ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಸ್.ಎ.ರಾಮದಾಸ್
ಮೈಸೂರು,ಫೆ.13(ಪಿಎಂ)- ಮೈಸೂರಿನ ದೊಡ್ಡ ಕೆರೆ ಮೈದಾನದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಆವರಣದಲ್ಲಿ ಫೆ.19ರಂದು ಆಯೋಜಿಸಿರುವ ಉದ್ಯೋಗ ಮೇಳ ಸಂಬಂಧ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಹಾಗೂ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಉದ್ಯೋಗ ಮೇಳ ನಡೆಸುತ್ತಿರುವ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವಿವಿಧ ಇಲಾಖೆ ಅಧಿಕಾರಿ ಗಳೊಂದಿಗೆ ಪರಿಶೀಲನೆ ನಡೆಸಿದ ಶಾಸಕರು, ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಉದ್ಯೋಗ ಮೇಳ ನಡೆಯಲಿದೆ. ಕೇವಲ ಕೈಗಾರಿಕಾ ಸಂಸ್ಥೆಗಳ ಮಾತ್ರವಲ್ಲದೆ, ವಿವಿಧ ಸೇವಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಮೇಳದಲ್ಲಿ ಪಾಲ್ಗೊಳ್ಳವಂತೆ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಹುತೇಕ ಉದ್ಯೋಗಾಕಾಂಕ್ಷಿಗಳು ನಾಲ್ಕಾರು ಬಾರಿ ಸಂದರ್ಶನ ಎದುರಿಸಿದರೂ ತಾವು ಸಫಲತೆ ಕಾಣಲಾಗು ತ್ತಿಲ್ಲ ಎಂದು ಹೇಳಿಕೊಳ್ಳುವುದನ್ನು ಕೇಳುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ವಿವಿಧ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಮೇಳ ದಲ್ಲಿ ವೇದಿಕೆ ಕಲ್ಪಿಸಲಾಗುವುದು. ಮೇಳದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.
ಇದರ ಹೊರತಾಗಿ ಕಾರ್ಮಿಕರು ಎದುರಿಸುತ್ತಿರುವ ಪಿಎಫ್, ಇಎಸ್‍ಐ ಮೊದಲಾದ ಸಮಸ್ಯೆಗಳ ಪರಿ ಹಾರದ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವುದಾಗಿ ತಿಳಿಸಿದರು. ಉದ್ಯೋಗ ಇಲಾಖೆ ಅಧಿಕಾರಿಗಳಾದ ರಾಣ , ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಓ ಗಿರೀಶ್, ಕಾರ್ಮಿಕ ಇಲಾಖೆಯ ಹಿರಿಯ ಇನ್ಸ್‍ಪೆಕ್ಟರ್‍ಗಳಾದ ರವಿ, ನಿಖಿಲಾಚಂದ್ರ, ವೀಣಾ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಶಿವಣ್ಣ, ಪಾಲಿಕೆ ವಲಯ-1ರ ಅಭಿವೃದ್ಧಿ ಅಧಿಕಾರಿ ಶುಶ್ರುತ್, ನಜರ್‍ಬಾದ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಶ್ರೀಕಾಂತ್, ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾದ ಸುಬ್ರಹ್ಮಣ್ಯ, ಮುಖಂಡ ಶ್ರೀಹರಿ, ಸೇಫ್ ವೀಲ್ಸ್ ಟ್ರಾವೆಲ್ಸ್‍ನ ಬಿ.ಎಸ್.ಪ್ರಶಾಂತ್, ಪಾಲಿಕೆ ಸದಸ್ಯೆ ಛಾಯಾದೇವಿ ಮತ್ತಿತರರು ಹಾಜರಿದ್ದರು.