ಗುಂಡ್ಲುಪೇಟೆ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಗುಡ್ಡ ಕುಸಿತ ಇಬ್ಬರು ಕಾರ್ಮಿಕರು ನಾಪತ್ತೆ
News

ಗುಂಡ್ಲುಪೇಟೆ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಗುಡ್ಡ ಕುಸಿತ ಇಬ್ಬರು ಕಾರ್ಮಿಕರು ನಾಪತ್ತೆ

March 5, 2022

ಗುಂಡ್ಲುಪೇಟೆ, ಮಾ.4(ಸೋಮ್ ಜಿ.)-ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಗುಡ್ಡ ಕುಸಿದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ್ದು, ಕಲ್ಲು ಮತ್ತು ಮಣ್ಣು ರಾಶಿಯಡಿ ಸಿಲುಕಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ. ಅದೇ ಸ್ಥಳ ದಲ್ಲಿದ್ದ ಇಬ್ಬರು ಕಾರ್ಮಿಕರು ನಾಪತ್ತೆಯಾ ಗಿದ್ದಾರೆ. ಕ್ವಾರಿ ಮ್ಯಾನೇಜರ್ ನವೀದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣದಿಂದ ಸುಲ್ತಾನ್ ಬತ್ತೇರಿ ಕಡೆಗೆ ತೆರಳುವ ಮಾರ್ಗದಿಂದ ಮಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಗುಮ್ಮನ ಕಲ್ಲು ಗುಡ್ಡವು ಇಂದು ಬೆಳಗ್ಗೆ ಕುಸಿದಿದೆ. ಗುಡ್ಡದ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸ್ವಲ್ಪ ಸ್ವಲ್ಪ ವಾಗಿಯೇ ಗುಡ್ಡ ಜರಿಯುತ್ತಿರುವುದನ್ನು ಕಂಡು ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಕಲ್ಲಿನ ಗುಡ್ಡ ಸಂಪೂರ್ಣವಾಗಿ ಕುಸಿದು ಕೆಳಗೆ ನಿಲುಗಡೆ ಮಾಡಲಾಗಿದ್ದ 6 ಟಿಪ್ಪರ್, 5 ಜೆಸಿಬಿ, 4 ಟ್ರ್ಯಾಕ್ಟರ್‍ಗಳು ಕುಸಿದ ಗುಡ್ಡದ ಕಲ್ಲಿನಡಿ ಸಿಲುಕಿಕೊಂಡಿವೆ. ಸಕಾಲದಲ್ಲಿ ಸ್ಥಳದಿಂದ ಓಡಿ ಹೋಗದ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದು, ಅವರಲ್ಲಿ 7 ಮಂದಿಯನ್ನು ರಕ್ಷಿಸಲಾಗಿದೆ. ಅವರಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರೆ, ಮೂವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಕೇರಳದ ಟಿಪ್ಪರ್ ಚಾಲಕ ನೂರುದ್ದೀನ್, ಅಶ್ರಫ್, ಫ್ರಾನ್ಸಿಸ್ ಎಂದು ಗುರುತಿಸಲಾಗಿದ್ದು, ಮಹಾರಾಷ್ಟ್ರ ಮೂಲದ ಕಾರ್ಮಿಕರಾದ ಇಮ್ರಾನ್ ಮತ್ತು ಬಬ್ಲು ಎಂಬುವರು ನಾಪತ್ತೆಯಾಗಿದ್ದಾರೆ.

ಗುಡ್ಡ ಕುಸಿದ ವಿಷಯ ತಿಳಿಯುತ್ತಿದ್ದಂತೆಯೇ ಎನ್‍ಡಿಆರ್‍ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಕಲ್ಲು ಮತ್ತು ಮಣ್ಣಿನಡಿ ಸಿಲುಕಿದ್ದ 7 ಮಂದಿ ಕಾರ್ಮಿಕರನ್ನು ಈ ತಂಡಗಳು ರಕ್ಷಿಸಿವೆ. ಗಣಿಗಾರಿಕೆ ಗಾಗಿ ಸ್ಫೋಟಕ ಬಳಸಿದ ವೇಳೆ ಗುಡ್ಡ ಕುಸಿದಿದೆ ಎಂದು ಮೂಲಗಳು ತಿಳಿಸಿವೆ. ಬೊಮ್ಮಲಾಪುರ ಗ್ರಾಮದ ಮಹೇಂದ್ರ ಎಂಬುವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದಿದ್ದು, ಗಣಿಯನ್ನು ಕೇರಳದ ಹಕೀಂ ಎಂಬಾತನಿಗೆ ಉಪ ಗುತ್ತಿಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಉಪ ಗುತ್ತಿಗೆ ಪಡೆದ ಹಕೀಂ, ಅವೈಜ್ಞಾನಿಕವಾಗಿ ಸುಮಾರು 200 ಅಡಿ ಆಳದವರೆಗೆ ಭೂಮಿಯನ್ನು ತೋಡಿ, ಗುಡ್ಡದ ಕೆಳ ಭಾಗದಲ್ಲಿ ಅರ್ಧ ಚಂದ್ರಾಕಾರವಾಗಿ ಕೊರೆದಿದ್ದೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಎಸ್ಪಿ ಶಿವಕುಮಾರ್, ಡಿವೈಎಸ್‍ಪಿಗಳಾದ ಪ್ರಿಯದರ್ಶಿನಿ ಶಾಣೆಕೊಪ್ಪ, ಸುಂದರ ರಾಜ್, ತಹಸೀಲ್ದಾರ್ ರವಿಶಂಕರ್ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »