ರಿವಾಲ್ವರ್ ಇದ್ದರೂ ಬಳಸಲಾಗದೇ ಹತ್ಯೆಯಾದ ರೌಡಿ ಅರಸಯ್ಯ
ಮಂಡ್ಯ

ರಿವಾಲ್ವರ್ ಇದ್ದರೂ ಬಳಸಲಾಗದೇ ಹತ್ಯೆಯಾದ ರೌಡಿ ಅರಸಯ್ಯ

August 13, 2018

ಮಂಡ್ಯ: ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ನಡೆದ ರೌಡಿ ಅರಸಯ್ಯನ ಮೇಲಿನ ಹಂತಕರ ದಾಳಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಹಂತಕರ ದಾಳಿ ವೇಳೆ ಅರಸಯ್ಯ ತನ್ನ ಇನ್ನೋವಾ ಕಾರಿನಲ್ಲಿ ರಿವಾಲ್ವರ್ ಇಟ್ಟುಕೊಂಡಿದ್ದ! ಆದರೆ ಆ ರಿವಾಲ್ವರ್, ಆತನ ಸಹಾಯಕ್ಕೆ ಬಂದೇ ಇಲ್ಲ ಎಂಬ ಸಂಗತಿ ಬಯಲಾಗಿದೆ.

ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಆಗಿದ್ದ ಅರಸಯ್ಯ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಸಮಾಜ ಸೇವಕ ಎಂಬ ಸ್ವಘೋಷಿತ ಪಟ್ಟ ಕಟ್ಟಿಕೊಂಡಿದ್ದ. ಶ್ರೀರಂಗಪಟ್ಟಣ ಬಳಿ ಮಹಾಕಾಳಿ ದೇವಸ್ಥಾನ ನಿರ್ಮಾಣ ಮಾಡಿ ಟ್ರಸ್ಟಿಯೂ ಕೂಡ ಆಗಿದ್ದ. ಆದರೆ ಆತ ತನ್ನ ಬಳಿ ರಿವಾಲ್ವರ್ ಇಟ್ಟು ಕೊಂಡಿದ್ದರೂ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.!
ನಿನ್ನೆ ಅರಸಯ್ಯ ತಮ್ಮ ಇನೋವಾ ಕಾರಿನಲ್ಲಿ ಶ್ರೀರಂಗಪಟ್ಟಣ ದಿಂದ ಬೆಂಗಳೂರು ಕಡೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಟಿ.ಎಂ. ಹೊಸೂರು ಗೇಟ್ ಬಳಿ ಹಿಂದಿನಿಂದ ಕಾರಿನಲ್ಲಿ ಬಂದ ಹಂತಕರು ಅರಸಯ್ಯ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾರೆ. ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ಅರಸಯ್ಯ ಹಂತಕರಿಂದ ತಪ್ಪಿಸಿಕೊಳ್ಳಲು ಕಾರನ್ನು ಎಡಕ್ಕೆ ಎಳೆಯುತ್ತಿದ್ದಂತೆ ಕಾರು ಹಳ್ಳಕ್ಕೆ ಇಳಿದಿದೆ. ಈ ವೇಳೆ ಹಂತಕರು ಅರಸಯ್ಯನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಆದರೆ ಕಾರಿನಲ್ಲಿ ಅರಸಯ್ಯನ ಜೊತೆಯಲ್ಲೇ ಇದ್ದ ಆತನ ಬಂಟರಾದ ಶ್ರೀನಿವಾಸ ಮತ್ತು ರಂಗಸ್ವಾಮಿ ಕಾರಿನಿಂದ ಇಳಿದು ಪರಾರಿಯಾದರು. ಆದರೆ ಘಟನೆಯಲ್ಲಿ ಗಾಯಗೊಂಡಿದ್ದ ಅರಸಯ್ಯ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ರಿವಾಲ್ವರ್ ವಶ: ಇನ್ನು ಘಟನಾ ಸ್ಥಳದಲ್ಲಿ ಪರಿಶೀಲನೆ ವೇಳೆ ಪೊಲೀಸರಿಗೆ ರಿವಾಲ್ವರ್‍ವೊಂದು ಸಿಕ್ಕಿದೆ. ಅದನ್ನು ವಶಕ್ಕೆ ಪಡೆದಿರುವ ಪೊಲೀಸರು ಈ `ರಿವಾಲ್ವರ್’ ಯಾರಿಗೆ ಸೇರಿದ್ದೆಂದು ತನಿಖೆ ನಡೆಸುತ್ತಿದ್ದಾರೆ. ಆದರೂ ಸದ್ಯಕ್ಕೆ ಆ ರಿವಾಲ್ವರ್ ಅರಸಯ್ಯನಿಗೆ ಸೇರಿದ್ದು ಎಂದು ಹೇಳಲಾಗಿದೆ.

