ನಾಳೆಯಿಂದ ಬೆಳಗಾವಿ ಅಧಿವೇಶನ:ಚುನಾವಣೆ ಹೊಸ್ತಿಲಲ್ಲಿ ಬರೀ ಮೇಲಾಟಕ್ಕೆ ವೇದಿಕೆಯಾಗುವ ಸಾಧ್ಯತೆ
News

ನಾಳೆಯಿಂದ ಬೆಳಗಾವಿ ಅಧಿವೇಶನ:ಚುನಾವಣೆ ಹೊಸ್ತಿಲಲ್ಲಿ ಬರೀ ಮೇಲಾಟಕ್ಕೆ ವೇದಿಕೆಯಾಗುವ ಸಾಧ್ಯತೆ

December 18, 2022

ಬೆಂಗಳೂರು, ಡಿ.17(ಕೆಎಂಶಿ)-ವಿಧಾನ ಸಭಾ ಚುನಾವಣಾ ಹೊಸ್ತಿಲಲ್ಲಿ ಕುಂದಾ ನಗರಿ ಸುವರ್ಣಸೌಧದಲ್ಲಿ ಸೋಮವಾರ ದಿಂದ ಆರಂಭಗೊಳ್ಳುವ ವಿಧಾನಮಂಡ ಲದ ಅಧಿವೇಶನವನ್ನು ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ವೇದಿಕೆಯಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿವೆ.

ಆಡಳಿತ ಮತ್ತು ಅಭಿವೃದ್ಧಿ ಕೆಲಸಗಳಿ ಗಿಂತ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ, ರಾಜಕೀಯವಾಗಿ ಮೇಲುಗೈ ಸಾಧಿಸಲು ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ವೋಟರ್ ಐಡಿ, 40 ಪರ್ಸೆಂಟ್ ಕಮಿಷನ್ ಸೇರಿ ದಂತೆ ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಹೊರಟಿದೆ.

ಕಾಂಗ್ರೆಸ್‍ಗೆ ಪ್ರತಿಯಾಗಿ ಆಡಳಿತಾ ರೂಢ ಬಿಜೆಪಿ ಕೂಡ ಬೆಳಗಾವಿ ಅಧಿ ವೇಶನವನ್ನು ಪ್ರತಿಪಕ್ಷಗಳ ಬಣ್ಣ ಬಯಲು ಮಾಡಿ, ಸರ್ಕಾರದ ಕಾರ್ಯಕ್ರಮಗಳನ್ನು ಬಿಂಬಿಸುವ ಪ್ರಯತ್ನ ಮಾಡಲಿದೆ. ಅಷ್ಟೇ ಅಲ್ಲ ಚಳಿಗಾಲದ ಅಧಿವೇಶನದಲ್ಲಿ ಗ್ರಾಮೀಣ, ಬಡವರು ಮತ್ತು ಮಧ್ಯಮವರ್ಗದವರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೆಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಉಭಯ ಸದನಗಳಲ್ಲಿ ಒಂಭತ್ತು ಮಸೂದೆಗಳನ್ನು ಮಂಡಿಸಿ, ಅನುಮೋದನೆ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಿದ್ಧವಾಗಿದೆ. ವೋಟರ್ ಐಡಿ ಹಗರಣ,ಮತದಾರರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು ಸೇರಿದಂತೆ ಹಲವು ವಿಷಯಗಳು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಬಾಣ ಪ್ರಯೋಗಿಸಲು ಅಸ್ತ್ರವಾಗಲಿವೆ. ಚಿಲುಮೆ ಸಂಸ್ಥೆಯ ಮೂಲಕ ನಡೆದ ಈ ಹಗರಣದಲ್ಲಿ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆಯಾದರೂ, ಇದರ ಹಿಂದೆ ಸರ್ಕಾರದಲ್ಲಿರುವ ಪ್ರಮುಖ ಸಚಿವರೊಬ್ಬರೇ ಭಾಗೀದಾರರು ಎಂದು ಪ್ರತಿಪಕ್ಷಗಳು ಸರ್ಕಾರದ ಮೇಲೆರಗಲಿವೆ. ಇದೇ ರೀತಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕನನ್ನು ಸೃಷ್ಟಿಸಿದ್ದು ಬಿಜೆಪಿಯ ಷಡ್ಯಂತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿದ ಆರೋಪ ಆಡಳಿತಾರೂಢ ಬಿಜೆಪಿಗೆ ಪ್ರಬಲ ಅಸ್ತ್ರವಾಗಿ ದಕ್ಕಿದೆ. ಈ ಮಧ್ಯೆ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನ್ಯಾಯಯುತ ಬೆಲೆ ನೀಡುತ್ತಿಲ್ಲ ಎಂಬ ವಿಷಯವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಸರ್ಕಾರದ ಮೇಲೆರಗಲಿವೆ. ಕರ್ನಾಟಕ-ಮಹಾರಾಷ್ಟ್ರದ ನಡುವೆ ಭುಗಿಲೆದ್ದಿರುವ ಗಡಿ ವಿವಾದದ ಬಗ್ಗೆ ಉಭಯ ರಾಜ್ಯಗಳ ನಾಯಕರ ಜತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚರ್ಚಿಸಿದ್ದು, ಈ ಹಿನ್ನೆಲೆಯಲ್ಲಿ ಸದರಿ ವಿವಾದ ತಾತ್ಕಾಲಿಕವಾಗಿ ತಣ್ಣಗಾಗಿದೆಯಾದರೂ,ಅಧಿವೇಶನದ ಮೂಲಕ ಗಡಿ ವಿವಾದ ಕೆದಕುತ್ತಿರುವ ಮಹಾರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶ ರವಾನೆ ಆಗಲಿದೆ ಎಂಬುದು ಮೂಲಗಳ ಹೇಳಿಕೆ.

