ಸಿಎಂ ಕುಮಾರಸ್ವಾಮಿ ಉಳಿವಿಗಾಗಿ ರೇವಣ್ಣ, ಯಡಿಯೂರಪ್ಪ ಸಿಎಂ ಆಗಲು ಶೋಭಾರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೈಸೂರು

ಸಿಎಂ ಕುಮಾರಸ್ವಾಮಿ ಉಳಿವಿಗಾಗಿ ರೇವಣ್ಣ, ಯಡಿಯೂರಪ್ಪ ಸಿಎಂ ಆಗಲು ಶೋಭಾರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ

July 20, 2019

ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಲೋಕೋ ಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪಾಲ್ಗೊಂಡು ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ವಿಶೇಷ ಪೂಜೆ ಸಲ್ಲಿಸಿದರೆ, ಸಂಸದೆ ಶೋಭ ಕರಂದ್ಲಾಜೆ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.

ಸಚಿವ ಹೆಚ್.ಡಿ.ರೇವಣ್ಣರಿಂದ ಪೂಜೆ: ಕೆಲ ದಿನಗಳಿಂದ ಟೆಂಪಲ್ ರನ್ ನಡೆಸುತ್ತಿರುವ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಇಂದು ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಕಾರಿನಿಂದಿಳಿದು ಬರಿಗಾಲಲ್ಲೇ ದೇವಾಲಯ ಮುಖ್ಯ ದ್ವಾರದವ ರೆಗೂ ಬಂದ ಸಚಿವ ರೇವಣ್ಣ ಸುಮಾರು 20 ನಿಮಿಷಗಳ ಕಾಲ ದೇವಾಲಯದಲ್ಲಿದ್ದು, ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಒಳಿತಾಗಲೆಂದು ಪ್ರಾರ್ಥಿಸಿದರು.

ಸರ್ಕಾರಕ್ಕೇ ಏನೂ ಆಗಲ್ಲ, ಕಾಲ ಹರಣ ಮಾಡುತ್ತಿಲ್ಲ: ದೇವಿಯ ದರ್ಶನ ಪಡೆದ ಬಳಿಕ ಸಚಿವ ಹೆಚ್.ಡಿ. ರೇವಣ್ಣ ಪತ್ರಕರ್ತರೊಂದಿಗೆ ಮಾತನಾಡಿ, ಆಷಾಢಮಾಸದ ಶುಕ್ರವಾರದ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಉಳಿವಿಗೆ ಹಾಗೂ ಸಿಎಂ ಹೆಚ್.ಡಿ. ಕುಮಾರ ಸ್ವಾಮಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಸಮ್ಮಿಶ್ರ ಸರ್ಕಾರಕ್ಕೆ ದೇವಿಯ ಅನುಗ್ರಹ ಇದೆ. ಇದರಿಂದ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಾಸ ಮತಯಾಚನೆಗೆ ಹೆಚ್.ಡಿ.ಕುಮಾರ ಸ್ವಾಮಿ ಜು.12ರಂದು ಸಮಯ ನಿಗದಿ ಮಾಡು ವಂತೆ ಕೋರಿದ್ದರು. ಅಂದು ಮೀಟಿಂಗ್ ಕರೆ ದಿದ್ದರೂ ಬಿಜೆಪಿಯವರು ಬಂದಿಲ್ಲ. ಇದರಿಂದ ಜು.18ಕ್ಕೆ ವಿಶ್ವಾಸ ಮತಯಾಚನೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನಗಳನ್ನು ನೀಡಿದ್ದ ರಿಂದ ಚರ್ಚೆಗೆ ಗ್ರಾಸವಾಯಿತು. ಈ ಪ್ರಕ್ರಿಯೆ ಯಲ್ಲಿ ಸರ್ಕಾರ ಕಾಲಹರಣ ಮಾಡುತ್ತಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತಗೆದುಕೊಳ್ಳಲಿದ್ದಾರೆ ಎಂದರು.