ಅಂಡರ್ ವಲ್ರ್ಡ್ ಚಾಣಾಕ್ಯ?: ನಿನ್ನೆ ಶ್ರೀರಂಗಪಟ್ಟಣದ ಟಿ.ಎಂ.ಹೊಸೂರು ಬಳಿ ಹಂತಕರ ದಾಳಿಯಿಂದ ಬೆಂಗಳೂರು ಮೂಲದ ರೌಡಿಶೀಟರ್ ಅರಸಯ್ಯ ಅಲಿಯಾಸ್ ಖಾರದ ಪುಡಿ ಅರಸಯ್ಯ ಭೂಗತ ಲೋಕದ ಹಳೇ ದ್ವೇಷಕ್ಕೆ ಬಲಿಯಾಗಿ ದ್ದಾನೆ. ಇಷ್ಟಕ್ಕೂ ಈ ಅರಸಯ್ಯ ಯಾರು? ಅವನ ಹಿನ್ನೆಲೆ ಏನು ಅನ್ನುವುದರ ಸಂಪೂರ್ಣ ವಿವರ ಇಲ್ಲಿದೆ…
ಸಾಲ ತೀರಿಸಲಾಗದೇ ಅಂಡರ್‍ವಲ್ರ್ಡ್‍ಗೆ ಎಂಟ್ರಿ..! ಅರಸಯ್ಯ ಬೆಂಗಳೂರು ಕಂಡ ನಟೋರಿಯೆಸ್ ರೌಡಿಶೀಟರ್‍ಗಳಲ್ಲೊಬ್ಬ. ಆರಂಭದ ದಿನಗಳಲ್ಲಿ ಬನಶಂಕರಿಯಲ್ಲಿ ಆಟೋ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದ ಈತ ಸಣ್ಣ-ಪುಟ್ಟ ಗಲಾಟೆಗಳಲ್ಲಿ ಭಾಗಿಯಾಗಿ ಅಂಡರ್‍ವಲ್ರ್ಡ್ ಸಂಪರ್ಕ ಪಡೆಯುತ್ತಾನೆ.

ಅರಸಯ್ಯ ಓದಿನಲ್ಲಿ ಯಾವುದೇ ಪದವಿ ಪಡೆದಿಲ್ಲವಾದರೂ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಮೇಲೆ ಸಾಕ್ಷಿ ನಾಶ ಮಾಡುವುದು ಹೇಗೆ? ಸಾಕ್ಷಿಗಳು ಸಿಗದಂತೆ ಕ್ರೈಂ ಮಾಡು ವುದು ಹೇಗೆ ಅನ್ನುವುದನ್ನು ಚೆನ್ನಾಗಿ ಅರಿತಿದ್ದ. 90ರ ದಶಕದ ವೇಳೆಗಾಗಲೇ ಅರಸಯ್ಯ ಬೆಂಗಳೂರಿನ ದಕ್ಷಿಣ ಭಾಗದ ಬನಶಂಕರಿ, ಪುಟ್ಟೇನಹಳ್ಳಿ, ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ಕೆಲ ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿ, ಧಮ್ಕಿ ಹಾಕಿ ಹಫ್ತಾ ವಸೂಲಿ ಮಾಡುವುದಕ್ಕೆ ಶುರು ಇಟ್ಟುಕೊಂಡಿದ್ದ. ಈ ವೇಳೆಗಾಗಲೇ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ರು ಅರಸಯ್ಯನ ಮೇಲೆ ಒಂದು ದೂರು ಕೂಡ ದಾಖಲಾಗದಂತೆ ನೋಡಿಕೊಂಡಿದ್ದ.

