ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ  ವಾಹನ ಸಂಚಾರ ನಿಷೇಧಕ್ಕೆ ನಿರ್ಧಾರ
ಮೈಸೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ  ವಾಹನ ಸಂಚಾರ ನಿಷೇಧಕ್ಕೆ ನಿರ್ಧಾರ

August 1, 2018

ಮಲೆ ಮಹದೇಶ್ವರಬೆಟ್ಟ:  ವನ್ಯಜೀವಿ ಗಳ ಸಂರಕ್ಷಣೆ ದೃಷ್ಟಿಯಿಂದ ಶೀಘ್ರದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಸರ್ಕಾರದ ಅನುಮತಿ ಪಡೆದು ಬಂಡಿಪುರ ಅರಣ್ಯದಲ್ಲಿ ಜಾರಿಗೊಳಿಸಿರುವಂತೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗುತ್ತಿದೆ.

ಮಲೆ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದಲ್ಲಿ ಹುಲಿ, ಚಿರತೆ, ಆನೆ ಸೇರಿದಂತೆ ವಿವಿಧ ವನ್ಯಜೀವಿಗಳಿದ್ದು, ಅರಣ್ಯ ಇಲಾಖೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ವನ್ಯಧಾಮವೆಂದು ಈಗಾಗಲೇ ಘೋಷಿಸಿ, ವನ್ಯಸಂಪತ್ತಿನ ಸಂರಕ್ಷಣೆಗೆ ಕ್ರಮ ಕೈಗೊಂಡಿದೆ. ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಆಗಿರುವ ಮಹದೇಶ್ವರಬೆಟ್ಟಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ. ದಿನೇ ದಿನೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವನ್ಯಜೀವಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರುವ ರಾಜ್ಯ ಅರಣ್ಯ ಇಲಾಖೆ, ಕಳೆದ ಎರಡು ತಿಂಗಳ ಹಿಂದೆ ಕೊಳ್ಳೇಗಾಲ ವಲಯದ ಡಿಸಿಎಫ್ ವಿ.ಏಡುಕೊಂಡಲು ಅವರಿಗೆ ಪತ್ರ ಬರೆದು ಮಹದೇಶ್ವರಬೆಟ್ಟಕ್ಕೆ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸುವ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈಗಾಗಲೇ ತಾಳುಬೆಟ್ಟ-ಮಹದೇಶ್ವರಬೆಟ್ಟ, ಮಹದೇಶ್ವರಬೆಟ್ಟ-ಮೆಟ್ಟೂರು, ತಾಳುಬೆಟ್ಟ-ಪೊನ್ನಾಚಿ ಹಾಗೂ ಕಾವೇರಿ ವನ್ಯಧಾಮದ ಮೂಲಕ ಹೊಗೇನಕಲ್‍ಗೆ ಹೋಗುವ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಸಂಸ್ಥೆ ವತಿಯಿಂದ ಬೈಲೂರು ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳ ಸರ್ವೇ ನಡೆಸಿ, ಅಂಕಿ ಅಂಶಗಳನ್ನು ದಾಖಲಿಸಿ ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ.

ಶೀಘ್ರದಲ್ಲಿಯೇ ಅರಣ್ಯ ಇಲಾಖೆ ವತಿಯಿಂದಲೂ ಸರ್ವೇ ನಡೆಸಿ ದಿನವಿಡೀ ಸಂಚರಿಸುವ ವಾಹನಗಳ ಸರ್ವೇ ನಡೆಸಿ, ಇವುಗಳಲ್ಲಿ ಸಾರ್ವಜನಿಕ ವಾಹನ (ಸಾರಿಗೆ ಬಸ್, ಖಾಸಗಿ ಬಸ್), ಪ್ರವಾಸಿ ವಾಹನ, ವಾಣಿಜ್ಯ ವಾಹನ, ದ್ವಿಚಕ್ರ ವಾಹನ ಹೀಗೆ ಅಂಕಿ ಅಂಶ ಕಲೆ ಹಾಕಲಾಗುತ್ತದೆ.

ಸಭೆ: ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಇಲಾಖೆ, ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ದೇವಾಲಯ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ವಾಹನ ಸಂಚಾರ ನಿಷೇಧದ ಅಗತ್ಯತೆ, ಸಾಧಕ-ಬಾಧಕ ಕುರಿತಂತೆ ಚರ್ಚಿಸಲಾಗುತ್ತದೆ. ನಂತರ ಪಿಸಿಸಿಎಫ್ ಕಚೇರಿಗೆ ವರದಿ ಸಲ್ಲಿಸಿ, ಸರ್ಕಾರದ ಅನುಮತಿ ಪಡೆಯಲಾಗುತ್ತದೆ.

ಎಲ್ಲೆಲ್ಲಿ: ತಾಳುಬೆಟ್ಟ-ಮಹದೇಶ್ವರ ಬೆಟ್ಟ, ತಾಳುಬೆಟ್ಟ-ಪೊನ್ನಾಚಿ, ಮಹದೇಶ್ವರ ಬೆಟ್ಟ-ಮೆಟ್ಟೂರು (ತಮಿಳುನಾಡು) ಹಾಗೂ ಕಾವೇರಿ ವನ್ಯಧಾಮದ ಮೂಲಕ ಹಾದು ಹೋಗುವ ಹೊಗೇನಕಲ್ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಮಹದೇಶ್ವರ ಬೆಟ್ಟ, ಪೊನ್ನಾಚಿ ಹಾಗೂ ಮೆಟ್ಟೂರು ರಸ್ತೆಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿದರೆ, ಕಾವೇರಿ ವನ್ಯಧಾಮದ ಮೂಲಕ ಹೋಗುವ ಹೊಗೇನಕಲ್ ರಸ್ತೆಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚಾರಕ್ಕೆ ಕಡಿವಾಣವಿರುತ್ತದೆ. ಅಲ್ಲದೆ ಬೈಲೂರು ಮೂಲಕ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿಯೂ ರಾತ್ರಿ ಸಂಚಾರ ನಿಷೇಧವಾಗಲಿದೆ.

ಜಾಗೃತಿ: ವಾಹನ ಸಂಚಾರ ನಿಷೇಧ ಮಾಡುವ 10 ದಿನದ ಮೊದಲು ತಾಳುಬೆಟ್ಟ, ಮೆಟ್ಟೂರು ಚೆಕ್‍ಪೋಸ್ಟ್, ಕಾವೇರಿ ವನ್ಯಧಾಮದ ಬಳಿ ವಾಹನ ಸವಾರರಿಗೆ ಭಿತ್ತಿಪತ್ರ ನೀಡಿ ಮಾಹಿತಿ ನೀಡಲಾಗುತ್ತದೆ. ಎರಡೂ ರಾಜ್ಯಗಳ ಸಾರಿಗೆ ಬಸ್‍ಗಳು, ಖಾಸಗಿ ಬಸ್‍ಗಳ ಚಾಲಕರು ಹಾಗೂ ನಿರ್ವಾಹಕರಿಗೂ ಮಾಹಿತಿ ನೀಡಲಾಗುತ್ತದೆ. ಆ ನಂತರವಷ್ಟೆ ಕಟ್ಟುನಿಟ್ಟಾಗಿ ಸಂಚಾರ ನಿಷೇಧಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

Translate »