ಮೂರನೇ ಆಷಾಢ ಶುಕ್ರವಾರ ಶ್ರೀ ಚಾಮುಂಡೇಶ್ವರಿಗೆ ದಿನವಿಡೀ ವಿಶೇಷ ಪೂಜೆ
ಮೈಸೂರು

ಮೂರನೇ ಆಷಾಢ ಶುಕ್ರವಾರ ಶ್ರೀ ಚಾಮುಂಡೇಶ್ವರಿಗೆ ದಿನವಿಡೀ ವಿಶೇಷ ಪೂಜೆ

July 20, 2019

ಮೈಸೂರು,ಜು.19(ಎಂಟಿವೈ)- ಮೋಡ ಮುಸುಕಿದ ವಾತಾವರಣ, ಇಬ್ಬನಿಯೊಂದಿಗೆ ಬೀಸುತ್ತಿದ್ದ ತಂಗಾಳಿ ನಡುವೆ ಆಷಾಢ ಮಾಸದ ಮೂರನೇ ಶುಕ್ರವಾರವಾದ ಇಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು, ನಾಡದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಧನ್ಯರಾದರು.

ಆಷಾಢ ಮಾಸದಲ್ಲಿ ಶಕ್ತಿ ದೇವರಿಗೆ ಪೂಜೆ ಸಲ್ಲಿಸಿದರೆ ಒಳಿತಾಗಲಿದೆ ಎಂಬ ರೂಢಿ ಇರುವು ದರಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲು ಮುಗಿ ಬಿದ್ದರು. ಮುಂಜಾನೆ 3 ಗಂಟೆಯಿಂದಲೇ ದೇವಾ ಲಯದ ಪ್ರಧಾನ ಆಗಮಿಕ ಡಾ.ಎನ್.ಶಶಿ ಶೇಖರ್ ದೀಕ್ಷಿತ್ ಹಾಗೂ ದೇವಿ ಪ್ರಸಾದ್ ನೇತೃತ್ವದಲ್ಲಿ ನಾಡದೇವಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ತ್ರಿಪದಿ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ವಿಶೇಷ ಪೂಜಾ ಕೈಂಕರ್ಯ ಗಳು ಜರುಗಿದವು. ಮಹಾಮಂಗಳಾರತಿ ನಂತರ ಮುಂಜಾನೆ 5.30ಕ್ಕೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಿಗ್ಗೆ 9.30ಕ್ಕೆ ಪ್ರಾಕಾ ರೋತ್ಸವ ನಡೆಸಿ, ಮಹಾಮಂಗಳಾರತಿ ಬೆಳಗ ಲಾಯಿತು. ಇದೇ ವೇಳೆ ಪೊಲೀಸ್ ಪೇದೆ ಯೊಬ್ಬರು ದೇವರಿಗೆ ಗನ್ ಸೆಲ್ಯೂಟ್ ಮೂಲಕ ಗೌರವ ಸಮರ್ಪಿಸಿದರು. ಸಂಜೆ 6ರಿಂದ 7.30ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 10ಗಂಟೆಯವರೆಗೂ ಭಕ್ತರು ದೇವಾ ಲಯಕ್ಕೆ ತೆರಳಿ ವಿವಿಧ ಆಭರಣಗಳಿಂದ ಕಂಗೊ ಳಿಸುತ್ತಿದ್ದ ಆದಿಶಕ್ತಿಯನ್ನು ಕಣ್ತುಂಬಿಕೊಂಡರು.

ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ನಾಡದೇವಿ: ಮೂರನೇ ಆಷಾಢ ಶುಕ್ರವಾರ ದಂದು ನಾಡಿನ ಅದಿದೇವತೆಗೆ ಮಹಾಲಕ್ಷ್ಮೀ ಅಲಂ ಕಾರ ಮಾಡಲಾಗಿತ್ತು. ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ ತಿಳಿ ಹಸಿರು, ನೀಲಿ ಬಣ್ಣದ ರೇಷ್ಮೆ ಸೀರೆ, ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು.