ನಂತರ 2008ರಲ್ಲಿ ಬನಶಂಕರಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಯಾಗಿ ಪೊಲೀಸ್ ಕ್ರೈಂ ರೆಕಾಡ್ರ್ಸ್‍ಗೆ ಅರಸಯ್ಯ ಅಲಿಯಾಸ್ ಖಾರದಪುಡಿ ಅರಸಯ್ಯ ಅಂತ ಮೊದಲ ಬಾರಿಗೆ ತನ್ನ ಹೆಸರನ್ನು ನೋಂದಣಿ ಮಾಡಿಸಿಬಿಟ್ಟ.
ಖಾರದಪುಡಿ ಅರಸಯ್ಯನಾಗಿ ಖ್ಯಾತಿ?: ಬೆಂಗಳೂರು ಭೂಗತ ಲೋಕದಲ್ಲಿ ಅದೆಷ್ಟೋ ರೌಡಿಗಳು ತಮ್ಮ ವಿಭಿನ್ನ ಕೃತ್ಯಗಳಿಂದ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಪೈಕಿ ಕಣ್ಣಿಗೆ ಖಾರದಪುಡಿ ಎರಚಿ ಕೊಲೆ ಮಾಡುವುದನ್ನು ಬೆಂಗಳೂರು ಅಂಡರ್ ವಲ್ರ್ಡ್‍ಗೆ ಪರಿಚಯಿಸಿದ್ದು ಇದೇ ಅರಸಯ್ಯ. ಹೀಗಾಗಿ ಇವನು ಬೆಂಗಳೂರು ಭೂಗತ ಲೋಕದಲ್ಲಿ ಖಾರದ ಪುಡಿ ಅರಸಯ್ಯ ಅಂತಾನೇ ಫೇಮಸ್. ಆದ್ದರಿಂದ ಇವನನ್ನು ಬೆಂಗಳೂರು ಅಂಡರ್‍ವಲ್ರ್ಡ್‍ನ ಇತರೆ ಪಾತಕಿಗಳು ಅಂಡರ್ ವಲ್ರ್ಡ್ ಚಾಣಾಕ್ಯ ಎಂದು ಕರೆಯುತ್ತಿದ್ದರು.

2008ರಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಲ್ಲಿ ವೆಂಕಟೇಶ ಎಂಬಾತನನ್ನು ತನ್ನ ಶಿಷ್ಯ ಸೈಕಲ್ ರವಿಗೆ ಸುಫಾರಿ ನೀಡಿ ಹತ್ಯೆ ಮಾಡಿಸುತ್ತಾನೆ. ಜಲ್ಲಿ ವೆಂಕಟೇಶನ ಕೊಲೆ ಕೇಸ್‍ನಲ್ಲಿ ಎ1 ಆರೋಪಿಯಾಗಿ ಅರಸಯ್ಯ ಹೆಸರು ಮೊದಲ ಬಾರಿಗೆ ಪೊಲೀಸರ ಕ್ರೈಂ ಪುಟಗಳಿಗೆ ದಾಖಲಾಗುತ್ತದೆ. 2013ರಲ್ಲಿ ಬನಶಂಕರಿ ದೇವಾಲಯದ ಚಪ್ಪಲಿ ಬಿಡುವ ಟೆಂಡರ್ ವಿಚಾರವಾಗಿ ಗಲಾಟೆಯಾಗಿ ಪಳನಿ ರಂಗನಾಥ ಎಂಬಾತ ನನ್ನು ಬನಶಂಕರಿ ದೇವಾಲಯದ ಬಳಿ ಅರಸಯ್ಯ ಅಂಡ್ ಗ್ಯಾಂಗ್ ಹಾಡಹಗಲೇ ಕೊಚ್ಚಿ ಕೊಲೆ ಮಾಡುತ್ತದೆ. ಮತ್ತೆ 2014ರಲ್ಲಿ ಚನ್ನಪಟ್ಟಣ ಮೂಲದ ಇಬ್ಬರು ಯುವಕರನ್ನು ಅಪಹರಿಸಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್‍ನಲ್ಲಿ ಭಾಗಿಯಾಗುತ್ತಾನೆ. ಸದ್ಯ ಕೊಲೆ, ಕೊಲೆ ಯತ್ನ, ಹಫ್ತಾ ವಸೂಲಿ ಸೇರಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ರೌಡಿಶೀಟರ್ ಅರಸಯ್ಯನ ಮೇಲೆ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಿವೆ.

