ಉತ್ತಮ ನಾಗರಿಕರಾಗಿ; ಇಲ್ಲ ಖಾಯಂ ಜೈಲೇ ಗತಿ
ಮೈಸೂರು

ಉತ್ತಮ ನಾಗರಿಕರಾಗಿ; ಇಲ್ಲ ಖಾಯಂ ಜೈಲೇ ಗತಿ

February 15, 2023

ಮೈಸೂರು, ಫೆ. 14(ಆರ್‍ಕೆ)- ಸಮಾಜಘಾತುಕ ಚಟುವಟಿಕೆಗಳಲ್ಲಿ ಮುಂದುವರೆದರೆ, ಸಮಾಜ ದಲ್ಲಿ ಶಾಂತಿ ಕದಡಿದರೆ ಖಾಯಂ ಆಗಿ ಜೈಲಿ ನಲ್ಲಿರಬೇಕಾಗುತ್ತದೆ ಎಂದು ರೌಡಿಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಬಿ. ರಮೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಇಂದು ಮುಂಜಾನೆ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿ, ಹೆಬ್ಬಾಳು ಠಾಣಾ ಆವರಣಕ್ಕೆ ರೌಡಿಗಳನ್ನು ಕರೆತಂದು ಪರೇಡ್ ನಡೆಸಲಾಯಿತು.

2022ರ ಡಿಸೆಂಬರ್ 13ರಂದು ಮೈಸೂರು ನಗರದ 48 ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿ, ಕೆಲವರ ಮನೆಯಲ್ಲಿ ಮಾರಕಾಸ್ತ್ರ ವಶಪಡಿಸಿಕೊಂಡಿದ್ದರು. ಅವರನ್ನು ಇದೇ ಹೆಬ್ಬಾಳು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ವಾರ್ನಿಂಗ್ ನೀಡಿದ್ದರು. ಇಂದು ಎರಡನೇ ಬಾರಿ ಎಲ್ಲಾ 17 ಪೊಲೀಸ್ ಠಾಣೆ ವ್ಯಾಪ್ತಿಯ 76 ಮಂದಿ ರೌಡಿಗಳನ್ನು ಕರೆತಂದು ರೌಡಿ ಚಟುವಟಿಕೆಗಳನ್ನು ಮುಂದುವರಿಸದಂತೆ ತಾಕೀತು ಮಾಡಿದರು.
ಠಾಣಾಧಿಕಾರಿಗಳ ಗಮನಕ್ಕೆ ಬಾರದಂತೆ ನಗರ ದಿಂದ ಹೊರಗೆ ಹೋಗಬಾರದು, ಗುಂಪುಗಾರಿಕೆ ಜಗಳ, ಹಣಕಾಸು ವ್ಯವಹಾರ, ರಿಯಲ್ ಎಸ್ಟೇಟ್ ವಿಚಾರದಲ್ಲಿ ಗೊಂದಲ, ರಾಜಕೀಯ ವ್ಯಕ್ತಿಗಳೊಂದಿಗೆ ಗುರ್ತಿಸಿಕೊಂಡು ದಬ್ಬಾಳಿಕೆ ಮಾಡುವುದು, ಸುಲಿಗೆ, ಕೊಲೆ, ಹಲ್ಲೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿ ಯಾಗಿರುವುದು ಕಂಡುಬಂದರೆ ಗೂಂಡಾ ಕಾಯ್ದೆ ಯಡಿ ಪ್ರಕರಣ ದಾಖಲಿಸಿ ಖಾಯಂ ಆಗಿ ಜೈಲಿಗೆ ಕಳುಹಿಸುವುದಾಗಿ ರಮೇಶ್ ಅವರು ಎಚ್ಚರಿಕೆ ನೀಡಿದರು.

ಸಮಾಜ ವಿರೋಧಿ ಚಟುವಟಿಕೆ ಮೂಲಕ ನಾಗರಿಕರಿಗೆ ಭಯ ಉಂಟು ಮಾಡುವುದು, ಹೆದ ರಿಸುವುದು, ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡುವುದು, ತಡರಾತ್ರಿ ಅಡ್ಡಾಡುವುದು ಕಂಡುಬಂದಲ್ಲಿ ಜಿಲ್ಲೆ ಯಿಂದ ಗಡೀಪಾರು ಮಾಡುತ್ತೇವೆ. ರೌಡಿಸಂ ಮಾಡದಿದ್ದರೂ, ರೌಡಿಯಂತೆ ವೇಷಭೂಷಣ ವಿದ್ದರೂ ನಾವು ಸಹಿಸುವುದಿಲ್ಲ ಎಂದರು.

