ಸರಗಳ್ಳರ ಬಗ್ಗೆ ಎಚ್ಚರ!
ಮೈಸೂರು

ಸರಗಳ್ಳರ ಬಗ್ಗೆ ಎಚ್ಚರ!

June 28, 2020

ಮೈಸೂರು,ಜೂ.27(ಆರ್‍ಕೆ)-ಮಹಿಳೆಯರ ಚಿನ್ನದ ಸರ ಅಪಹರಣ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಒಂದು ವಾರ ಕಾಲ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ.

ಅದಕ್ಕಾಗಿ ವಿಜಯನಗರ ನಿವಾಸಿಯಾದ ತಾಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಬಿಜೆಪಿ ಮುಖಂಡ ಎಲ್.ಆರ್.ಮಹದೇವಸ್ವಾಮಿ ಅವರು ಒಂದು ಆಟೋ, ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಂ ಉಪಕರಣ ಹಾಗೂ ಸಿಬ್ಬಂದಿ ಒದಗಿಸಿದ್ದಾರೆ ಎಂದು ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಹೆಚ್.ಆರ್. ಬಾಲಕೃಷ್ಣ ತಿಳಿಸಿದ್ದಾರೆ.

ಪ್ರತೀ ದಿನ ಬೆಳಗ್ಗೆಯಿಂದ ಸಂಜೆವರೆಗೂ ಆ ವಾಹನದಲ್ಲಿ ಸಂಚರಿಸಿ ವಿಜಯನಗರ 1, 2, 3 ಮತ್ತು 4ನೇ ಹಂತದ ಜನವಸತಿ ಪ್ರದೇಶ, ಪ್ರಮುಖ ರಸ್ತೆ, ಸರ್ಕಲ್‍ಗಳಲ್ಲಿ ಸರ ಅಪಹರಣಕಾರರ ಬಗ್ಗೆ ಧ್ವನಿವರ್ಧಕದಲ್ಲಿ ಮಾಹಿತಿ ನೀಡಲಾಗುವುದು.

ಮಹಿಳೆಯರು ಬೆಲೆ ಬಾಳುವ ಒಡವೆ ಧರಿಸಿ ಒಬ್ಬಂಟಿಯಾಗಿ ಓಡಾಡಬಾರದು, ಸೀರೆ ಸೆರಗು ಮತ್ತು ವೇಲ್‍ನಿಂದ ಕುತ್ತಿಗೆಯನ್ನು ಮುಚ್ಚಿಕೊಳ್ಳಬೇಕು, ಪಾರ್ಕ್, ರಸ್ತೆ ಬದಿ ವಾಕಿಂಗ್ ಮಾಡುವಾಗ ಅಕ್ಕಪಕ್ಕದಲ್ಲಿ ಓಡಾಡುವ ಅಪರಿಚಿತರ ಬಗ್ಗೆ ಎಚ್ಚರದಿಂದಿರಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಬಡಾವಣೆಗಳಲ್ಲಿ ಅನುಮಾನಾಸ್ಪದ ವಾಗಿ ಓಡಾಡುವವರ ಬಗ್ಗೆ ನಿಗಾವಹಿಸಿ ಅನುಮಾನ ಬಂದಲ್ಲಿ ವಿಜಯನಗರ ಪೊಲೀಸ್ ಠಾಣೆ(0821-2418317) ಅಥವಾ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ(0821-2418339)ಗೆ ಮಾಹಿತಿ ನೀಡಬೇಕೆಂದು ತಿಳಿವಳಿಕೆ ನೀಡಲಾಗುತ್ತಿದೆ.

ಒಂದು ವೇಳೆ ಮಹಿಳೆಯರ ಸರ ಕಿತ್ತು ಪರಾರಿಯಾಗುತ್ತಿರುವುದು ಕಂಡಲ್ಲಿ ಸಾರ್ವಜನಿ ಕರು ತಮ್ಮ ವಾಹನದಲ್ಲಿ ಬೆನ್ನತ್ತಿ ಹೋಗಿ ಹಿಡಿದು ಪೊಲೀಸರಿಗೊಪ್ಪಿಸಬೇಕು ಎಂಬ ಮಾಹಿತಿಯನ್ನೂ ಸಾರ್ವಜನಿಕರಿಗೆ ನೀಡಲಾಗುತ್ತಿದೆ.ಇದೇ ಮಾದರಿಯಲ್ಲಿ ಮೈಸೂರು ನಗರದಾದ್ಯಂತ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಸಾರ್ವಜನಿಕರಿಗೆ ಸರಗಳ್ಳರ ಬಗ್ಗೆ ಅರಿವು ಮೂಡಿಸಿದಲ್ಲಿ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಇನ್‍ಸ್ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.

Translate »