ಅರಸಯ್ಯ ಎಲ್ಲಿದ್ದ, ಏನ್ ಮಾಡ್ತಿದ್ದ ಗೊತ್ತಾ.?: 2014ರ ಡಬಲ್ ಮರ್ಡರ್‍ನಲ್ಲಿ ಭಾಗಿಯಾದ ನಂತರ ಸೂಕ್ತ ಸಾಕ್ಷಿಗಳಿ ಲ್ಲದೇ ಪ್ರಕರಣ ಖುಲಾಸೆ ಮಾಡಿಕೊಂಡು ಹೊರಬಂದ ನಂತರ ಅರಸಯ್ಯ ಬೆಂಗಳೂರಿಗಿಂತ ಹೆಚ್ಚಾಗಿ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡ್ತಿದ್ದ. ಶ್ರೀರಂಗಪಟ್ಟಣದ ಮಹಾಕಾಳಿ ದೇವಾಲಯ ಟ್ರಸ್ಟ್‍ನ ಅಧ್ಯಕ್ಷನಾಗಿ ಹಲವು ಸಮಾಜ ಸೇವೆಗಳಲ್ಲೂ ತೊಡಗಿಸಿ ಕೊಂಡಿದ್ದ ಅರಸಯ್ಯ, ಬೆಂಗಳೂರು ಅಂಡರ್ ವಲ್ರ್ಡ್‍ನಿಂದ ಮೇಲ್ನೋಟಕ್ಕೆ ದೂರವಾಗಿದ್ರು ತನ್ನ ಶಿಷ್ಯಂದಿರಾದ ಪುಟ್ಟೇನಹಳ್ಳಿ ಬೂನ್ ಸೀನ, ಜೆ.ಪಿ ನಗರ ರಮೇಶ, ಬನಶಂಕರಿ ಶೇಖರ, ಪ್ರಗತಿಪುರ ನಾಗ ಸೇರಿ ತನ್ನ ಹಲವು ಸಹಚರರ ಮೂಲಕ ಹಫ್ತಾ ವಸೂಲಿ ಮಾಡುವುದು, ರಿಯಲ್ ಎಸ್ಟೇಟ್ ಬಿಲ್ಡರ್‍ಗಳಿಗೆ ಧಮ್ಕಿ ಹಾಕೋದು, ತಕರಾರು ಇರುವ ಜಾಗಗಳಿಗೆ ಬೇಲಿ ಹಾಕಿಸುವ ಮೂಲಕ ಹಣ ವಸೂಲಿ ಮಾಡ್ತಿದ್ದ.

