ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಲೇಬಾರದು
ಮೈಸೂರು

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಲೇಬಾರದು

February 14, 2021

ಪಿರಿಯಾಪಟ್ಟಣ, ಫೆ.13(ವೀರೇಶ್)-ರಾಜಕೀಯ ಹಸ್ತ ಕ್ಷೇಪವಿದ್ದರೆ ಸಹಕಾರಿ ಸಂಘಗಳು ಉಳಿಯಲು ಸಾಧ್ಯವೇ ಇಲ್ಲ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡ ಇಂದಿಲ್ಲಿ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣದಲ್ಲಿ ಶನಿವಾರ ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರ ಸಂಘಗಳು ಏರ್ಪಡಿಸಿದ್ದ ಸಮಾ ರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಲೇ ಬಾರದು ಎಂದು ಹೇಳಿದರು.

ಸಹಕಾರಿ ಕಾರ್ಯಕ್ರಮಗಳು ಯಾವುದೇ ಜಾತಿ, ಪಕ್ಷ ಹಾಗೂ ಧರ್ಮ ರಹಿತವಾಗಿ ನಡೆಯುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳವರು ಹಾಗೂ ಎಲ್ಲಾ ಜಾತಿಯವರು ಭಾಗವಹಿಸುತ್ತಾರೆ. ಅದುವೇ ಸಹ ಕಾರಿ ತತ್ವ ಎಂದು ಹೇಳಿದ ಅವರು, ಸಹಕಾರ ಸಂಘ ಗಳು ಪಕ್ಷ, ಜಾತಿ, ಧರ್ಮ ನೋಡಿ ಸಾಲ ಕೊಡುವು ದಿಲ್ಲ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಾಲ ವಿತರಿಸ ಲಾಗುತ್ತದೆ. ಸಹಕಾರಿ ಸಮಾರಂಭಗಳಲ್ಲೂ ರಾಜಕೀಯ ನುಸುಳುವಿಕೆ ಇಲ್ಲ. ಈ ಸಮಾರಂಭದಲ್ಲೂ ಎಲ್ಲಾ ರಾಜ ಕೀಯ ಪಕ್ಷದವರೂ ಇದ್ದಾರೆ ಎಂದು ಹೇಳಿದರು.

