ಚಾಮುಂಡಿಬೆಟ್ಟದ ಪೌರ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ
ಮೈಸೂರು

ಚಾಮುಂಡಿಬೆಟ್ಟದ ಪೌರ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ

April 18, 2020

ಮೈಸೂರು, ಏ.17(ಎಸ್‍ಬಿಡಿ)- ಮೈಸೂರಿನ ಚಾಮುಂಡಿ ಬೆಟ್ಟದ ಅತಿಥಿ ಗೃಹದ ಹಿಂಭಾಗದಲ್ಲಿ ರುವ ಪೌರ ಕಾರ್ಮಿಕರ ಕಾಲೋನಿ ನಿವಾಸಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ.

ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿಯಲ್ಲಿ ಕೆಲವರು ಪೌರ ಕಾರ್ಮಿಕರಾಗಿದ್ದು, ಉಳಿದ ಬಹು ತೇಕರು ದಿನಗೂಲಿ, ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಬಳಿಕ ಇಲ್ಲಿನ 25ಕ್ಕೂ ಹೆಚ್ಚು ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ.

ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲೀ ಜನಪ್ರತಿ ನಿಧಿಗಳಾಗಲೀ ಕಾಲೋನಿಗೆ ಬಂದು ಸಮಸ್ಯೆ ಕೇಳಿಲ್ಲ. ನಮ್ಮ ಮನವಿಗೂ ಸ್ಪಂದಿಸುತ್ತಿಲ್ಲ. ಕೆಲವು ಕುಟುಂಬಗಳಿಗೆ ಮಾತ್ರ ಬಿಪಿಎಲ್ ಕಾರ್ಡ್ ಇದೆ. ಗ್ರಾಪಂ ಪೌರ ಕಾರ್ಮಿಕ ಕುಟುಂಬಗಳಿಗೆ ಎಪಿಎಲ್ ನೀಡಿದ್ದಾರೆ. ಹಲವು ಕುಟುಂಬಗಳಿಗೆ ಯಾವುದೇ ಕಾರ್ಡ್ ಇಲ್ಲ. ಲಾಕ್‍ಡೌನ್ ಬಳಿಕ ಊಟಕ್ಕೂ ಪರದಾಡುವಂತಾಗಿದೆ. ಯಾರೂ ನೆರವಿಗೆ ಬಂದಿಲ್ಲ. ದಿನಸಿ, ಹಾಲು ಯಾವ ಸಹಾಯವೂ ನಮಗಿಲ್ಲ. ಕೂಲಿ ಇಲ್ಲ, ವ್ಯಾಪಾರಕ್ಕೂ ಅವಕಾಶವಿಲ್ಲ. ಸಣ್ಣ ಪುಟ್ಟ ವಸ್ತುಗಳನ್ನು ಕೊಳ್ಳುವು ದಕ್ಕೂ ಆಗುತ್ತಿಲ್ಲ. ಎಲ್ಲದಕ್ಕೂ ಸಿಟಿಗೆ ಹೋಗಬೇಕು. ಎಲ್ಲರ ಬಳಿಯೂ ವಾಹನವಿಲ್ಲ. ಲಾಕ್‍ಡೌನ್ ನಿಂದ ಎಲ್ಲರಿಗೂ ಕಷ್ಟವಾಗಿದೆ. ಅಂತಹವರಿಗೆ ಒಂದಷ್ಟು ಜನ ನೆರವು ನೀಡುತ್ತಿದ್ದಾರೆ. ಆದರೆ ನಮ್ಮ ಗೋಳು ಕೇಳುವವರು ಯಾರೂ ಇಲ್ಲ ಎಂದು ಇಲ್ಲಿನ ನಿವಾಸಿ ಗಳು ಅಳಲು ತೋಡಿಕೊಂಡಿದ್ದಾರೆ. ಗ್ರಾಮ ಪಂಚಾಯ್ತಿ ಯಲ್ಲಿ 9 ಮಂದಿ ಪೌರ ಕಾರ್ಮಿಕರಾಗಿದ್ದಾರೆ. ಎರಡು-ಮೂರು ದಶಕದಿಂದ ದಿನಗೂಲಿ ನೌಕರರಂತೆ ಕೆಲಸ ಮಾಡುತ್ತಿದ್ದು ಯಾರಿಗೂ ಪರ್ಮಿನೆಂಟ್ ಆಗಿಲ್ಲ. ಯಾವುದೇ ಸೌಲಭ್ಯಗಳಿಲ್ಲ. ಎರಡು ತಿಂಗಳಿಂದ ಸಂಬಳವೂ ಇಲ್ಲ. ಬೆಟ್ಟ ಹಾಗೂ ತಾವರೆಕಟ್ಟೆ ಗ್ರಾಮ ಗಳಲ್ಲಿ ಕೆಲಸ ಮಾಡಬೇಕು. ಇವರಿಗೆ ಎಪಿಎಲ್ ಕಾರ್ಡ್ ನೀಡಿದ್ದಾರೆ. ಕೊರೊನಾ ಭೀತಿಯಿದ್ದರೂ ಮಾಸ್ಕ್, ಗ್ಲೌಸ್ ಇನ್ನಿತರ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ. ಮಹಿಷಾಸುರ ಪ್ರತಿಮೆ ಬಳಿ ವ್ಯಾಪಾರ ಮಾಡುತ್ತಿದ್ದೆವು. ಅಲ್ಲಿಂದ ತೆರವುಗೊಳಿಸಿದ ನಂತರ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಡಲಿಲ್ಲ. ಕೂಲಿ ಮಾಡಲಾಗದವರು ಬಿಕ್ಷೆ ಬೇಡಿ, ಜೀವನ ನಡೆಸುತ್ತಿದ್ದಾರೆ ಎಂದು ಇಲ್ಲಿನ ಮಹಿಳೆಯೊಬ್ಬರು ಕಣ್ಣೀರಿಟ್ಟರು.

ಕೊರೊನಾ ಜಗತ್ತನ್ನೇ ಕಾಡುತ್ತಿದೆ. ಎಲ್ಲರೂ ಕಷ್ಟದಲ್ಲಿ ದ್ದಾರೆ. ಈ ಸಂದರ್ಭದಲ್ಲಿ ಮಾನವೀಯತೆಯಿಂದ ಪರಸ್ಪರ ನೆರವಾಗಬೇಕು. ಯಾರೇ ಕಷ್ಟದಲ್ಲಿದ್ದರೂ ಸ್ಥಳೀಯ ಆಡಳಿತ ಸಹಾಯಕ್ಕೆ ಮುಂದಾಗಬೇಕು. ಸಾಧ್ಯವಾಗದಿದ್ದರೆ ದಾನಿಗಳ ಸಹಕಾರದಿಂದಲಾದರೂ ಅಸಹಾಯಕರ ಸಲಹಬೇಕಿದೆ.

Translate »