ಭೀಮನ ಅಮಾವಾಸ್ಯೆ ಜಿಲ್ಲಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ
ಚಾಮರಾಜನಗರ

ಭೀಮನ ಅಮಾವಾಸ್ಯೆ ಜಿಲ್ಲಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ

August 12, 2018

ಚಾಮರಾಜನಗರ: – ಭೀಮನ ಅಮಾವಾಸ್ಯೆ ಅಂಗವಾಗಿ ಜಿಲ್ಲಾದ್ಯಂತ ಎಲ್ಲ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು, ಅನ್ನ ಸಂತರ್ಪಣೆ ನಡೆಯಿತು.

ಜಿಲ್ಲೆಯ ಮಲೈಮಹದೇಶ್ವರ ಬೆಟ್ಟದಲ್ಲಿ ಭಕ್ತ ಸಾಗರವೇ ನೆರೆದಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಿಗೆ ಆಗಮಿಸಿದ್ದರು. ಉಘೇ…ಉಘೇ….ಮಾದಪ್ಪ ಎಂದು ಕೂಗುವ ಮೂಲಕ ಮಾದಪ್ಪನ ಮೇಲಿನ ಭಕ್ತಿಯನ್ನು ಸಮರ್ಪಿಸಿದರು.

ಇದಲ್ಲದೇ ಬಿಳಿಗಿರಿ ರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸಂತೇಮರಹಳ್ಳಿಯ ಶ್ರೀ ಮಹದೇಶ್ವರ, ಕಂದಹಳ್ಳಿಯ ಶ್ರೀ ಮಹದೇಶ್ವರ, ಕೂಡ್ಲೂರಿನ ಶ್ರೀ ಮಂಟೇಸ್ವಾಮಿ ಹಾಗೂ ಶ್ರೀ ಮಹದೇಶ್ವರ, ಯಡಬೆಟ್ಟದ ಶ್ರೀ ಮಹದೇಶ್ವರ, ಚಾಮರಾಜನಗರದ ಶ್ರೀ ಆದಿಶಕ್ತಿ, ಶ್ರೀ ಮಂಟೇಸ್ವಾಮಿ, ಶ್ರೀ ಚಾಮರಾಜೇಶ್ವರ, ಕೊಳದ ಗಣಪತಿ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಚಂದಕವಾಡಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನ, ಶ್ರೀ ಶನೇಶ್ವರ ದೇವಸ್ಥಾನ, ಹರದನಹಳ್ಳಿ ಶ್ರೀ ದಿವ್ಯಲಿಂಗೇಶ್ವರ ದೇವಸ್ಥಾನ, ದೇಮಹಳ್ಳಿಯ ಶ್ರೀ ಮಂಟೇಸ್ವಾಮಿ, ತೊರವಳ್ಳಿಯ ಶ್ರೀ ಮಹದೇಶ್ವರ, ಸೋಮವಾರಪೇಟೆಯ ಶಿರಗಳ್ಳಿ ಶ್ರೀ ಲಕ್ಷ್ಮೀದೇವಿ ದೇವಾಲಯ ಹಾಗೂ ಬೊಮ್ಮೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ವಿಶೇಷ ಪೂಜಾ ಕಾರ್ಯಗಳು ಜರುಗಿದವು.

ಬೆಳಿಗ್ಗೆಯಿಂದಲೇ ತಂಡೋಪ ತಂಡವಾಗಿ ಸಾವಿರಾರು ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ತಮ್ಮ ಆರಾಧ್ಯ ದೇವರಿಗೆ ನಮಿಸಿದರು. ಬಹುತೇಕ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ನಡೆಯಿತು.

ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಾಲಯಗಳನ್ನು ಸುಣ್ಣ-ಬಣ್ಣ ಹೊಡೆದು, ಬಣ್ಣ ಬಣ್ಣ ಹೂಗಳಿಂದ, ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಧ್ವನಿ ವರ್ಧಕವನ್ನು ಬಳಸಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ಬ್ಲಾಂಕೆಟ್‍ಗಳನ್ನು ನಿರ್ಮಿಸಿ ಸರತಿ ಸಾಲಿನಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಭಕ್ತ ಸಮೂಹವೇ ನೆರೆದಿತ್ತು.

ಹನೂರು ವರದಿ: ಹನೂರು ಸಮೀಪದ ಮಲೆಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಪೂಜಾ ಕೈಂಕರ್ಯಗಳು ಸಂಭ್ರಮದಿಂದ ನಡೆಯಿತು.

ಸಾಗರೋಪಾದಿಯಲ್ಲಿ ಆಗಮಿಸಿದ್ದ ಅಸಂಖ್ಯಾತ ಭಕ್ತರು ಮಾದಪ್ಪನನ್ನು ಕಣ್ತುಂಬಿಕೊಂಡರು. ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದರಿಂದ ಪ್ರಾಧಿಕಾರವು ಅಲ್ಲಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲ ಸೌಲಭ್ಯವನ್ನು ಕಲ್ಪಸಿತ್ತು. ಅಲ್ಲದೆ ಎರಡು ಕಡೆ ಪ್ರತ್ಯೇಕ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಹರಕೆ ಹೊತ್ತ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಅಲ್ಲಲ್ಲಿ ಅನ್ನದಾನ ಮಾಡಲಾಗುತಿತ್ತು.

ಪ್ರಾಧಿಕಾರವು ಅಂತರ ಗಂಗೆಯನ್ನು ಶುದ್ಧಿಕರಿಸಿದ್ದು ಮುಡಿಸೇವೆ ನಂತರ ಭಕ್ತರು ಅಂತರ ಗಂಗೆಯಲ್ಲಿ ಮಿಂದು ಪುನೀತರಾದರು. ಭೀಮನ ಅಮಾವಾಸ್ಯೆ ಹಿನ್ನಲೆ ಬೆಟ್ಟಕ್ಕೆ ಎರಡು ದಿನಗಳ ಮುಂಚೆಯೇ ಆಗಮಿಸಿದ್ದ ಭಕ್ತರು ಶುಕ್ರವಾರ ಇಡೀ ರಾತ್ರಿ ರಂಗಮಂದಿರ ಮುಂಭಾಗ ಮಹದೇಶ್ವರ ಭಕ್ತಗೀತೆಗಳನ್ನು ಹಾಡಿದರು.

ಪ್ರಾಧಿಕಾರವೂ ಅಪಾರಧ ಕೃತ್ಯಗಳನ್ನು ತಡೆಗಟ್ಟಲು ಇದೇ ಮೊದಲ ಭಾರಿಗೆ ಕ್ಷೇತ್ರದಾದ್ಯಂತ ಸಿಸಿ ಕ್ಯಾಮೆರವನ್ನು ಅಳವಡಿಸಿತ್ತು. ಅಲ್ಲದೆ ಹೆಚ್ಚಿನ ಭದ್ರತೆಗಾಗಿ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಿಂದ ಹಾಗೂ ಜಿಲ್ಲೆಯ ವಿವಿಧ ಠಾಣೆಗಳಿಂದ ಹೆಚ್ಚಿನ ಸಿಬ್ಬಂದಿಯನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು.

Translate »