ಸಂಸದ ಆರ್.ಧ್ರುವನಾರಾಯಣ್ ಹುಟ್ಟುಹಬ್ಬ:  ಉದ್ಯೋಗ ಮೇಳದಲ್ಲಿ 2170 ಜನರಿಗೆ ಉದ್ಯೋಗ
ಚಾಮರಾಜನಗರ

ಸಂಸದ ಆರ್.ಧ್ರುವನಾರಾಯಣ್ ಹುಟ್ಟುಹಬ್ಬ:  ಉದ್ಯೋಗ ಮೇಳದಲ್ಲಿ 2170 ಜನರಿಗೆ ಉದ್ಯೋಗ

August 1, 2018
  • 91 ಕಂಪನಿಗಳು ಭಾಗಿ
  • 3250 ಮಂದಿ ನೋಂದಣಿ
  • ದೃಷ್ಟಿದೋಷ ಮಕ್ಕಳಿಗೆ ಕನ್ನಡಕ ವಿತರಣೆ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ್ ಅವರ 57ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉದ್ಯೋಗಮೇಳ ಅಭೂತ ಪೂರ್ವ ಯಶಸ್ಸು ಕಂಡಿತು.

ಇಲ್ಲಿನ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇರುವ ತಾಲೂಕು ಕಚೇರಿ ಪಕ್ಕದ ವಿಶಾಲ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಹಾಗೂ ತಪಾಸಣೆಗೈದ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು.

ಇಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಹೋಂಡಾ ಕಂಪನಿ, ನವ ಭಾರತ್ ಫರ್ಟಿಲೈಸರ್ಸ್, ಟಿವಿಎಸ್ ಕಂಪನಿ, ಎಲ್‍ಐಸಿ ಆಫ್ ಇಂಡಿಯಾ ಸೇರಿದಂತೆ ಸುಮಾರು 91 ಕಂಪನಿಗಳು ಭಾಗವಹಿ ಸಿದ್ದವು. ಉದ್ಯೋಗ ಬಯಸಿ ಸುಮಾರು 3250 ಮಂದಿ ಹೆಸರನ್ನು ನೋಂದಾಯಿಸಿ ಕೊಂಡರು. ಇದರಲ್ಲಿ 2170 ಮಂದಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡ ಲಾಯಿತು ಎಂದು ಉದ್ಯೋಗ ಮೇಳದ ಸಂಯೋಜಕ ಕುಮಾರ್ ಉಪ್ಪಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಬೃಹತ್ ಉದ್ಯೋಗಮೇಳ ಮತ್ತು ತಪಾಸಣೆಗೈದ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಾಟಾಳ್ ಸೂರ್ಯ ಸಿಂಹಾಸನ ಮಠದ ಶ್ರೀ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂಸದ ಆರ್.ಧ್ರುವನಾರಾಯಣ್ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಯಾವುದೇ ಆಡಂಬರ ಇಲ್ಲದೆ ಸರಳ, ಸಜ್ಜನಿಕೆ ರಾಜ ಕಾರಣಿಯಾಗಿದ್ದಾರೆ ಎಂದು ಹೇಳಿದರು.

ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಬಸವಭವನ, ಅಂಬೇಡ್ಕರ್‍ಭವನ, ವಾಲ್ಮೀಕಿ, ಉಪ್ಪಾರಭವನ ಸೇರಿದಂತೆ ಎಲ್ಲ ವರ್ಗದ ಸಮುದಾಯದವರಿಗೂ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಶಾಲಾ, ಕಾಲೇಜು, ರಸ್ತೆ ಸೇರಿದಂತೆ ಕ್ಷೇತ್ರ ವನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಇವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳ ಬಳಗ ಕಳೆದ ವರ್ಷ ಸಾಮೂಹಿಕ ವಿವಾಹ ಏರ್ಪಡಿಸಿ ದ್ದರು. ಈ ವರ್ಷ ನಾನಾ ಕಂಪನಿಗಳ ಜತೆ ಒಡನಾಟವಿಟ್ಟುಕೊಂಡು ಉದ್ಯೋಗ ಮೇಳ ಹಮ್ಮಿಕೊಂಡು ಜಿಲ್ಲೆಯ ನಿರು ದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.

