ನೇಕಾರಿಕೆ ಉದ್ಯಮಿಗಳಿಗೆ ಶೇ.50ರಷ್ಟು ಸಹಾಯಧನ
News

ನೇಕಾರಿಕೆ ಉದ್ಯಮಿಗಳಿಗೆ ಶೇ.50ರಷ್ಟು ಸಹಾಯಧನ

December 18, 2022

ಬೆಂಗಳೂರು, ಡಿ.17- ನೇಕಾರ ಸಮುದಾಯದವರು ನೇಕಾರಿಕೆಗೆ ಸಂಬಂಧಿಸಿದ ಉದ್ಯಮಗಳನ್ನು ಆರಂಭಿಸಲು ನೀಡುವ ಸಹಾಯಧನದ ಮೊತ್ತ ವನ್ನು ಶೇ.30ರಿಂದ ಶೇ 50ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನೇಕಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನೇಕಾರರ ಹಲವು ಬೇಡಿಕೆಗಳನ್ನು ಈಡೇರಿಸುವ ತೀರ್ಮಾ ನವನ್ನು ಸಭೆಯಲ್ಲಿ ಕೈಗೊಂಡಿದ್ದೇವೆ. ವೃತ್ತಿಪರ ನೇಕಾರರಿಗೆ ಸರ್ಕಾರದಿಂದ ಹೆಚ್ಚಿನ ನೆರವು ಒದಗಿಸಲಾಗುವುದು ಎಂದರು. ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ನೇಕಾರ್ ಸಮ್ಮಾನ್ ಯೋಜನೆ ವಿಸ್ತರಿಸಲಾಗುವುದು. ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ ವಾಸ್ತವ್ಯ ಪ್ರಮಾಣಪತ್ರ ವಿತರಿಸಲಾಗುವುದು. ಕೈಮಗ್ಗದ ಮೂಲಕ ನೇಕಾರಿಕೆ ನಡೆಸುವುದನ್ನು ಗುಡಿ ಕೈಗಾರಿಕೆ ಎಂದು ಪರಿಗಣಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯುವುದರಿಂದ ವಿನಾಯ್ತಿ ನೀಡಲು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ವಿದ್ಯಾ ವಿಕಾಸ ಯೋಜನೆಯಡಿ ಸಮವಸ್ತ್ರ ಪೂರೈಕೆಗೆ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿಂದ ಬಟ್ಟೆ ಖರೀದಿಗೆ ಆದ್ಯತೆ ನೀಡಲಾಗುವುದು. ಮಗ್ಗಗಳಿಂದ ಲಭ್ಯವಾಗುವ ಬಟ್ಟೆಯ ಪ್ರಮಾಣವನ್ನು ನಿಗದಿಪಡಿಸಿ, ಉಳಿದ ಪ್ರಮಾಣದ ಬಟ್ಟೆ ಖರೀದಿಗೆ ಟೆಂಡರ್ ಕರೆಯಲಾಗುವುದು. ಮಗ್ಗಗಳಿಂದ ಬಟ್ಟೆ ಖರೀದಿಗೆ ಡಿಸೆಂಬರ್ ತಿಂಗಳಿನಲ್ಲೇ ಕಾರ್ಯಾದೇಶ ನೀಡಲಾಗುವುದು. ವಿವಿಧ ಇಲಾಖೆಗಳಲ್ಲಿ ಸಮವಸ್ತ್ರಕ್ಕೆ ಅಗತ್ಯವಿರುವ ಬಟ್ಟೆಯ ಶೇ 25ರಷ್ಟನ್ನು ಕೈಮಗ್ಗ ನಿಗದಮ ಮೂಲಕ ಖರೀದಿಗೆ ನಿರ್ಧರಿಸಲಾಗಿದೆ ಎಂದರು.

ನೇಕಾರರಿಗೆ 2 ಲಕ್ಷದವರೆಗೆ ಬಡ್ಡಿರಹಿತ ಸಾಲ ವಿತರಿಸುವುದು, ಐದು ಅಶ್ವಶಕ್ತಿ (ಎಚ್.ಪಿ) ಸಾಮರ್ಥ್ಯದವರೆಗಿನ ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ತಮಿಳುನಾಡು ಮಾದರಿಯಲ್ಲಿ ಉಚಿತ ವಿದ್ಯುತ್ ಪೂರೈಕೆ, ವಿದ್ಯುತ್ ಬಿಲ್‍ನ ನಿಶ್ಚಿತ ಶುಲ್ಕದಲ್ಲಿ ಶೇ 50ರಷ್ಟು ರಿಯಾಯ್ತಿ, ನೇಕಾರರನ್ನು ಅಸಂಘಟಿತ ವಲಯದ ಕಾರ್ಮಿಕರ ವ್ಯಾಪ್ತಿಗೆ ಸೇರಿಸಿ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Translate »