ಕೈಕೊಟ್ಟ ಮಳೆರಾಯ: ಸಂಕಷ್ಟದಲ್ಲಿ ಮೈಸೂರು ಜಿಲ್ಲೆ ರೈತರು
ಮೈಸೂರು

ಕೈಕೊಟ್ಟ ಮಳೆರಾಯ: ಸಂಕಷ್ಟದಲ್ಲಿ ಮೈಸೂರು ಜಿಲ್ಲೆ ರೈತರು

July 20, 2019

ಮೈಸೂರು,ಜು.19(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದ್ದು, ಕೃಷಿ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದೆ.

ಮುಂಗಾರು ಹಂಗಾಮಿನಲ್ಲಿ ಕ್ಷೇತ್ರ ಗುರಿಯ ಅರ್ಧದಷ್ಟು ಮಾತ್ರ ಬಿತ್ತನೆಯಾಗಿದೆ. ಸದ್ಯ ಬೆಳವಣಿಗೆ ಹಂತದಲ್ಲಿರುವ ಬೆಳೆಗೆ ಒಮ್ಮೆಯಾದರೂ ಹದವಾಗುವಷ್ಟು ಮಳೆ ಯಾಗಬೇಕು. ಇಲ್ಲವಾದರೆ ಬಿತ್ತಿದ ಬೆಳೆ ರೈತರ ಕೈ ಸೇರದೆ ಮಣ್ಣು ಪಾಲಾಗುವ ಭೀತಿ ಎದುರಾಗಿದೆ. ಸಾಲ ಮಾಡಿ ಬಿತ್ತಿರುವ ರೈತರು ಪ್ರತಿಕ್ಷಣ ಆಗಸದತ್ತ ಮುಖಮಾಡಿ ಇಂದು ಮಳೆ ಬರಬಹುದು, ನಾಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷದ ಮಳೆ ಪ್ರಮಾಣ ಭಾರೀ ಕ್ಷೀಣಿಸಿದೆ. ಪ್ರಸಕ್ತ ಜನವರಿಯಿಂದ ಈವರೆಗೆ(ಜು.18) ವಾಡಿಕೆ ಗಿಂತ ಶೇ.22ರಷ್ಟು ಕೊರತೆಯಾಗಿದೆ. ಜನ ವರಿಯಲ್ಲಿ 1.3 ಮಿ.ಮೀ., ಫೆಬ್ರವರಿ 9.4, ಮಾರ್ಚ್ 1.2, ಏಪ್ರಿಲ್ 58.8, ಮೇ 118, ಜೂನ್ 59 ಹಾಗೂ ಜುಲೈ 18ರವರೆಗೆ 44 ಮಿ.ಮೀ ಮಳೆ ಯಾಗಿದೆ. ಈವರೆಗೆ ವಾಡಿಕೆಯಂತೆ ಒಟ್ಟು 374 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 291 ಮಿ.ಮೀ. ಮಳೆಯಾಗಿದ್ದು, 83 ಮಿ.ಮೀ. ಕೊರತೆಯಾಗಿದೆ. 2018ರ ಈ ಅವಧಿಯಲ್ಲಿ 502 ಮಿ.ಮೀ. ಮಳೆಯಾಗಿತ್ತು.

ತಾಲೂಕುವಾರು ಅಂಕಿಅಂಶದ ಪ್ರಕಾರ ತಿ.ನರಸೀಪುರದಲ್ಲಿ ಮಳೆ ಕೊರತೆ ಪ್ರಮಾಣ ಉಳಿದ ತಾಲೂಕುಗಳಿಗಿಂತ ಹೆಚ್ಚಾಗಿದೆ. ಈವರೆಗೆ 191 ಮಿ.ಮೀ. ಮಳೆಯಾಗಿದ್ದು, ಶೇ.35 ರಷ್ಟು ಕೊರತೆ ದಾಖಲಾಗಿದೆ. ಕೆ.ಆರ್.ನಗರ ಶೇ.30, ಹೆಚ್.ಡಿ.ಕೋಟೆಯಲ್ಲಿ ಶೇ.27, ಪಿರಿಯಾ ಪಟ್ಟಣದಲ್ಲಿ ಶೇ.27, ಮೈಸೂರು ಶೇ.18, ನಂಜನ ಗೂಡು ಶೇ.16 ಹಾಗೂ ಹುಣಸೂರು ಶೇ.8ರಷ್ಟು ಮಳೆ ಕೊರತೆ ಉಂಟಾಗಿದೆ.

