ಮೈಸೂರು: ಮೂರನೇ ಆಷಾಢ ಶುಕ್ರವಾರ ಆಗಸ್ಟ್ 3ರಂದು ರಾತ್ರಿ 8ಗಂಟೆಗೆ ಮೈಸೂರಿನ ಲಲಿತಮಹಲ್ ಹೆಲಿ ಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಸಂಚಾರ ಸ್ಥಗಿತ ಗೊಳ್ಳಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವ ಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಪ್ರಸಾದ್ ತಿಳಿಸಿದ್ದಾರೆ.
3ನೇ ಆಷಾಢ ಶುಕ್ರವಾರ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ನಡೆಯುವುದರಿಂದ ವಿಶೇಷ ಪೂಜೆ ನಡೆಯುವ ಕಾರಣ, ಆಗಸ್ಟ್ 3ರಂದು ಬೆಳಿಗ್ಗೆ 8ರಿಂದ ರಾತ್ರಿ 10ಗಂಟೆವರೆಗೆ ದರ್ಶನದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳ ಅನುಕೂಲಕ್ಕಾಗಿ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಬೆಳಿಗ್ಗೆ 6.30ರಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಉಚಿತ ಬಸ್ ಸೌಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.
ಶಾಲಿವಾಹನ ಶಕ 1940ನೇ ಶ್ರೀ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನೆ ಆಷಾಢ ಕೃಷ್ಣ ಪಕ್ಷದ ಷಷ್ಠಿ ಉಪರಿ ಸಪ್ತಮಿ, ರೇವತಿ ನಕ್ಷತ್ರದಲ್ಲಿ ಆಗಸ್ಟ್ 8 ರಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ಪ್ರಯುಕ್ತ ಅಂದು ಪ್ರಾತಃಕಾಲ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಬೆಳಿಗ್ಗೆ 9.30 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದೂ ಪ್ರಸಾದ್ ತಿಳಿಸಿದ್ದಾರೆ. ಬೆಳಿಗ್ಗೆ 10.25 ಗಂಟೆಗೆ ಅಮ್ಮನವರಿಗೆ ಚಿನ್ನದ ಪಲ್ಲಕ್ಕಿ ಉತ್ಸವ ಮಂಟಪೋತ್ಸವ, ಪ್ರಸಾದ ವಿನಿಯೋಗವಿದೆ. ರಾತ್ರಿ 8.30ಕ್ಕೆ ಚಾಮುಂಡೇಶ್ವರಿಗೆ ಉತ್ಸವ ಫಲಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ ಹಾಗೂ ರಾಷ್ಟ್ರಾಶೀರ್ವಾದ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.