ತಾಂಡವಪುರ: ನಂಜನಗೂಡು ತಾಲೂಕು ತಾಂಡವಪುರ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶನಿವಾರ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ನಿರುದ್ಯೋಗಿ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ವರುಣಾ ಕ್ಷೇತ್ರದ ಶಾಸಕ ಡಾ.ಎಸ್.ಯತೀಂದ್ರ ಹೇಳಿದರು.
ಉದ್ಯೋಗ ಮೇಳದ ವೇದಿಕೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಹಂತ ಹಂತವಾಗಿ ಈ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಉದ್ಯೋಗ ಮೇಳಕ್ಕೆ ಕೊಳ್ಳೇಗಾಲದ ಅಕ್ಷರ ಫೌಂಡೇಶನ್ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಕರಾಗಿದ್ದು, ಈ 100ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುತ್ತಿವೆ. ಉದ್ಯೋಗಾರ್ಥಿಗಳು ಸ್ವವಿವರದೊಂದಿಗೆ, ಸೂಕ್ತ ದಾಖಲಾತಿಗಳ 10 ಸೆಟ್ ಜೆರಾಕ್ಸ್ ಪ್ರತಿಯನ್ನು ತರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಲಕ್ಷ್ಮಿ ಬಿ.ಪಿ.ಮಹದೇವು, ಕಾಂಗ್ರೆಸ್ ಮುಖಂಡ ಟಿ.ಕೆ.ಮಾಲೇಗೌಡ, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖಂಡ ಕೆ.ಎಸ್.ಹುಂಡಿ ಕೆ.ಜೆ.ಯೋಗೇಶ್, ಮರಳೂರು ಗ್ರಾ.ಪಂ ಅಧ್ಯಕ್ಷ ಬಿ.ಎಂ.ಮಹೇಶ್ ಕುಮಾರ್, ಗ್ರಾ.ಪಂ ಸದಸ್ಯ ಪಿ.ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು.