ಮಡಿಕೇರಿ ನಗರಸಭೆ ಬಿಜೆಪಿ ತೆಕ್ಕೆಗೆ ಕಾಂಗ್ರೆಸ್‍ಗೆ ತೀವ್ರ ಮುಖಭಂಗ
ಕೊಡಗು

ಮಡಿಕೇರಿ ನಗರಸಭೆ ಬಿಜೆಪಿ ತೆಕ್ಕೆಗೆ ಕಾಂಗ್ರೆಸ್‍ಗೆ ತೀವ್ರ ಮುಖಭಂಗ

May 1, 2021

ಮಡಿಕೇರಿ, ಏ.30-ಮಡಿಕೇರಿ ನಗರ ಸಭೆಗೆ ಏ.27ರಂದು ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದ್ದು, 23 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಿಜೆಪಿ ಭರ್ಜರಿ ಜಯ ಸಾಧಿಸಿ, ನಗರ ಸಭೆ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ.
ಕಳೆದ ಬಾರಿ 9 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೇವಲ 1 ಸ್ಥಾನ ಪಡೆದು ತೀವ್ರ ಮುಖಭಂಗ ಅನು ಭವಿಸಿದೆ. ಜೆಡಿಎಸ್ ಕಳೆದ ಬಾರಿಯಂತೆ ಈ ಬಾರಿಯೂ ಒಂದೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡರೆ, ಕಳೆದ ಬಾರಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಎಸ್‍ಡಿಪಿಐ ಈ ಬಾರಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಕಳೆದ ಬಾರಿ ಬಿಜೆಪಿ 8 ಸ್ಥಾನಗಳನ್ನು ಮಾತ್ರ ಪಡೆದಿತ್ತು. 9 ಸ್ಥಾನ ಪಡೆದಿದ್ದ ಕಾಂಗ್ರೆಸ್, ಎಸ್‍ಡಿಪಿಐ ಜೊತೆ ಮೈತ್ರಿ ಮಾಡಿಕೊಂಡು ನಗರ ಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿತ್ತು. 7 ವರ್ಷಗಳ ಬಳಿಕ ಮಡಿಕೇರಿ ನಗರ ಸಭೆಯ ಆಡಳಿತವನ್ನು ಬಿಜೆಪಿ ಹಿಡಿದಿದೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಗರ ಸಭೆಯ ಮಾಜಿ ಅಧ್ಯಕ್ಷರುಗಳಾದ ಹೆಚ್.ಎಂ.ನಂದ ಕುಮಾರ್, ಕಾವೇರಮ್ಮ ಸೋಮಣ್ಣ, ಜುಲೈಕಾಬಿ ಮತ್ತು ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಸೋಲನುಭವಿಸಿದ್ದಾರೆ. ಕಾಂಗ್ರೆಸ್‍ನ ಏಕೈಕ ಅಭ್ಯರ್ಥಿ 16ನೇ ವಾರ್ಡ್‍ನ ಬಿ.ರಾಜೇಶ್ ಯಲ್ಲಪ್ಪ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಜೆಡಿಎಸ್‍ನ ಎಂ.ಎ.ಮುಸ್ತಫಾ 10ನೇ ವಾರ್ಡ್‍ನಿಂದ ಗೆದ್ದಿದ್ದಾರೆ. ಬಿಜೆಪಿಯ ಮಾಜಿ ನಗರ ಸಭಾ ಸದಸ್ಯರುಗಳಾದ ಕೆ.ಎಸ್.ರಮೇಶ್, ಅನಿತಾ ಪೂವಯ್ಯ, ಸವಿತಾ ರಾಕೇಶ್, ನಗರ ಸಭೆಯ ಮಾಜಿ ಸದಸ್ಯರಾದ ಎಸ್‍ಡಿಪಿಐ ಜಿಲ್ಲಾಧ್ಯಕ್ಷೆ ಎಂ.ಕೆ.ಮನ್ಸೂರ್, ಅಮೀನ್ ಮೊಹಿಸಿನ್ ಗೆಲುವಿನ ನಗೆ ಬೀರಿದ್ದಾರೆ.

ವಾರ್ಡ್.ನಂ.1ರಲ್ಲಿ ಚಿತ್ರಾವತಿ(ಬಿಜೆಪಿ 336),ನಂ.2-ಮಹೇಶ್ ಜೈನಿ(ಬಿಜೆಪಿ 375),3-ಮೇರಿ ವೇಗಾಸ್(ಎಸ್.ಡಿ.ಪಿ.ಐ 676),4-ಮನ್ಸೂರ್ ಅಲಿ(ಎಸ್‍ಡಿಪಿಐ 701),5-ಸತೀಶ್(ಬಿಜೆಪಿ 334),6-ಕೆ.ಎಸ್.ರಮೇಶ್(ಬಿಜೆಪಿ 540),7-ಅಮಿನ್ ಮೊಹಿಸಿನ್(ಎಸ್‍ಡಿಪಿಐ 382), 8-ಸವಿತಾ ರಾಕೇಶ್(ಬಿಜೆಪಿ 286), 9-ಕಲಾವತಿ(ಬಿಜೆಪಿ 299), 10-ಮುಸ್ತಫ ಎಂ.ಎ (ಜೆಡಿಎಸ್ 251), 11- ನೀಮಾ ಅರ್ಷದ್(ಎಸ್.ಡಿ.ಪಿ.ಐ 125), 12-ಬಷೀರ್(ಎಸ್.ಡಿ.ಪಿ.ಐ 239), 13-ಮಂಜುಳಾ(ಬಿಜೆಪಿ 367), 14-ಉಷಾ ಕುಮಾರಿ(ಬಿಜೆಪಿ 463), 15-ಓಂಕಾರ್ ಚಂದ್ರ(ಬಿಜೆಪಿ 486), 16-ಬಿ.ರಾಜೇಶ್ ಯಲ್ಲಪ್ಪ(ಕಾಂಗ್ರೆಸ್ 381), 17-ಅರುಣ್ ಶೆಟ್ಟಿ(ಬಿಜೆಪಿ 274), 18-ಉಮೇಶ್ ಸುಬ್ರಮಣಿ(ಬಿಜೆಪಿ 359), 19-ಅಪ್ಪಣ್ಣ (ಬಿಜೆಪಿ 340), 20-ಅನಿತಾ ಪೂವಯ್ಯ (ಬಿಜೆಪಿ 330), 21-ಶ್ವೇತಾ(ಬಿಜೆಪಿ 195), 22-ಸಬಿತಾ (ಬಿಜೆಪಿ 364), 23-ಶಾರದ ನಾಗರಾಜ್ (ಬಿಜೆಪಿ 260) ಅವರುಗಳು ಆಯ್ಕೆಯಾಗಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ: ನಗರದ ಸಂತ ಜೋಸೆಫರ ಶಾಲೆಯಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂ ಅನ್ನು ಚುನಾ ವಣಾಧಿಕಾರಿಗಳ ಸಮ್ಮುಖದಲ್ಲಿ ತೆರೆಯುವ ಮೂಲಕ ಮತ ಎಣಿಕೆ ಪ್ರಕ್ರಿಯೆ ಆರಂಭ ವಾಯಿತು. ಇದಕ್ಕೂ ಮುನ್ನ ಮತ ಎಣಿಕೆ ಕಾರ್ಯಕ್ಕೆ ಆಗಮಿಸಿದ್ದ ಎಲ್ಲಾ ಅಭ್ಯರ್ಥಿ ಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ರಿಪೋರ್ಟ್ ಇದ್ದವರನ್ನು ಮಾತ್ರವೇ ಮತ ಎಣಿಕೆ ಕೇಂದ್ರಕ್ಕೆ ಕಳುಹಿಸಲಾಯಿತು. ಒಟ್ಟು 3 ಪ್ರತ್ಯೇಕ ಕೊಠಡಿಗಳಲ್ಲಿ 23 ವಾರ್ಡ್‍ಗಳ ಮತ ಎಣಿಕೆ ಕಾರ್ಯ ನಡೆಸಲಾಯಿತು. ಕೆಲವು ವಾರ್ಡ್‍ಗಳಿಗೆ ಅಭ್ಯರ್ಥಿಗಳ ಏಜೆಂಟ್‍ಗಳು ಮತ ಎಣಿಕೆ ಕಾರ್ಯಕ್ಕೆ ಆಗಮಿಸಿದ್ದು ಕಂಡು ಬಂತು. ಚುನಾವಣಾ ವೀಕ್ಷಕರಾದ ಸಿ.ರಾಜು, ಚುನಾವಣಾಧಿಕಾರಿಗಳಾದ ಡಾ.ನಂಜುಂಡೇಗೌಡ, ಸಲೀಂ, ಶಶಿಧರ, ಹಾಗೂ ತಹಶೀಲ್ದಾರ್ ಮಹೇಶ್ ಅವರುಗಳು ಸ್ಥಳದಲ್ಲಿ ಹಾಜರಿದ್ದರು. ಡಿವೈಎಸ್‍ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಮೂವರು ವೃತ್ತ ನಿರೀಕ್ಷಕರು, ನಾಲ್ವರು ಸಬ್ ಇನ್ಸ್‍ಪೆಕ್ಟರ್‍ಗಳು ಹಾಗೂ 76 ಮಂದಿ ಪೊಲೀಸ್ ಸಿಬ್ಬಂದಿ ಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಎಣಿಕೆ ಕೇಂದ್ರದಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ಸಾಮಾಜಿಕ ಅಂತರ, ಸ್ಯಾನಿಟೈಸ್ ಸೇರಿ ದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತ ಎಣಿಕೆ ಕೇಂದ್ರದ ಸುತ್ತ ಮುತ್ತ ಎಲ್ಲಿಯೂ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರಿಗೆ ವಿಜಯೋತ್ಸವ ನಡೆಸದಂತೆ ಈ ಮೊದಲೇ ಸೂಚಿಸಿದ್ದ ಹಿನ್ನಲೆಯಲ್ಲಿ ಯಾರೂ ಕೂಡ ಜೈಕಾರ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆಸದೇ ಎಣಿಕೆ ಕೇಂದ್ರ ದಿಂದ ಹೊರ ಹೋಗುತ್ತಿದ್ದುದು ಕಂಡು ಬಂತು.

Translate »