ಈ ಮಧ್ಯೆ ಭಾವನಾತ್ಮಕ ವಿಷಯಗಳನ್ನು ಎತ್ತಿಕೊಂಡು ಬಿಜೆಪಿ ರೂಪಿಸುತ್ತಿರುವ ಹೋರಾಟಗಳ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ತಕರಾರು ಮಾಡುವುದು ನಿಚ್ಚಳವಾಗಿದೆ.

ಹಿಂದುತ್ವದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಇದು ಸರಿಯಲ್ಲ ಎಂದು ಆಡಳಿತಾರೂಢ ಪಕ್ಷದ ಮೇಲೆ ಧಾಳಿ ಮಾಡುವ ಅವಕಾಶವನ್ನು ಕಳೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬಯಸುವುದಿಲ್ಲ.

ಈ ಮಧ್ಯೆ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ಪ್ರತಿಪಕ್ಷಗಳು ಎತ್ತಿ ಹಿಡಿದು ಹೋರಾಡುವುದು ಬಹುತೇಕ ಖಚಿತ. ಇದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಆ ಭಾಗದ ಮತದಾರರ ಮೇಲೆ ಪ್ರಭಾವ ಬೀರುವ,ಮುಂದಿನ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶ ಎಲ್ಲ ರಾಜಕೀಯ ಪಕ್ಷಗಳಿಗೂ ಇರುವುದು ಸ್ಪಷ್ಟವಾ ಗಿದ್ದು,ಇದು ಕೂಡಾ ಹಲವು ವಿಷಯಗಳಲ್ಲಿ ಪರಸ್ಪರ ಮೇಲಾಟ ನಡೆಸಲು ಕಾರಣವಾಗಲಿದೆ. ಇನ್ನು ಮೇಕೆದಾಟು ಅಣೆಕಟ್ಟು ಯೋಜನೆ, ಮಹದಾಯಿ ಯೋಜನೆಗಳ ಜಾರಿಯಲ್ಲಿ ಆಗುತ್ತಿರುವ ವಿಳಂಬ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು,ಡಬಲ್ ಎಂಜಿನ್ ಸರ್ಕಾರವಿದ್ದರೂ ಏಕೆ ಈ ವಿಷಯದಲ್ಲಿ ಸರ್ಕಾರ ರಾಜ್ಯದ ಹಿತ ಕಾಪಾಡಿಲ್ಲ ಎಂಬ ಕೂಗು ಪ್ರತಿಪಕ್ಷಗಳಿಂದ ಕೇಳಲಿದೆ.

Translate »