ಯುವಕರು ಯಾವುದಾದರೂ ಅಧಿಕಾರಕ್ಕೇರಿದರೆ ಸಹಜವಾಗಿಯೇ ಟೀಕೆ-ಟಿಪ್ಪಣಿಗಳು ಹಾಗೂ ಕುಹಕವಾದ ಮಾತುಗಳು ಕೇಳಿಬರುತ್ತವೆ. ನಾನು 22ನೇ ವರ್ಷಕ್ಕೆ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕನಾದಾಗ, 31ನೇ ವರ್ಷಕ್ಕೆ ಅಧ್ಯಕ್ಷನಾದಾಗ ಹಲವಾರು ಜನ ಟೀಕೆ ಮಾಡಿದರು. ಈ ಸಣ್ಣ ಹೈದನಿಂದ ಏನು ಮಾಡಲಾಗುತ್ತದೆ ಎಂದು ಕುಹಕವಾಡಿದರು. ಆದರೆ ಬ್ಯಾಂಕ್‍ನಲ್ಲಿ ನಡೆದಿದ್ದ ಸುಮಾರು 20 ಕೋಟಿ ರೂ. ಅವ್ಯವಹಾರವನ್ನು ನಾನು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದ ವೇಳೆ ಬಯಲಿಗೆಳೆದೆ. ಅದರ ಬಗ್ಗೆ ಸಿಐಡಿ ತನಿಖೆಯೂ ನಡೆಯಿತು. ನಂತರ ನಡೆದ ಚುನಾವಣೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಸಹಕಾರಿಗಳು ಆಡಳಿತ ಮಂಡಳಿ ಬದಲಾವಣೆ ಬಯಸಿ ನಮ್ಮನ್ನು ಗೆಲ್ಲಿಸಿದರು. ಎಂಸಿಡಿಸಿಸಿ ಬ್ಯಾಂಕ್ ಅಸ್ತಿತ್ವಕ್ಕೆ ಬಂದ 62 ವರ್ಷದ ಅವಧಿಯಲ್ಲಿ ರೈತರಿಗೆ 622 ಕೋಟಿ ರೂ. ಸಾಲ ನೀಡಲಾಗಿತ್ತು. ನಾನು ಅಧ್ಯಕ್ಷನಾಗಿ ಕೇವಲ ಎರಡೇ ವರ್ಷದಲ್ಲಿ ಹೆಚ್ಚುವರಿಯಾಗಿ 390 ಕೋಟಿ ರೂ. ಸೇರಿ ರೈತರಿಗೆ ನೀಡುವ ಸಾಲದ ಮೊತ್ತವನ್ನು 1003 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿದ್ದೇನೆ. ಪಿರಿಯಾಪಟ್ಟಣ ತಾಲೂ ಕಿನಲ್ಲಿ 135 ಕೋಟಿ ರೂ. ಸಾಲ ನೀಡಲಾಗುತ್ತಿತ್ತು. ಹೆಚ್ಚು ವರಿಯಾಗಿ 50 ಕೋಟಿ ರೂ. ಸೇರಿಸಿ ಒಟ್ಟು 175 ಕೋಟಿ ರೂ. ಸಾಲ ನೀಡಲಾಗಿದೆ. ಇದನ್ನು ನಾನು ಸಾಧನೆ ಎಂದು ಹೇಳುವುದಿಲ್ಲ. ಸೇವೆ ಎಂದು ಹೇಳಬಯಸು ತ್ತೇನೆ. ಯುವಕರ ಬಗ್ಗೆ ಟೀಕೆ-ಟಿಪ್ಪಣಿ ಮಾಡಿದವರಿಗೆ ಹಾಗೂ ಕುಹಕವಾಡಿದವರಿಗೆ ಸೇವೆಯ ಮೂಲಕ ಉತ್ತರ ಕೊಟ್ಟಿದ್ದೇನೆ. ಮೈಮುಲ್ ನಿರ್ದೇಶಕ ಪ್ರಸನ್ನ ಕೂಡ ಚಿಕ್ಕ ವಯಸ್ಸಿನಲ್ಲೇ ಅಧಿಕಾರಕ್ಕೆ ಬಂದಿದ್ದು, ಉತ್ತಮ ಸೇವೆ ಮಾಡುವ ಮೂಲಕ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ನನ್ನ ಈ ಸೇವೆಯ ಹಿಂದೆ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಗಳ ಹಿರಿಯ-ಕಿರಿಯ ಸದಸ್ಯರು, ನಿರ್ದೇ ಶಕರು ಹಾಗೂ ನೌಕರರ ಪರಿಶ್ರಮವಿದೆ. ಅವರ ಪ್ರಾಮಾ ಣಿಕ ದುಡಿಮೆಯಿಂದಲೇ ಯುವಕರಾದ ನಾವು ಸಾಧನೆ ಎಂಬ ಸೇವೆ ಮಾಡಲು ಸಾಧ್ಯವಾಯಿತು ಎಂದರು.

