ಮೈಸೂರು ವಿವಿಯಲ್ಲಿ ಚೀನಾ ವಿದ್ಯಾರ್ಥಿಗಳಿಗೆ ಎಂಎಸ್ಸಿ ಪರೀಕ್ಷೆ ಆರಂಭ
ಮೈಸೂರು

ಮೈಸೂರು ವಿವಿಯಲ್ಲಿ ಚೀನಾ ವಿದ್ಯಾರ್ಥಿಗಳಿಗೆ ಎಂಎಸ್ಸಿ ಪರೀಕ್ಷೆ ಆರಂಭ

June 4, 2020

ಮೈಸೂರು, ಜೂ.3(ಆರ್‍ಕೆ)- ಮೈಸೂರು ವಿಶ್ವವಿದ್ಯಾನಿಲಯವು ಚೀನಾ ವಿದ್ಯಾರ್ಥಿ ಗಳಿಗೆ ಅವಧಿಗೆ ಮುಂಚೆಯೇ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ನಡೆಸುತ್ತಿದೆ. ಚೀನಾ ಉನ್ನತ ಶಿಕ್ಷಣ ಇಲಾಖೆ ಮನವಿ ಮೇರೆಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಎಂಎಸ್ಸಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ 70 ಮಂದಿ ಚೀನಾ ವಿದ್ಯಾರ್ಥಿ ಗಳಿಗೆ ಜೂ.1ರಿಂದ ಪ್ರತೀ ದಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ನಿತ್ಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆ ವರೆಗೆ ನಡೆಯುತ್ತಿರುವ ಪರೀಕ್ಷೆಗಳು ಜೂನ್ 6ರಂದು ಪೂರ್ಣಗೊಳ್ಳಲಿವೆ. ನಂತರ ಚೀನಾ ವಿದ್ಯಾರ್ಥಿಗಳನ್ನು ಆ ದೇಶದ ರಾಯಭಾರಿ ಕಚೇರಿಯಿಂದ ಕರೆಸಿಕೊಳ್ಳಲು ಕ್ರಮ ವಹಿಸಿದರೆ ನಾವು ಕಳುಹಿಸುತ್ತೇವೆ ಎಂದು ಅವರು ತಿಳಿಸಿದರು.

ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ಸಾಮಾ ಜಿಕ ಅಂತರದೊಂದಿಗೆ ವಿದ್ಯಾರ್ಥಿಗಳಿಗೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಜೂನ್ 15ರಿಂದ ಪರೀಕ್ಷೆಗಳು ಆರಂಭವಾಗಬೇಕಾಗಿತ್ತು. ಕೊರೊನಾ ವೈರಸ್ ಸೋಂಕಿನಿಂದಾಗಿ ಈಗಾಗಲೇ ಚೀನಾಗೆ ತೆರಳಿರುವ ವಿದ್ಯಾರ್ಥಿ ಗಳಿಗೆ ಆನ್‍ಲೈನ್ ಮೂಲಕ ಪಾಠ ಮಾಡಲಾಗಿದೆ. ಅವರ ದೇಶದಲ್ಲೇ ಪರೀಕ್ಷೆ ನಡೆಸಲು ನಾವು ಕ್ರಮ ಕೈಗೊಂಡಿದ್ದೇವೆ ಎಂದು ಪ್ರೊ. ಹೇಮಂತ್‍ಕುಮಾರ್ ತಿಳಿಸಿದರು.

Translate »