆಳಗೊಳ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ಕೆಆರ್‍ಎಸ್ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಹಾಗೂ ಮಹಿಳೆಯನ್ನು ಆಕೆಯ ಸಂಬಂಧಿಕಳೇ ಆದ ಮಹಿಳೆಯೋರ್ವಳು ಹತ್ಯೆ ಮಾಡಿದ್ದಳು. ಬೆಳಗೊಳ ಸುತ್ತಮುತ್ತ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಕೆಆರ್‍ಎಸ್‍ಗೆ ಬರುವ ಪ್ರವಾಸಿಗರನ್ನು ತಡೆದು ಹಣ ದೋಚುವ ಕೃತ್ಯಗಳು ಆಗಿಂದಾಗ್ಗೆ ನಡೆಯುತ್ತಿವೆ ಎನ್ನಲಾಗಿದೆ. ಇಂದೂ ಕೂಡ ಉದ್ಯಮಿಯೊಬ್ಬರನ್ನು ಅಡ್ಡಗಟ್ಟಿದ ಕೆಲ ದುಷ್ಕರ್ಮಿಗಳು ಅವರಿಂದ ಹಣ ಸುಲಿಗೆ ಮಾಡಿದ್ದಾರೆ. ಆದರೆ ಉದ್ಯಮಿ ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿಲ್ಲ. ದೂರದ ಊರುಗಳಿಂದ ಬರುವ ಪ್ರವಾಸಿಗರನ್ನು ಸುಲಿಗೆ ಮಾಡಿದರೂ ಹಣ ಕಳೆದುಕೊಂಡ ಅವರು ಪೊಲೀಸರಿಗೆ ದೂರನ್ನು ಸಲ್ಲಿಸುವುದಿಲ್ಲ ಎಂಬ ಧೈರ್ಯದಿಂದ ಕೆಲ ದುಷ್ಕರ್ಮಿಗಳು ಈ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಈ ಪ್ರದೇಶದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಗಾಂಜಾ ವ್ಯಸನಕ್ಕೆ ದಾಸರಾಗಿರುವ ಯುವಕರು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Translate »