ಕೊರೊನಾ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲ
ಮೈಸೂರು

ಕೊರೊನಾ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲ

September 23, 2020

ಮೈಸೂರು, ಸೆ.22(ಪಿಎಂ)- ಕೊರೊನಾ ನಿಯಂತ್ರಿಸುವಲ್ಲಿ ಹಾಗೂ ಈ ಸಂಬಂಧ ಸರ್ಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಶಾಸಕ ವಾಸು ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದು, ಯಾವುದೇ ಸರ್ಕಾರದ ಅವಧಿಯಲ್ಲಿ ಇಂತಹ ನಿರ್ಲಕ್ಷ್ಯ ಕಂಡಿಲ್ಲ. ಸರ್ಕಾರಿ ವೈದ್ಯರು ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸು ತ್ತಿದ್ದರೆ ಸರ್ಕಾರ ಮಾತ್ರ ಅವರಿಗೆ ಅಗತ್ಯ ವೈದ್ಯಕೀಯ ಸಲಕರಣೆ ಸೇರಿದಂತೆ ಯಾವುದೇ ಸಮರ್ಪಕ ಮೂಲಭೂತ ಸೌಕರ್ಯ ಕಲ್ಪಿಸಿಕೊಡುತ್ತಿಲ್ಲ ಎಂದು ದೂರಿದರು.

ಸರ್ಕಾರ ಎಲ್ಲಾ ಸಮರ್ಪಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಧ್ಯಮಕ್ಕೆ ತಪ್ಪು ಮಾಹಿತಿ ಕೊಡುತ್ತಿದೆ. ವೆಂಟಿಲೇಟರ್ ಸಿಗದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಸುತ್ತಿ ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಹೊರತು ಪಡಿಸಿ ಇತರ ಕಾಯಿಲೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣದಿಂದಲೂ ಹೆಚ್ಚಿನ ರೋಗಿ ಗಳು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ರಾಜ್ಯ ಸರ್ಕಾರದ ವೈಫಲ್ಯಗಳೇ ಕಾರಣ. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿ ವರ ನಡುವೆ ಸಮನ್ವಯತೆಯಿಲ್ಲ. ಇವರ ಒಳಜಗಳದಿಂದ ಬಡ ಕೊರೊನಾ ರೋಗಿ ಗಳ ದುಸ್ಥಿತಿ ಹೇಳತೀರದಾಗಿದೆ. ಸಾವಿರ ವೆಂಟಿಲೇಟರ್ ಖರೀದಿ ಮಾಡಿರುವುದಾಗಿ ಆರೋಗ್ಯ ಸಚಿವರು ಹೇಳಿದ್ದರು. ಆದರೆ ಅವುಗಳು ಏನಾದವು ಎಂಬುದೇ ಗೊತ್ತಾಗು ತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಅಂದು ಮೈಸೂರು ಮಹಾರಾಜರು ಮೈಸೂರು ವೈದ್ಯಕೀಯ ಕಾಲೇಜು, ಕೆಆರ್ ಆಸ್ಪತ್ರೆ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದರು. ಆದರೆ ಆ ಬಳಿಕ ಬಂದ ಸರ್ಕಾರಗಳು ಸಮರ್ಪಕ ಆರೋಗ್ಯ ಸೇವೆ ಕಲ್ಪಿಸುವಲ್ಲಿ ಹಿಂದೆ ಬಿದ್ದಿವೆ. ಈ ನಡುವೆ ಕೊರೊನಾದಂತಹ ಈ ಸಂದರ್ಭದಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಅಂತೂ ಹೇಳತೀರದಾಗಿದೆ ಎಂದರು.

ವಿಮಾ ಪ್ರೀಮಿಯಂ ಪಾವತಿಯೇ ಅನು ಮಾನ: ಮೈಸೂರು ಕೋವಿಡ್ ಆಸ್ಪತ್ರೆ ಯಲ್ಲಿ 250 ಹಾಸಿಗೆ ಸೌಲಭ್ಯವಿದ್ದರೆ, ಇದಕ್ಕೆ ಒತ್ತಡವೂ ಎರಡರಷ್ಟಿದೆ. ಕೆಆರ್ ಆಸ್ಪತ್ರೆ ಯಲ್ಲಿ ಆಮ್ಲಜನಕ ಘಟಕ ಆರಂಭಿಸುವು ದಾಗಿ ಹೇಳಿದ್ದರು. ಆದರೆ ಈವರೆಗೂ ಮಾಡೇ ಇಲ್ಲ. ಕೊರೊನಾ ಸೋಂಕಿತ ಗರ್ಭಿಣಿ ಯರಿಗಾಗಿ ಜಯಲಕ್ಷ್ಮೀಪುರಂನಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿಯೂ ವೆಂಟಿಲೇಟರ್ ಸೇರಿದಂತೆ ಸಮರ್ಪಕ ಮೂಲಭೂತ ಸೌಲಭ್ಯಗಳಿಲ್ಲ. ಕೊರೊನಾ ವಾರಿಯರ್ಸ್ ಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ `ಡಿ’ ದರ್ಜೆ ನೌಕರರೊಬ್ಬರು ಮೃತ ಪಟ್ಟಿದ್ದಾರೆ. ಅವರಿಗೆ ವಿಮಾ ಸೌಲಭ್ಯ ನೀಡಿಲ್ಲ. ಈ ಸಂಬಂಧ ಸರ್ಕಾರದಿಂದ ಪ್ರೀಮಿಯಂ ಪಾವತಿ ಆಗಿರುವುದೇ ಅನು ಮಾನ ಎಂದು ವಾಸು ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನತೆ ಶಾಪ ತಟ್ಟುತ್ತದೆ. ಇವರು ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಹಳಷ್ಟು ಲೋಪಗಳು ಇದ್ದು, ಇದನ್ನು ಅಧಿಕಾರಿ ಗಳ ಮಟ್ಟದಲ್ಲಿ ನಿವಾರಿಸಲು ಸಾಧ್ಯವಿಲ್ಲ. ತುರ್ತಾಗಿ ಔಷಧ ಹಾಗೂ ಸಲಕರಣೆ ತೆಗೆದುಕೊಳ್ಳಲು ವೈದ್ಯಾಧಿಕಾರಿಗಳಿಗೆ ಅವಕಾಶ ವಿಲ್ಲ. ಯುದ್ಧ ಭೂಮಿಗೆ ಬಿಟ್ಟು ಮದ್ದು-ಗುಂಡು ಕೊಡದಂತೆ ಆಗಿದೆ ಸರ್ಕಾರಿ ವೈದ್ಯರ ಪರಿಸ್ಥಿತಿ. ರಾಜ್ಯ ಸರ್ಕಾರ ಮೊದಲು ಬೇರೆ ಬೇರೆ ವೆಚ್ಚಗಳಿಗೆ ಕಡಿವಾಣ ಹಾಕಿ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

Translate »