ಬಿಜೆಪಿ ನಾಯಕರು ಆತುರಕ್ಕೆ ಕಟ್ಟುಬಿದ್ದಿ ದ್ದಾರೆ. ಅವರಿಗೆ ಚರ್ಚೆಗಿಂತ ತರಾತುರಿಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿ ಎಂಬ ಆತುರ ಪ್ರದರ್ಶಿಸುತ್ತಿದ್ದಾರೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ದ್ದಾಗ ವಿಶ್ವಾಸಮತ ಸಾಬೀತು ಮಾಡಲು ಹತ್ತು ದಿನ ಸಮಯ ತಗೆದುಕೊಂಡಿದ್ದರು. ಹಾಗಾಗಿ, ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪೀಕರ್ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಮೆಟ್ಟಿಲೇರಿ ಬೆಟ್ಟಕ್ಕೆ ಬಂದ ಶೋಭಾ ಕರಂದ್ಲಾಜೆ: ಪ್ರತಿ ವರ್ಷದಂತೆ ಈ ಬಾರಿಯೂ ಸಂಸದೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಪಕ್ಷದ ಮುಖಂಡರೊಂದಿಗೆ ಮೆಟ್ಟಿಲುಗಳ ಮಾರ್ಗದಲ್ಲಿ ಚಾಮುಂಡಿಬೆಟ್ಟ ತಲುಪಿ, ದೇವಾಲಯವನ್ನು ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.

ದೇವರ ದರ್ಶನ ಪಡೆದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ನಾನು ಇದು ವರೆಗೂ ಚಾಮುಂಡೇಶ್ವರಿ ತಾಯಿಗೆ ಯಾವ ಬೇಡಿಕೆ ಇಟ್ಟಿರಲಿಲ್ಲ. ರಾಜ್ಯದಲ್ಲಿರುವ ಜನ ವಿರೋಧಿ ಸರ್ಕಾರದಿಂದಾಗಿ ಕಳೆದ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬರದಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ದುರಾಡಳಿತದಿಂದ ರಾಜ್ಯದ ಜನತೆ ಮಾತ್ರವಲ್ಲದೆ, ಆಡಳಿತ ಪಕ್ಷಗಳ ಶಾಸಕರೇ ಬೇಸತ್ತಿದ್ದಾರೆ. ಇದರ ಪರಿಣಾಮವಾಗಿಯೇ ರಾಜ್ಯದಲ್ಲಿ ಜನಪರ ಸರ್ಕಾರ ಆಡಳಿತ ನಡೆಸಲೆಂಬ ಉದ್ದೇಶದಿಂದ 15ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿ ದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಡಿಯೂ ರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು.

ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಹುಮತ ಸಾಬೀತು ಮಾಡುವುದಾಗಿ ಪ್ರಸ್ತಾಸಿದ್ದರು. ಈಗ ಬಹುಮತ ಸಾಬೀತು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಎಷ್ಟು ದಿನ ಡ್ರಾಮಾ ಮಾಡಲು ಸಾಧ್ಯ. ಸುಪ್ರೀಂಕೋರ್ಟ್‍ಗೂ ಯಾವುದೇ ಬೆಲೆ ಕೊಡುತ್ತಿಲ್ಲ. ರಾಜ್ಯಪಾಲರ ನಿರ್ದೇಶನವನ್ನೂ ಗೌರವಿ ಸುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಸರ್ಕಾರದ ಏಜೆಂಟರಂತೆ ವರ್ತನೆ: ನಿಸ್ಪಕ್ಷಪಾತವಾಗಿ ವರ್ತಿಸಬೇಕಾದ ಸ್ಪೀಕರ್ ರಮೇಶ್ ಕುಮಾರ್ ಸಮ್ಮಿಶ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಶಾಸಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದರೂ ಪರಿಗಣಿಸದಿರುವುದು ಅವರ ನಡೆಯ ಉದ್ದೇಶವನ್ನು ತೋರ್ಪಡಿಸುತ್ತದೆ. ವಿಳಂಬ ನೀತಿ ಅನುಸರಿಸುವ ಮೂಲಕ ಸ್ಪೀಕರ್ ಕಾಂಗ್ರೆಸ್ ಹಾಗೂ ಸರ್ಕಾರದ ತಾಳಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯಿಂದ ಶಾಸಕರ ಕಿಡ್ನಾಪ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಶಾಸಕರೇನು ಚಿಕ್ಕ ಮಕ್ಕಳಲ್ಲ. ಅವರನ್ನು ಯಾರೂ ಕಿಡ್ನಾಪ್ ಮಾಡಲು ಸಾಧ್ಯವಿಲ್ಲ. ಅವರು ಮಾಧ್ಯಮದ ಮುಂದೆ ಬಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ.ಪಿ.ಮಂಜುನಾಥ್, ಗಿರಿಧರ್, ಜಗನ್ನಾಥ್, ಯುವ ಮುಖಂಡ ವಿಕ್ರಮ್ ಐಯ್ಯಂಗಾರ್, ಶೋಭಾ, ಪುಷ್ಪಲತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »