ಇಂದು ಫಿಫಾ ಫುಟ್‍ಬಾಲ್ ವಿಶ್ವಕಪ್ ಫೈನಲ್
News

ಇಂದು ಫಿಫಾ ಫುಟ್‍ಬಾಲ್ ವಿಶ್ವಕಪ್ ಫೈನಲ್

December 18, 2022

ದೋಹಾ, ಡಿ.17- ಫಿಫಾ ವಿಶ್ವಕಪ್ ಪಂದ್ಯಾವಳಿಯ 22ನೇ ಆವೃತ್ತಿಯ ಫೈನಲ್ ಪಂದ್ಯ ಭಾನುವಾರ(ಡಿ.18) ರಾತ್ರಿ ಭಾರತೀಯ ಕಾಲಮಾನ 8.30ಕ್ಕೆ ಇಲ್ಲಿನ ಲುಸೇಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ವಿಶ್ವದ 2 ಬಲಿಷ್ಠ ತಂಡಗಳಾದ ಫ್ರಾನ್ಸ್-ಅರ್ಜೆಂಟೀನಾ ಪ್ರಶಸ್ತಿ ಗಾಗಿ ಸೆಣಸಲಿವೆ. ವಿಶ್ವದ ಕೋಟ್ಯಾಂತರ ಫುಟ್ಬಾಲ್ ಅಭಿಮಾನಿಗಳು ಫೈನಲ್ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದು, ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭ ವಾಗಿದೆ. ಫ್ರಾನ್ಸ್ 4ನೇ ಬಾರಿ ಫೈನಲ್‍ಗೇರಿ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, 60 ವರ್ಷದಲ್ಲೇ ಸತತ 2ನೇ ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಳ್ಳುವ ನಿರೀಕ್ಷೆಯ ಲ್ಲಿದೆ. ಇನ್ನು 6ನೇ ಫೈನಲ್ ಆಡುತ್ತಿರುವ ಅರ್ಜೆಂಟೀನಾ ಕೂಡಾ 3ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದೆ. ಅರ್ಜೆಂಟೀನಾ ತಂಡ 1978, 1986ರಲ್ಲಿ ಚಾಂಪಿಯನ್ ಆಗಿದ್ದರೆ, 1930, 1990 ಹಾಗೂ 2014 ರಲ್ಲಿ ರನ್ನರ್-ಅಪ್ ಆಗಿತ್ತು. ಅರ್ಜೆಂಟೀನಾ, 2002ರಲ್ಲಿ ಬ್ರೆಜಿಲ್ ಬಳಿಕ ಪ್ರಶಸ್ತಿ ಗೆದ್ದ ದಕ್ಷಿಣ ಅಮೆರಿಕದ ಮೊದಲ ತಂಡ ಎನಿಸಿಕೊಳ್ಳುವ ತವಕದಲ್ಲಿದೆ.

ಇದು ತನ್ನ ಕೊನೆ ವಿಶ್ವಕಪ್ ಪಂದ್ಯ ಎಂದು ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನಲ್ ಮೆಸ್ಸಿ ಈಗಾಗಲೇ ಘೋಷಿಸಿದ್ದು, ಅರ್ಜೆಂಟೀನಾ ಟ್ರೋಫಿಗಾಗಿ ಕಠಿಣ ಪ್ರಯತ್ನ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೇಲಾಗಿ ಹಿಂದಿನ ದಾಖಲೆಗಳೂ ಆ ತಂಡದ ಪರವಾಗಿವೆ. ಇದುವರೆಗೆ ಫ್ರಾನ್ಸ್ ವಿರುದ್ಧದ ಮುಖಾಮುಖಿಯಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿದೆ.