ಬೆಳೆ ಕೈ ಸೇರದ ಆತಂಕ: ಭಾರೀ ಪ್ರಮಾ ಣದ ಮಳೆ ಕೊರತೆ ನಡುವೆಯೂ ಅರ್ಧ ದಷ್ಟಾದರೂ ಬಿತ್ತನೆಯಾಗಿದೆ ಎಂಬ ಸಮಾ ದಾನವೂ ರೈತರಲ್ಲಿ ಉಳಿದಿಲ್ಲ. ಬೆಳವಣಿಗೆ ಹಂತದಲ್ಲಿರುವ ಬೆಳೆಗೆ ಒಮ್ಮೆಯಾದರೂ ಹದವಾಗುವ ಮಳೆ ಬೇಕೇ ಬೇಕು. ಕ್ಷೇತ್ರ ಗುರಿಗಿಂತ ಹೆಚ್ಚು ಪ್ರದೇಶದಲ್ಲಿ ತಂಬಾಕು ಬೆಳೆಯಲಾಗಿದೆ. ಆದರೆ ಮಳೆಯಿಲ್ಲದೆ ಒಂದೆ ರಡು ಅಡಿಯಷ್ಟೂ ಗಿಡ ಬೆಳೆದಿಲ್ಲ.  ಕೆರೆ, ಹಳ್ಳ-ಕೊಳ್ಳದ ಪಕ್ಕದ ಜಮೀನಿಗೆ ಡೀಸೆಲ್ ಮೋಟರ್ ಸಹಾಯದಿಂದ ನೀರು ಹರಿಸುವ ವಿಫಲ ಯತ್ನ ನಡೆಸಿದ್ದಾರೆ. ಆದರೆ ಮಳೆಯೇ ಇಲ್ಲದ ಕಾರಣ ಹಳ್ಳ-ಕೊಳ್ಳದ ನೀರೂ ಖಾಲಿಯಾಗಿದೆ. ಬೋರ್‍ವೆಲ್‍ಗಳೂ ಬಹು ತೇಕ ಬತ್ತಿ ಹೋಗಿವೆ. ಸಾಕಷ್ಟು ನೀರು ಲಭ್ಯ ವಾದ ಜಮೀನಿನಲ್ಲಿರುವ ತಂಬಾಕು ಮಾತ್ರ ಉತ್ತಮವಾಗಿ ಬೆಳೆದಿದ್ದು, ಸೊಪ್ಪು ಮುರಿಯುವ ಚಟುವಟಿಕೆಯೂ ಆರಂಭವಾಗಿದೆ. ಆದರೆ ಬಹುತೇಕ ರೈತರು ಒಂದೇ ಒಂದು ಬಾರಿ ಮಳೆಯಾದರೆ ಸಾಕೆಂದು ಪ್ರಾರ್ಥಿಸುತ್ತಿದ್ದಾರೆ.

ಹತ್ತಿಗೂ ಒಂದು ಹದ ಮಳೆ ಬೇಕು. ಜಿಲ್ಲೆಯಲ್ಲಿ ಶೇ.98ರಷ್ಟು ಹತ್ತಿ ಬಿತ್ತನೆಯಾ ಗಿದ್ದು ಸದ್ಯ ಕಾಯಿಯಾಗುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮಳೆಯಾದರೆ ಮಾತ್ರ ಬೆಳೆ ಕೈ ಸೇರುತ್ತದೆ. ಮಳೆ ಮುನಿಸು ಮುಂದುವರೆದರೆ ಬೆಳೆ ಕೈ ಸೇರುವುದಿಲ್ಲ. ರಾಗಿ, ಉದ್ದು, ಹೆಸರು ಮುಸುಕಿನ ಜೋಳ, ಅವರೆ, ಅಲಸಂದೆ ಇನ್ನಿತರ ಬೆಳೆಯೂ ಸಂಪೂರ್ಣ  ದಕ್ಕುವ ಸಾಧ್ಯತೆ ಕಡಿಮೆ. ಬಿತ್ತಿರುವುದರಲ್ಲಿ, ಅರ್ಧವಾದರೂ ಸಿಗದ ದುಸ್ಥಿತಿ ಸೃಷ್ಟಿ ಯಾಗಿದೆ. ಇನ್ನು ಜಲಾಶಯಗಳೂ ಭರ್ತಿ ಯಾಗದ ಹಿನ್ನೆಲೆಯಲ್ಲಿ ನೀರಾವರಿ ಆಶ್ರಿತ ಬೆಳೆಯನ್ನೂ ನಿರೀಕ್ಷಿಸುವಂತಿಲ್ಲ. ಭತ್ತ ಬೆಳೆಯುವ 1 ಲಕ್ಷ ಹೆಕ್ಟೇರ್ ಜಮೀನು, ಡ್ಯಾಂ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುತ್ತದೆ. ಕೇವಲ ಐದಾರು ಸಾವಿರ ಹೆಕ್ಟೇರ್ ಕೆರೆ ಅಚ್ಚುಕಟ್ಟಿನಲ್ಲಿ ಬೆಳೆಯಬಹುದು.

 

 

 

Translate »