ಮುಖ್ಯ ಭಾಷಣಕಾರರಾಗಿದ್ದ ಸಾಹಿತಿ ಮಲೆಯೂರುಗುರುಸ್ವಾಮಿ ಮಾತನಾಡಿ, ರಾಜಕಾರಣಿಗಳು ಸರಳ, ಸಜ್ಜನಿಕೆ, ಪ್ರಾಮಾಣಿಕತೆಗೆ ಆದ್ಯತೆ ನೀಡಬೇಕು. ಇದೆ ಅವರನ್ನು ಬೆಳೆಸುತ್ತದೆ. ರಾಜಕಾರಣಿಗಳು ತಮ್ಮ ಅಭಿ ಮಾನಿಗಳ ಮೇಲೆ ಅಭಿಮಾನ ಇಟ್ಟುಕೊಳ್ಳ ಬೇಕು. ಜನಸೇವೆಯಲ್ಲಿ ನಿರತರಾಗಬೇಕು. ಸಂಸದ ಆರ್.ಧ್ರುವನಾರಾಯಣ್ ಅವರಲ್ಲಿ ಮೇಲಿನ ಅಂಶಗಳು ಇರುವ ಕಾರಣದಿಂದ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಮಾಜಮುಖಿ ಕೆಲಸ ಮಾಡುವ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಶಾಸಕ ಎಸ್.ಜಯಣ್ಣ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

166 ಉಚಿತ ಕನ್ನಡಕ ವಿತರಣೆ: ಸಂಸದ ಆರ್.ಧ್ರುವನಾರಾಯಣ್‍ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಬಳಗವು ಹಮ್ಮಿಕೊಂಡಿದ್ದ ಶಾಲಾಮಕ್ಕಳ ದೃಷ್ಟಿದೋಷ ಶಿಬಿರದಲ್ಲಿ ಆಯ್ಕೆಯಾದ 166 ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.

ನಳಂದ ಬುದ್ದ ವಿಹಾರದ ಭೋದಿದತ್ತ ಬಂತೇಜಿ, ರೈಟ್‍ರವೆ ಮೋಹನ್‍ಮನೋ ರಾಜ್, ಮದೀನಾ ಮಸ್ಜಿದ್ ಇಮಾಮ್ ಸೈಯದ್ ಮುಖ್ತರ್ ಹಾಫೀಜ್ ಎ ಖುರಾನ್, ಮಾಜಿ ಶಾಸಕ ಎಸ್.ಬಾಲರಾಜ್, ಉದ್ಯಮಿ ಶ್ರೀಕಂಠ ಮಾತನಾಡಿದರು. ಸಮಾರಂಭ ದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಜೆ.ಬಿ.ಕಾವೇರಿ ಯಪ್ಪ, ಜಿಪಂ ಅಧ್ಯಕ್ಷೆ ಶಿವಮ್ಮಕೃಷ್ಣ, ಉಪಾಧ್ಯಕ್ಷ ಜೆ.ಯೋಗೇಶ್, ನಗರಸಭೆ ಅಧ್ಯಕ್ಷೆ ಶೋಭಪುಟ್ಟಸ್ವಾಮಿ, ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಡಾ. ಅನಿಲ್‍ಕುಮಾರ್‍ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ. ಸದಾಶಿವ ಮೂರ್ತಿ, ಕೆರೆಹಳ್ಳಿನವೀನ್, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮಾಜಿ ಅಧ್ಯಕ್ಷ ಆಲ್ದೂರುರಾಜಶೇಖರ್, ತಾ.ಪಂ.ಮಾಜಿ ಅಧ್ಯಕ್ಷ ಎಚ್.ವಿ.ಚಂದ್ರು, ಕಾಗಲವಾಡಿಚಂದ್ರು, ಉಪಾಧ್ಯಕ್ಷ ಪ್ರಕಾಶ್, ರಾಜು, ಕುಮಾರ್‍ಉಪ್ಪಾರ್ ಇತರರು ಹಾಜರಿದ್ದರು.

ಉದ್ಯೋಗಮೇಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗ ಅಭ್ಯರ್ಥಿಗಳು ಭಾಗವಹಿಸಿದ್ದರು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯ ಕಡೆಯಿಂದ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.

Translate »