12 ಬಾರಿ ಮುಖಾಮುಖಿ: ಅರ್ಜೆಂಟೀನಾ ಮತ್ತು ಫ್ರಾನ್ಸ್ ಇದುವರೆಗೆ 12 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಅರ್ಜೆಂಟೀನಾ 6 ಪಂದ್ಯಗಳನ್ನು ಗೆದ್ದಿದೆ. ಫ್ರಾನ್ಸ್ ಮೂರರಲ್ಲಿ ಗೆದ್ದರೆ, ಉಳಿದ ಮೂರು ಡ್ರಾದಲ್ಲಿ ಕೊನೆಗೊಂಡಿತು. ಈ ಎರಡು ತಂಡಗಳು ಇಲ್ಲಿಯವರೆಗೆ ಫಿಫಾ ವಿಶ್ವಕಪ್‍ನಲ್ಲಿ ಮೂರು ಬಾರಿ ಆಡಿವೆ. ಅರ್ಜೆಂಟೀನಾ ಎರಡು ಗೆಲುವುಗಳನ್ನು ಪಡೆದಿದೆ.

ಅರ್ಜೆಂಟೀನಾ 1930ರಲ್ಲಿ ಒಮ್ಮೆ 1-0 ಮತ್ತು 1978ರಲ್ಲಿ 2-1ರಲ್ಲಿ ಫ್ರಾನ್ಸ್ ಅನ್ನು ಸೋಲಿಸಿತು. ಆದರೆ 2018ರ ವಿಶ್ವಕಪ್‍ನಲ್ಲಿ ಕೊನೆಯ ಬಾರಿಗೆ ಈ ಎರಡು ತಂಡಗಳು ಮುಖಾಮುಖಿಯಾದಾಗ ಫ್ರಾನ್ಸ್ ಅರ್ಜೆಂಟೀನಾವನ್ನು 4-3 ಅಂತರದಿಂದ ಸೋಲಿಸಿತ್ತು. ಇದು ಫೈನಲ್‍ಗೂ ಮುನ್ನ ಫ್ರಾನ್ಸ್‍ಗೆ ಕೊಂಚ ಸಮಾಧಾನ ತಂದಿದೆ.

ಅದ್ಧೂರಿ ಸಮಾರಂಭ: ಫೈನಲ್ ಪಂದ್ಯಕ್ಕೂ ಮುನ್ನಾ ಲುಸೇಲ್ ಸ್ಟೇಡಿಯಂನಲ್ಲಿ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದ್ದು, ಹಲವು ಸೆಲೆಬ್ರಿಟಿಗಳು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸೌಂಡ್‍ಟ್ರ್ಯಾಕ್ ತಾರೆಗಳಾದ ಡೇವಿಡೋ ಮತ್ತು ಆಯೇಶಾ, ಓಝುನಾ ಮತ್ತು ಗಿಮ್ಮಸ್, ನೋರಾ ಫತೇಹಿ, ಬಾಲ್ಕಿಸ್, ರಹ್ಮಾ ರಿಯಾಡ್ ಮತ್ತು ಮನಲ್ ಲೈವ್ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಭಾರೀ ಬಹುಮಾನ: ಪಂದ್ಯಾವಳಿಯ ಚಾಂಪಿಯನ್ ತಂಡ 42 ಮಿಲಿಯನ್ ಹಾಗೂ ಟ್ರೋಫಿ ತನ್ನದಾಗಿಸಿಕೊಂಡರೇ, ರನ್ನರ್ ಅಪ್ ತಂಡ 30 ಮಿಲಿಯನ್, 3ನೇ ಸ್ಥಾನ ಪಡೆಯುವ ತಂಡ 27 ಮಿಲಿಯನ್ ಹಾಗೂ 4ನೇ ಸ್ಥಾನ ಪಡೆಯುವ ತಂಡ 25 ಮಿಲಿಯನ್ ಹಣವನ್ನು ಬಹುಮಾನವಾಗಿ ಪಡೆಯಲಿವೆ. ಒಟ್ಟಾರೆ ನಾಳಿನ ಪಂದ್ಯ ಲಯೊನಲ್ ಮೆಸ್ಸಿ ಹಾಗೂ ಕಿಲಿಯನ್ ಎಂಬಾಪೆ ನಡುವಿನ ಕದನವಾಗಿದ್ದು, ಇವರಿಬ್ಬರ ಕಾಲ್ಚಳಕ ಕಣ್ತುಂಬಿಗೊಳ್ಳಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Translate »