ನಿಖಿಲ್ ಕುಮಾರಸ್ವಾಮಿ ರಾಮನಗರ ಜೆಡಿಎಸ್ ಅಭ್ಯರ್ಥಿ
News

ನಿಖಿಲ್ ಕುಮಾರಸ್ವಾಮಿ ರಾಮನಗರ ಜೆಡಿಎಸ್ ಅಭ್ಯರ್ಥಿ

December 18, 2022

ರಾಮನಗರ, ಡಿ.17- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಪಂಚರತ್ನ ರಥಯಾತ್ರೆ ಸಂದರ್ಭ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಈ ಘೋಷಣೆ ಮಾಡಿ ದರು. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಇದಕ್ಕೆಲ್ಲ ತೆರೆ ಎಳೆಯಬೇಕು ಎಂದೇ ಇಂದು ಈ ಘೋಷಣೆ ಮಾಡಿದ್ದೇನೆ. 2023ರ ಚುನಾವಣೆಯಲ್ಲಿ ನನ್ನ ಮಗನನ್ನು ಈ ಕ್ಷೇತ್ರದಿಂದ ಅಭ್ಯರ್ಥಿಯಾಗಿಸಲು ತೀರ್ಮಾನಿಸಿದ್ದೇವೆ. ನಮ್ಮ ಕುಟುಂಬಕ್ಕೆ ಆಶೀರ್ವಾದ ನೀಡಿದಂತೆ ಅವನನ್ನೂ ಬೆಂಬಲಿಸಬೇಕು ಎಂದು ಕೋರಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಈ ಸಂದರ್ಭ ಜೊತೆಗಿದ್ದರು.

ಯುವಕರ ಒತ್ತಾಯ: ಹೊಸ ಮುಖಕ್ಕೆ ಅವಕಾಶ ನೀಡಬೇಕೆಂಬ ಉದ್ದೇಶ ದಿಂದ ತಮ್ಮ ಪತ್ನಿಯೂ ಆದ ಶಾಸಕಿ ಅನಿತಾ ಕುಮಾರಸ್ವಾಮಿಯವರು ರಾಮ ನಗರ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಘೋಷಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಸುಗ್ಗನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೆಂಬ ಒತ್ತಾಯವನ್ನು ರಾಮನಗರ ಕ್ಷೇತ್ರದ ಯುವಕರು ಮಾಡುತ್ತಲೇ ಬಂದಿದ್ದರು. ಬಹಳ ದಿನಗಳಿಂದ ಇದನ್ನು ಗಮನಿಸಿದ್ದ ಅನಿತಾ, ಇಂದು ನಿಖಿಲ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾರೆ ಎಂದರು.

ಶಾಸಕಿಯಾಗಿ ಅನಿತಾ ಉತ್ತಮ ಕೆಲಸ ಮಾಡಿದ್ದಾರೆ. ಆಕಸ್ಮಿಕವಾಗಿ ರಾಜ ಕೀಯಕ್ಕೆ ಬಂದ ಅವರು, ಚನ್ನಪಟ್ಟಣದಲ್ಲಿ ಸೋತಿದ್ದರು. ಮತ್ತೊಮ್ಮೆ ಶಾಸಕ ರಾಗಬೇಕೆಂಬ ಬಯಕೆಯಿಂದ ರಾಮನಗರದಲ್ಲಿ ಸ್ಪರ್ಧಿಸಿ ಶಾಸಕಿಯಾಗಿದ್ದರು ಎಂದ ಕುಮಾರಸ್ವಾಮಿ, ರಾಮನಗರ ಕ್ಷೇತ್ರ ನಮ್ಮ ಕುಟುಂಬದ ಕಣ್ಣಿದ್ದಂತೆ. ಹೆಚ್.ಡಿ. ದೇವೇಗೌಡರಿಗೂ ರಾಮನಗರಕ್ಕೂ ಅವಿನಾಭಾವ ಸಂಬಂಧವಿದೆ. ರಾಮನಗರ ಜನತೆ ನಿಖಿಲ್ ಕುಮಾರಸ್ವಾಮಿಯವರಿಗೂ ಕೂಡ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ: ತಾಯಿ ಇದ್ದಕ್ಕಿದ್ದಂತೆ ಘೋಷಣೆ ಮಾಡಿದ್ದಾರೆ. ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ತಾಯಿ ಅನಿತಾ ಅವರು ತಮ್ಮ ಹೆಸರನ್ನು ಘೋಷಣೆ ಮಾಡಿದ ಬಳಿಕ ಮಾತನಾ ಡಿದ ನಿಖಿಲ್ ಕುಮಾರಸ್ವಾಮಿ, ತಾಯಿ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇವತ್ತಿಗೂ ನನ್ನ ಅಭಿಪ್ರಾಯದಲ್ಲಿ ರಾಮನಗರಕ್ಕೆ ಸೂಕ್ತ ಅಭ್ಯರ್ಥಿ ಅಂದರೆ ಅದು ಕುಮಾರಣ್ಣ. ನಮ್ಮ ತಂದೆ ಜನತೆ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡಿದ್ದಾರೆ ಎಂದು ಹೇಳಿ ಅವರು ಗದ್ಗದಿತರಾದರು. ಹಿಂದೆ ದೇವೇಗೌಡರ ಪರವಾಗಿ ನಿಂತಿದ್ದೀರಿ. ನಂತರ ಎರಡು ಬಾರಿ ಕುಮಾರಸ್ವಾಮಿ ಪರ ನಿಂತಿದ್ದೀರಿ. ಕುಮಾರಣ್ಣನನ್ನು ರಾಜಕೀಯವಾಗಿ ಬೆಳೆಸಿದ್ದೀರಿ. ಈಗ ತಾಯಿ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನನಗೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದು ರಾಮನಗರ ಜನತೆಗೆ ಮನವಿ ಮಾಡಿದರು.

Translate »