ಮೈಸೂರು-ನರಸೀಪುರ ರಸ್ತೆ ಚತುಷ್ಪಥ-ಮುಂದಿನ ಗುರಿ: ಸಂಸದ ಧ್ರುವನಾರಾಯಣ
ಮೈಸೂರು

ಮೈಸೂರು-ನರಸೀಪುರ ರಸ್ತೆ ಚತುಷ್ಪಥ-ಮುಂದಿನ ಗುರಿ: ಸಂಸದ ಧ್ರುವನಾರಾಯಣ

February 22, 2019

ತಿ.ನರಸೀಪುರ: ಮೈಸೂರು-ನರಸೀಪುರ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ, ಕೇಂದ್ರದಿಂದ ಅನುದಾನ ತರುವುದು ಹಾಗೂ ವಿದ್ಯಾವಂತ ಯುವ ಸಮೂಹಕ್ಕೆ ಉದ್ಯೋಗಕ್ಕೆ ಸಹಕಾರಿಯಾಗುವಂತಹ ಕೌಶಲ ತರಬೇತಿ ಕಲ್ಪಿಸಿಕೊಡಲು ಕಾರ್ಯಕ್ರಮಗಳನ್ನು ರೂಪಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.

ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 45 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ 419 ಕೋಟಿ ರೂ. ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ 212ರ ಮೈಸೂರು ಮುಖ್ಯರಸ್ತೆ ದ್ವಿಪಥ ರಸ್ತೆಯಾಗಿ ಅಭಿವೃದ್ಧಿಯಾಗಿದೆ. ಮುಂದೆ ಮೈಸೂರು-ಬೆಂಗಳೂರು ರಸ್ತೆ ಮಾದರಿಯಲ್ಲೇ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಆಲೋಚನೆಯಿದೆ ಎಂದರು.

ಯುವಕ, ಯುವತಿಯರಿಗೆ ಉದ್ಯೋಗ ಪಡೆಯಲಿಕ್ಕೆ ಕೌಶಲಾಭಿವೃದ್ಧಿ ಮುಖ್ಯವಾದ್ದರಿಂದ ಕೌಶಲ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಪ.ಜಾತಿ ಸಮುದಾಯಗಳು ವಾಸವಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ ಉತ್ತಮವಾಗಿದೆ. ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ ಸೇರಿದಂತೆ ಎಲ್ಲಾ ವಿಧವಾದ ಅಭಿವೃದ್ಧಿ ಕಾಮಗಾರಿಗಳಿಗೆ 45 ಲಕ್ಷ ರೂಗಳ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ. ಕೈಬಿಟ್ಟು ಹೋಗಿರುವ ಕಾಮಗಾರಿಗಳನ್ನು ಸೇರ್ಪಡೆ ಮಾಡಿಕೊಂಡು ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಗ್ರಾಮಸ್ಥರು ಖುದ್ದಾಗಿ ನಿಂತು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆರ್.ಧ್ರುವನಾರಾಯಣ ಸಲಹೆ ನೀಡಿದರು.ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಎಸ್.ಮಹದೇವಸ್ವಾಮಿ ಮಾತನಾಡಿದರು.

ಜಿ.ಪಂ ಸದಸ್ಯ ಮಂಜುನಾಥನ್, ತಾ.ಪಂ ಅಧ್ಯಕ್ಷ ಆರ್.ಚಲುವರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ತಾ.ಪಂ ಸದಸ್ಯ ಕೆಬ್ಬೆ ರಂಗಸ್ವಾಮಿ, ತಾಪಂ ಇಓ ಬಿ.ಎಸ್.ನಂಜೇಶ್, ಸಮಾಜ ಕಲ್ಯಾಣಾಧಿಕಾರಿ ಕೆ.ಎನ್.ಸುಧಾಮಣಿ, ಜಿ.ಪಂ ಎಇಇ ಜೆ.ಎಂ.ಸುರೇಶ, ಗ್ರಾ.ಪಂ ಅಧ್ಯಕ್ಷೆ ಸುವರ್ಣ ನಿಂಗಯ್ಯ, ಉಪಾಧ್ಯಕ್ಷ ಆರ್.ರಾಮು, ಹೆಚ್.ಅಣ್ಣಯ್ಯಸ್ವಾಮಿ, ಕೆಬ್ಬೆ ನಾಗರಾಜು, ಬಿ.ಎಸ್.ಮಹೇಶ, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಅಮ್ಜದ್ ಖಾನ್, ಸಿ.ಉಮೇಶ, ಗ್ರಾ.ಪಂ ಸದಸ್ಯರಾದ ಎಂ.ಮಹೇಶ, ಎ.ನಾಗರಾಜು, ಪುಟ್ಟಸ್ವಾಮಿ, ಎಸ್.ಎಂ.ಚಿನ್ನಸ್ವಾಮಿ, ಎನ್.ಮಹೇಶ ಮತ್ತಿತರರಿದ್ದರು.

Translate »