2014ರಿಂದ ಅಷ್ಟಾಗಿ ಬೆಂಗಳೂರಿನ ಕಡೆ ತಲೆಹಾಕದ ಅರಸಯ್ಯ ಹೆಚ್ಚಾಗಿ ಮೈಸೂರು, ಮಂಡ್ಯದಲ್ಲೆ ಇದ್ದುಕೊಂಡು ಬೆಂಗಳೂರು ಸೌತ್ ಡಿವಿಜನ್‍ನಲ್ಲಿ ತನ್ನ ಆಕ್ಟಿವಿಟೀಸ್ ಮುಂದುವ ರಿಸಿದ್ದ. ಇತ್ತೀಚೆಗಷ್ಟೇ ಮೈಸೂರಿನ ರೂಪಾನಗರದಲ್ಲಿ ಮನೆಯನ್ನೂ ಮಾಡಿಕೊಂಡಿದ್ದ. ತನ್ನ ಭದ್ರತೆಗೆ ರಾಮನಗರ, ಮೈಸೂರು, ಮಂಡ್ಯ ಮೂಲದ ಹಲವು ಪುಡಿ ರೌಡಿಗಳನ್ನು ಸದಾ ತನ್ನ ಬೆನ್ನಿಗೆ ಇಟ್ಟುಕೊಂಡಿರುತ್ತಿದ್ದ. ಜೊತೆಗೆ ಇತ್ತೀಚೆಗೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು ಅರಸಯ್ಯನನ್ನ ಮಾನಸಿಕವಾಗಿ ಮತ್ತಷ್ಟು ಕುಗ್ಗಿಸಿತ್ತು ಎನ್ನಲಾಗಿದೆ.

ಅರಸಯ್ಯ ಬೇಡ ಅಂದ್ರು ಭೂಗತಲೋಕ ಬಿಡಲಿಲ್ಲ ಏಕೆ.?: ಬೆಂಗಳೂರು ಅಂಡರ್ ವಲ್ರ್ಡ್‍ನಲ್ಲಿ ಅರಸಯ್ಯ ಒಬ್ಬ ಬ್ರಿಲಿಯೆಂಟ್ ರೌಡಿ ಅಂತ ರೌಡಿಗಳು ಮಾತ್ರವಲ್ಲ ಸ್ವತಃ ಪೊಲೀಸ್ ಅಧಿಕಾರಿಗಳೇ ಹೇಳುತ್ತಾರೆ. ಆದರೆ ಕಳೆದ ಐದಾರು ವರ್ಷಗಳಿಂದ ಅರಸಯ್ಯ ರೌಡಿಸಂನಲ್ಲಿ ಅಷ್ಟೇನೂ ಆಕ್ಟೀವ್ ಆಗಿರಲಿಲ್ಲ. ಆದ್ರೆ 2013ರಲ್ಲಿ ಬನಶಂಕರಿ ದೇವಾಲಯದ ಮುಂದೆ ಅರಸಯ್ಯ ಹಾಡಹಗಲೇ ರಂಗನಾಥ ಎಂಬಾತನನ್ನು ಅವನ ತಮ್ಮನ ಮುಂದೆಯೇ ಕೊಚ್ಚಿ ಕೊಂದಿದ್ದ. ಅಣ್ಣನ ಕೊಲೆಯನ್ನು ಕಣ್ಣಾರೆ ಕಂಡಿದ್ದ ತಮ್ಮ ಪಳನಿ, ನಾನು ಸಾಯೋ ಮೊದಲು ಅರಸಯ್ಯನ ಸಾವನ್ನು ನೋಡಿಯೇ ತೀರುತ್ತೀನಿ ಅಂತ ಪ್ರತಿಜ್ಞೆ ಮಾಡಿದ್ದ ಎಂದು ಹೇಳಲಾಗಿದ್ದು, ಅರಸಯ್ಯನನ್ನು ಆತನೇ ಕೊಲೆ ಮಾಡಿದನೇ ಅಥವಾ ಬೇರೆಯವರೇನಾದರೂ ಅರಸಯ್ಯನ ಹತ್ಯೆ ನಡೆಸಿ ಹಳೇ ದ್ವೇಷದ ಕತೆ ಸೃಷ್ಠಿಸುತ್ತಿರಬಹುದೇ ಎಂಬುದರ ಬಗ್ಗೆಯೂ ಮಂಡ್ಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಶ್ರೀರಂಗಪಟ್ಟಣ ಪೊಲೀಸರು ಮೂರ್ನಾಲ್ಕು ತಂಡಗಳನ್ನು ರಚಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Translate »