ನಾನು ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷನಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಅಪೆಕ್ಸ್ ಬ್ಯಾಂಕ್‍ನ ನಿರ್ದೇಶಕರಾಗಿದ್ದವ ರೆಲ್ಲಾ ಮುತ್ಸದ್ಧಿ ಸಹಕಾರಿಗಳೇ ಆಗಿದ್ದರು. ಅಧ್ಯಕ್ಷ-ಉಪಾ ಧ್ಯಕ್ಷರ ಘೋಷಣೆ ವೇಳೆ ಅನಿರೀಕ್ಷಿತವಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು, ನನ್ನ ಹೆಸರನ್ನು ಘೋಷಣೆ ಮಾಡಿದಾಗ ಅಚ್ಚರಿ, ಜೊತೆಗೆ ಅತೀವ ಸಂತೋಷವಾಯಿತು. ಉಪಾಧ್ಯಕ್ಷನಾಗುತ್ತೇನೆಂಬ ನಿರೀಕ್ಷೆ ಇಲ್ಲದ ಕಾರಣ ನನ್ನ ಫೋಟೋವನ್ನೂ ಕೂಡ ನಾನು ತೆಗೆದುಕೊಂಡು ಹೋಗಿರಲಿಲ್ಲ. ಆನಂತರ ಫೋಟೋ ತೆಗೆಸಿ ಬ್ಯಾಂಕ್‍ಗೆ ಕೊಟ್ಟೆ ಎಂದು ಹೇಳಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ನನ್ನನ್ನು ಪ್ರೀತಿಯಿಂದ ಸಹಕಾರಿಗಳು ಅಭಿನಂದಿಸುತ್ತಿದ್ದಾರೆ. ನಾನು ಸಹಕಾರ ಸಚಿವನೇ ಆಗಿಬಿಟ್ಟಿ ದ್ದೇನೋ ಎಂಬ ಭಾವನೆಯಿಂದ ಪ್ರೀತಿ ತೋರಿಸುತ್ತಿದ್ದಾರೆ. ಈ ಪ್ರೀತಿಯ ಮುಂದೆ ನನಗೆ ಶಾಸಕ ಅಥವಾ ಸಚಿವ ಸ್ಥಾನ ಬೇಕಾಗಿಲ್ಲ. ಜನರ ಪ್ರೀತಿಯೇ ಸಾಕು ಅನ್ನಿಸುತ್ತದೆ. ಜೀವನ ಪೂರ್ತಿ ದುಡಿದರೂ ಈ ಪ್ರೀತಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿ.ಡಿ.ಹರೀಶ್‍ಗೌಡರನ್ನು ಕಂಪಲಾಪುರದಿಂದ ತೆರೆದ ವಾಹನದಲ್ಲಿ ಬೈಕ್ ರ್ಯಾಲಿ ಮೂಲಕ ಪಿರಿಯಾಪಟ್ಟಣಕ್ಕೆ ಅದ್ಧೂರಿಯಾಗಿ ಕರೆತರಲಾಯಿತು. ಪಿರಿಯಾಪಟ್ಟಣದ ಬೆಟ್ಟದಪುರ ಸರ್ಕಲ್‍ನಲ್ಲಿ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರವನ್ನು ಹರೀಶ್‍ಗೌಡರಿಗೆ ಹಾಕಿ ಅಭಿಮಾನಿ ಗಳು ಸಂಭ್ರಮಿಸಿದರು. ಸಮಾರಂಭದಲ್ಲಿ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಪುರಸಭಾ ಅಧ್ಯಕ್ಷ ಮಂಜು ನಾಥ್ ಸಿಂಗ್, ಮುಡಾ ಮಾಜಿ ಅಧ್ಯಕ್ಷ ವಿಜಯ ಕುಮಾರ್, ಸಹಕಾರ ಯೂನಿಯನ್ ಮಾಜಿ ನಿರ್ದೇಶಕ ಅಖ್ತರ್ ಮತೀನ್, ಮೈಮುಲ್ ಮಾಜಿ ನಿರ್ದೇಶಕ ಎ.ಟಿ.ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಅಣ್ಣಯ್ಯಶೆಟ್ಟಿ, ಅಪೂರ್ವ ಮೋಹನ್, ಕೆ.ಎಸ್.ಕುಮಾರ್, ಹರೀಶ್, ಎ.ಟಿ.ರಂಗ ಸ್ವಾಮಿ, ಜಯಕುಮಾರ್, ದಾಕ್ಷಾಯಿಣಿ ಬಸವರಾಜ್, ಐಲಾಪುರ ರಾಮು, ಪ್ರಕಾಶ್ ಸಿಂಗ್, ಮಲ್ಲಿಕಾರ್ಜುನ್, ಕೆ.ಪಿ.ಚಂದ್ರಶೇಖರಯ್ಯ, ರಾಜೇಂದ್ರ ಇನ್ನಿತರರಿದ್ದರು.

Translate »