ಮುಂಜಾನೆಯಿಂದಲೇ ಭಕ್ತರ ದಂಡು: ಮುಂಜಾನೆ 2 ಗಂಟೆಯಿಂದಲೇ ಕಾಲ್ನಡಿಗೆಯಲ್ಲಿ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದರು. ಖಾಸಗಿ ವಾಹನ ಗಳಲ್ಲಿ ಬಂದಿದ್ದ ಭಕ್ತರು ಹೆಲಿಪ್ಯಾಡ್‍ನಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಉಚಿತ ಬಸ್ ಮೂಲಕ ಮುಂಜಾನೆ 4 ಗಂಟೆಗೇ ಬೆಟ್ಟಕ್ಕೆ ಆಗಮಿಸಿದರು. ದೇವಾಲಯದ ಮುಂದೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಮೆಟ್ಟಿಲುಗಳ ಮೂಲಕ: ಈ ಬಾರಿಯೂ ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟ ಹತ್ತಿದ ಭಕ್ತರ ಸಂಖ್ಯೆ ದೊಡ್ಡದಿತ್ತು. ಮೆಟ್ಟಿಲು ಮಾರ್ಗದಲ್ಲಿ ನೂಕುನುಗ್ಗಲು ಉಂಟಾಗಬಾರ ದೆಂಬ ಮುನ್ನೆಚ್ಚರಿಕೆಯಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತ ಯುವತಿಯರು, ಮಕ್ಕಳಾಗದ ಮಹಿಳೆಯರು ಹಾಗೂ ಅನಾ ರೋಗ್ಯ ಸೇರಿದಂತೆ ವಿವಿಧ ಸಂಕಷ್ಟದಲ್ಲಿ ಸಿಲುಕಿ ರುವ ಮಹಿಳೆಯರು ಇಂದು ಮೆಟ್ಟಿಲು ಹತ್ತುವ ಮೂಲಕ ಹರಕೆ ತೀರಿಸಿದರು. ಬೆಟ್ಟದ ಪಾದದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪ್ರತಿಯೊಂದು ಮೆಟ್ಟಿ ಲಿಗೂ ಅರಿಶಿನ-ಕುಂಕುಮ ಹಚ್ಚಿ, ದೀಪ ಮತ್ತು ಗಂಧದ ಕಡ್ಡಿಯಲ್ಲಿ ಬೆಳಗುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಹರಕೆ ಹೊತ್ತವರ ಮೆಟ್ಟಿಲು ಪೂಜೆ ಮುಂಜಾನೆಯಿಂದ ಸಂಜೆಯ ವರೆಗೂ ಸಾಗಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಂಡೋಪ ತಂಡವಾಗಿ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ದೇವಿ ದರ್ಶನ ಮಾಡಿದರು.

ಪ್ಲಾಸ್ಟಿಕ್ ಜಾಗೃತಿ: ಕ್ಲೀನ್ ಮೈಸೂರು ಫೌಂಡೇ ಷನ್‍ನ ಲೀಲಾಶಿವಕುಮಾರ್, ಲೀಲಾವೆಂಕ ಟೇಶ್, ಮಧುಕೇಶ್, ವೆಂಕಟೇಶ್, ಪುನೀತ್ ನೇತೃತ್ವದಲ್ಲಿ ಎಸ್‍ಡಿಎಂ ಕಾಲೇಜಿನ ರೇಂಜರ್ಸ್ 25, ಎನ್‍ಸಿಸಿ 50 ಕೆಡೆಟ್‍ಗಳು ಹಾಗೂ ಸುರಕ್ಷಾ ಫೌಂಡೇಷನ್ ಆನಂದ್ ಹಾಗೂ ಇನ್ನಿತರರು ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಹೋಗುವ ಎಲ್ಲಾ ಭಕ್ತರಿಂದ ಪ್ಲಾಸ್ಟಿಕ್ ಕವರ್‍ಗಳನ್ನು ಪಡೆದು ಪರಿಸರ ಜಾಗೃತಿ ಮೂಡಿಸಿದರು.

ಹೆಚ್ಚುವರಿ ಬಸ್ ವ್ಯವಸ್ಥೆ: ಹೆಲಿಪ್ಯಾಡ್‍ನಿಂದ ಚಾಮುಂಡಿಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ಜಿಲ್ಲಾಡಳಿತ 22ಕ್ಕೂ ಹೆಚ್ಚು ಉಚಿತ ಬಸ್ ವ್ಯವಸ್ಥೆ ಮಾಡಿತ್ತು. ಇದರೊಂದಿಗೆ ನಗರ ಬಸ್ ನಿಲ್ದಾಣ ದಿಂದ 10 ವೋಲ್ವೋ ಬಸ್, 35 ಸಾಮಾನ್ಯ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಪ್ರತಿ ಐದು ನಿಮಿಷ ಕ್ಕೊಂದು ಬಸ್ ಚಾಮುಂಡಿಬೆಟ್ಟಕ್ಕೆ ಹೊರಡುವ ವ್ಯವಸ್ಥೆ ಮಾಡಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್: ಅಧಿಕ ಸಂಖ್ಯೆ ಯಲ್ಲಿ ಭಕ್ತರು ಏಕಕಾಲಕ್ಕೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗುಂಪು ಚದುರಿಸಲು ಅಶ್ವಾರೋಹಿ ದಳ ನಿಯೋಜಿಸಲಾಗಿತ್ತು. ಸರಗಳ್ಳರು, ಜೇಬುಗಳ್ಳರ ಕೃತ್ಯಕ್ಕೆ ಬ್ರೇಕ್ ಹಾಕಲು ಮಫ್ತಿಯಲ್ಲಿ ಪೊಲೀಸರ ಗಸ್ತು ಆಯೋಜಿಸಲಾಗಿತ್ತು.

ಬಣ್ಣ ಬಣ್ಣದ ಹೂವುಗಳಿಂದ ಕಂಗೊಳಿಸಿದ ದೇವಾಲಯ..: ದೇವಾಲಯಕ್ಕೆ ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಾಲ್ಕು ಬಣ್ಣದ ಸೇವಂತಿ ಹೂವು, ಎರಡು ಬಣ್ಣದ ಚೆಂಡೂವಿನಿಂದ ದೇವಾಲಯದ ಪ್ರಾಂಗಣ, ಗರ್ಭಗುಡಿಯ ಮುಂಭಾಗದ ಆವರಣ ಸೇರಿದಂತೆ ದೇವಾಲಯವನ್ನು ಅಲಂಕರಿಸಲಾ ಗಿತ್ತು. ಇದು ನೋಡುಗರ ಕಣ್ಮನ ಸೆಳೆಯುತ್ತಿತ್ತು.

Translate »