ಮಾನವೀಯ ಮೌಲ್ಯಗಳ ಪ್ರತಿಪಾದಿಸಿದ ಬಸವಣ್ಣ
ಮೈಸೂರು ಗ್ರಾಮಾಂತರ

ಮಾನವೀಯ ಮೌಲ್ಯಗಳ ಪ್ರತಿಪಾದಿಸಿದ ಬಸವಣ್ಣ

April 27, 2020

ತಿ.ನರಸೀಪುರ, ಏ.26(ಎಸ್‍ಕೆ)- ಜಾತಿ ನಿರ್ಮೂಲನೆ, ಸಮಾನತೆ, ಮೌಢ್ಯ ನಿವಾರಣೆ, ಸ್ತ್ರೀ ಸ್ವಾತಂತ್ರ್ಯ, ಕಾಯಕ, ದಾಸೋಹ ಮುಂತಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ವಿಶ್ವಗುರು ಬಸವಣ್ಣನವರ ಸಂದೇಶಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ದೇಶ ಪ್ರಗತಿ ಕಾಣುತ್ತದೆ ಎಂದು ಉಪನ್ಯಾಸಕ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಕಾಯಕಯೋಗಿ ಬಸವಣ್ಣನವರ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ದೇವಭಾಷೆಯನ್ನು ಸರಳವಾಗಿ ವಚನಗಳ ಮೂಲಕ ವಿಶ್ವಕ್ಕೆ ಸಾರಿದ ಶರಣರು ಮನುಕುಲದ ಸರ್ವಾಂಗೀಣ ವಿಕಾಸಕ್ಕೆ ಮಾರ್ಗದರ್ಶನ ಮಾಡಿದರು. ವೈಯಕ್ತಿಕ ಏಳ್ಗೆಗಿಂತ ಸಾರ್ವತ್ರಿಕವಾಗಿ ಚಿಂತಿಸಿದ ಮಹಾಮಾನವತಾವಾದಿ ಬಸವಣ್ಣರವರಾ ಗಿದ್ದು ಕಾಯಕಧರ್ಮವನ್ನು ಪ್ರತಿಪಾದಿಸಿದ ಮಹಾಸಂತ. ನಿರುದ್ಯೋಗ ನಿವಾರಣೆಗೆ ಆಗಲೇ ಯೋಚಿಸಿದ್ದ ಅವರು, ಕಾಯಕ ತತ್ವದ ಆಧಾರದ ಮೇಲೆ ಆಧ್ಯಾತ್ಮಿಕ ಸಾಧನೆ ಮಾಡ ಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಶರಣರ ಕುರಿತು ಭಾಷಣ ಮಾಡಿದರೆ ಸಾಲದು. ಅವರು ತೋರಿಸಿದ ಹಾದಿಯಲ್ಲಿ ನಡೆದು ಮಾದರಿಯಾಗಬೇಕು. ವಚನಗಳು ವಿಶ್ವ ಸಾಹಿತ್ಯಕ್ಕೆ ನೀಡಿದ ಅಪರೂಪದ ಕೊಡುಗೆಗಳಾ ಗಿದ್ದು, ಇವುಗಳ ಅಧ್ಯಯನದ ಮೂಲಕ ಅಧ್ಯಾತ್ಮದ ನೆಲೆಗಟ್ಟಿನ ಮೇಲೆ ಸಾತ್ವಿಕ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು. ಈ ವೇಳೆ ಮುಖಂಡ ಕರೋಹಟ್ಟಿ ಪ್ರಭುಸ್ವಾಮಿ, ತಹಸೀಲ್ದಾರ್ ಡಿ.ನಾಗೇಶ್, ತಾಪಂ ಇಓ ಜೆರಾಲ್ಡ್ ರಾಜೇಶ್, ಉಪ ತಹಸೀ ಲ್ದಾರ್ ಪ್ರಭುರಾಜ್, ಎಡಿಎ ನಿಂಗಯ್ಯ, ಆರ್.ಐ.ಮಹದೇವ ನಾಯಕ, ಚಾಲಕ ಮಹದೇವಸ್ವಾಮಿ ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ಗೊಂದಲ: ಕಾರ್ಯಕ್ರಮ ನಡೆಯುವ ವೇಳೆ ಸ್ಥಳಕ್ಕಾಗಮಿಸಿದ ವೀರಶೈವ ಮುಖಂಡರು ತಮ್ಮನ್ನು ಜಯಂತಿ ಕಾರ್ಯ ಕ್ರಮಕ್ಕೆ ಆಹ್ವಾನಿ ಸಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಇತರೆ ಜಯಂತಿಗೆ ಆಯಾ ಜನಾಂಗದ ಮುಖ್ಯಸ್ಥರಿಗೆ ತಿಳಿಸುತ್ತೀರಿ.. ಆದರೆ ಬಸವ ಜಯಂತಿಗೆ ಮುಖಂಡ ರನ್ನು ಆಹ್ವಾನಿಸದೇ ಇರುವ ಹಿಂದಿರುವ ಮರ್ಮವೇನು? ಎಂದು ವೀರಶೈವ ಸಮಾಜದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ತಹಸೀಲ್ದಾರ್ ನಾಗೇಶ್ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶ ಇದೆ. ಆದ್ದರಿಂದ ಯಾರನನ್ನೂ ಆಹ್ವಾನಿಸಿಲ್ಲ ಸಮಾಧಾನಪಡಿಸಿಲು ಮುಂದಾದರು. ತಹಶೀಲ್ದಾರ್ ಉತ್ತರದಿಂದ ತೃಪ್ತರಾಗದ ಮುಖಂಡರು ಕಾರ್ಯ ಕ್ರಮದಲ್ಲಿ ಭಾಗವಹಿಸದೆ ಹೊರ ನಡೆದರು.

Translate »