ಭೀಮಾ ಕೋರೆಗಾಂವ್ ವಿಜಯೋತ್ಸವ ಜಾಗೃತಿ ಸಮಾವೇಶ
ಮೈಸೂರು ಗ್ರಾಮಾಂತರ

ಭೀಮಾ ಕೋರೆಗಾಂವ್ ವಿಜಯೋತ್ಸವ ಜಾಗೃತಿ ಸಮಾವೇಶ

January 13, 2020

ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮಿಜೀ ವಿಷಾದ

ನಂಜನಗೂಡು 12- ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಕಂದಕ ಸೃಷ್ಟಿಸಲಾಗುತ್ತಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.

ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಪ್ರಯುಕ್ತ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಬೃಹತ್ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶೇ.3ರಷ್ಟು ಇರುವ ಜನರು ಸಂವಿಧಾನದ ಆಶಯಗಳಿಗೆ ಅಪಚಾರ ಎಸಗಿ ಶಾಸನ ರೂಪಿಸುವ ಜಾಗದಲ್ಲಿದ್ದು, ಪ್ರಬುದ್ಧವಾಗಿರುವ ಭಾರತವನ್ನು ಮತ್ತೆ ಮನುವಾದಿ ಪೇಶ್ವೆಗಳ ಭಾರತವನ್ನಾಗಿಸುವ ಹುನ್ನಾರ ನಡೆದಿದೆ ಇಂದಿನ ಪೇಶ್ವೆಗಳ ಭಾರತದಲ್ಲಿ ಮನುಷ್ಯರು ಬದುಕಿಲ್ಲ. ಜಾತಿಗಳು ಜೀವಂತವಾಗಿವೆ. ಹೋರಾಟಗಾರರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ದೇಶದಲ್ಲಿ ಆಯುಧಗಳು ಮಾತನಾಡಬಾರದು. ಆದರ್ಶಗಳು ಮಾತನಾಡಬೇಕು ಎಂದರು.

ಪ್ರಗತಿಪರ ಚಿಂತಕ ಮಹೇಂದ್ರಕುಮಾರ್ ಮಾತನಾಡಿ, ವಿವೇಕನಂದರನ್ನು ಹಿಂದುತ್ವದ ಗುರುತಾಗಿ ಬಿಂಬಿಸಲಾಗುತ್ತಿದೆ. ದಲಿತರನ್ನು ಹಿಂದುತ್ವ ಹಾಗೂ ಧರ್ಮದ ಹೆಸರಿನಲ್ಲಿ ಧಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ದಲಿತರಿಗೆ ದೇವಾಲಯದೊಳಗೆ ಪ್ರವೇಶ ನೀಡದೆ ಹೊರಗಟ್ಟುವುದನ್ನು ಹಿಂದುತ್ವವೆಂದು ಕರೆಯಬೇಕಾಗಿದೆ. ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯಲಾಗಿತ್ತಿದೆ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಸ್ವತಂತ್ರ ಪೂರ್ವದ ಶ್ರೇಣಿ ಸಮಾಜಕ್ಕೆ ಹೋಗುವುದು ನಿಶ್ಚಿತ. ಇದಕ್ಕೂ ಮೊದಲು ಎಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.

ಸಾಹಿತಿ ವಡ್ಡಗೆರೆ ನಾಗರಾಜಯ್ಯ, ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಮಾತನಾಡಿದರು. ಇದಕ್ಕೂ ಮೊದಲು ನಗರದ ಜೂನಿಯರ್ ಕಾಲೇಜು ಆವರಣದಿಂದ ಅಂಬೇಡ್ಕರ್ ಭವನದವರೆವಿಗೆ ಸ್ತಬ್ಧಚಿತ್ರವನ್ನೊಳಗೊಂಡ ಜಾಗೃತಿ ಜಾಥಾ ಜರುಗಿತು. ಸಮಾರಂಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಲ್ಲಹಳ್ಳಿ ನಾರಾಯಣ, ಮುಖಂಡರಾದ ಕಾರ್ಯ ಬಸವಣ್ಣ, ಬೊಕ್ಕಹಳ್ಳಿ ಲಿಂಗಯ್ಯ, ನಗರ್ಲೆ ವಿಜಯ್‍ಕುಮಾರ್, ಮಂಜು, ಸುರೇಶ್, ಕಂದೇಗಾಲ ಶ್ರೀನಿವಾಸ್, ಪುಟ್ಟಸ್ವಾಮಿ, ಅನಿಲ್, ಸಿದ್ದು, ಯಶವಂತ್, ಸೇರಿದಂತೆ ದಸಂಸ ಸಂಘಟನೆಗಳ ಪದಾಧಿಕಾರಿಗಳಿದ್ದರು.

Translate »