ಹೇರ್ ಕಟ್ ಮಾಡಿಸಿ: ಉದ್ದುದ್ದ ಜುಟ್ಟು ಬಿಟ್ಟು ಕೊಂಡು, ಹರಿದ ಫ್ಯಾಷನ್ ಜೀನ್ಸ್ ಪ್ಯಾಂಟ್ ತೊಟ್ಟು ಬೈಕ್‍ಗಳಲ್ಲಿ ಓಡಾಡಿ ಸಮಾಜದಲ್ಲಿ ಸಾಮಾನ್ಯ ಜನರಿಗೆ ಭಯ ಉಂಟುಮಾಡಿದರೆ ಅಂತಹವರ ವಿರುದ್ಧವೂ ಕ್ರಮ ಜರುಗಿಸಬೇಕಾಗುತ್ತದೆ. ಸರಿಯಾಗಿ ಹೇರ್ ಕಟ್, ಶೇವಿಂಗ್ ಮಾಡಿಸಿಕೊಂಡು ನಾಗರಿಕರಂತಿರಬೇಕು. ಸಾಮಾನ್ಯ ಜನರಂತೆ ಶರ್ಟ್-ಪ್ಯಾಂಟ್ ಧರಿಸಿ ಗೌರವ ಯುತವಾಗಿ ಜೀವನ ನಡೆಸಿದರೆ ಒಳ್ಳೆಯದು ಎಂದು ಪೊಲೀಸ್ ಆಯುಕ್ತ ರಮೇಶ್ ಎಚ್ಚರಿಕೆ ನೀಡಿದರು.

ಎಲೆಕ್ಷನ್‍ಗೆ ನಿಲ್ಲಬೇಕಾ ನೀನು?: “ನಾನು ರೌಡಿ, ನನಗೂ ಚುನಾವಣೆಯಲ್ಲಿ ನಿಲ್ಲಲು ಟಿಕೆಟ್ ನೀಡಿ” ಎಂದು ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಒಬ್ಬಂಟಿಯಾಗಿ ಪ್ರತಿಭಟನೆ ನಡೆಸಿದ್ದ ಕ್ಯಾತ ಮಾರನಹಳ್ಳಿಯ ಮಂಜು ಅಲಿಯಾಸ್ ಪಾನಿಪುರಿ ಮಂಜನಿಗೆ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತರು, “ಏನೋ, ಎಲೆಕ್ಷನ್‍ಗೆ ನಿಲ್ತೀಯಾ, ಟಿಕೆಟ್ ಕೊಡ್ಬೇಕಾ ನಿಂಗೆ” ಎಂದು ಪ್ರಶ್ನಿಸಿದರಲ್ಲದೆ, ಮೊದಲು ಎಲ್ಲರಂತೆ ಒಳ್ಳೆಯ ಜೀವನ ನಡೆಸು ಎಂದು ಎಚ್ಚರಿಕೆ ನೀಡಿದರು.

15 ಮಂದಿ ಗಡಿಪಾರು!: ರೌಡಿ ಚಟುವಟಿಕೆ ಯಲ್ಲಿ ಸಕ್ರಿಯವಾಗಿರುವ 15 ಮಂದಿಯನ್ನು ಈ ಬಾರಿ ಗಡಿಪಾರು ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ನೀವು ಎಲ್ಲೆಲ್ಲಿ, ಯಾರ್ಯಾರ ಜೊತೆ ಯಾವಾಗ ಓಡಾ ಡುತ್ತಿದ್ದೀರಿ, ಏನ್ ಮಾಡ್ತಾ ಇದ್ದೀರಿ ಎಂಬ ಎಲ್ಲಾ ಮಾಹಿತಿಗಳೂ ನಮ್ಮ ಬಳಿ ಇವೆ. ನಿಮ್ಮ ಅಟ್ಟಹಾಸ ಹೀಗೆಯೇ ಮುಂದುವರೆದರೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ವಾರ್ನಿಂಗ್ ಮಾಡಿದರು. ಡಿಸಿಪಿಗಳಾದ ಎಂ. ಮುತ್ತುರಾಜ್, ಎಸ್.ಜಾನ್ಹವಿ, ಎಸಿಪಿಗಳಾದ ಶಾಂತ ಮಲ್ಲಪ್ಪ, ಅಶ್ವಥನಾರಾಯಣ, ಗಜೇಂದ್ರಪ್ರಸಾದ್, ಎಸ್.ಇ. ಗಂಗಾಧರಸ್ವಾಮಿ, ಸಂದೇಶ್‍ಕುಮಾರ್, ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್ ಗಳು ಈ ಸಂದರ್ಭ ಹಾಜರಿದ್ದರು.

Translate »