ಕರ್ನಾಟಕ ಮುಖ್ಯಮಂತ್ರಿ ಮಾಡಲು ಹೊರಟಿವೆ ಬಿಜೆಪಿ, ಆರ್‍ಎಸ್‍ಎಸ್
News

ಕರ್ನಾಟಕ ಮುಖ್ಯಮಂತ್ರಿ ಮಾಡಲು ಹೊರಟಿವೆ ಬಿಜೆಪಿ, ಆರ್‍ಎಸ್‍ಎಸ್

February 7, 2023

ಬೆಂಗಳೂರು, ಫೆ.6(ಕೆಎಂಶಿ)- ಮರಾಠಿ ಪೇಶ್ವೆಗಳ ಡಿಎನ್‍ಎ ಇರುವ ವ್ಯಕ್ತಿಯನ್ನು ಕರ್ನಾ ಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರ್‍ಎಸ್‍ಎಸ್ ಹೊರಟಿವೆ. ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಯಶವಂತಪುರ ವಿಧಾನಸಭೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆಯೇ ಹೊರತು ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಪೇಶ್ವೆಗಳ ಡಿಎನ್‍ಎ ಇರುವ ವ್ಯಕ್ತಿಯನ್ನು ಸಿಎಂ ಮಾಡಲು ಬಿಜೆಪಿಯವರು ಹುನ್ನಾರ ಮಾಡಿ ದ್ದಾರೆ ಎಂದು ಹೇಳಿದ್ದೇನೆ. ಇದಕ್ಕೆ ಗಾಬರಿ ಯಾಕೆ, ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೆ ಅಗೌರವ ತೋರಿಲ್ಲ. ತೋರುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಆ ಸಮಾಜದ ಬಗ್ಗೆ ಅಗೌರವ ತೋರಿದ್ದೇನೆ ಎಂದು ಕೆಲವರು ನನ್ನ ಹೇಳಿಕೆಯನ್ನು ತಿರುಚಿ ಮಾತನಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ನಿನ್ನೆ ನಾನು ಕೊಟ್ಟ ಹೇಳಿಕೆ ಬ್ರಾಹ್ಮಣ ಸಮಾಜದ ಅವಹೇಳನ ಅಲ್ಲ. ಈ ನಮ್ಮ ಭಾಗದ ಬ್ರಾಹ್ಮಣ ಸಮಾಜ ಸುಸಂಸ್ಕೃತ ಸಮಾಜ. ಆ ಬ್ರಾಹ್ಮಣ ಸಮಾಜದ ಬಗ್ಗೆ ನನಗೆ ಗೌರವ ಇದೆ. ನಮ್ಮ ಕುಟುಂಬ ಬ್ರಾಹ್ಮಣ ಸಮಾಜ ಮತ್ತು ಶೃಂಗೇರಿ ಮಠದ ಬಗ್ಗೆ ಗೌರವ ಇಟ್ಟುಕೊಂಡು ನಡೆದುಕೊಂಡು ಬಂದಿದೆ ಎಂದರು.

ಒಳ್ಳೆಯ ಬಿತ್ತನೆಯ ಬೆಳೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿಯ ಪರಿಸ್ಥಿತಿ. ಪ್ರಹ್ಲಾದ್ ಜೋಶಿ ಅಂತಹ ಪಾರ್ಥೇನಿಯಂ. ಹಿಂದೆ ನಿತೀಶ್ ಕುಮಾರ್ ಅವರ ಡಿಎನ್‍ಎ ಬಗ್ಗೆ ಪ್ರಧಾನಿ ಮೋದಿ ಸೇರಿ ಬಿಜೆಪಿಯವರು ಟೀಕೆ ಮಾಡಿಲ್ಲವೇ. ನಾನು ಮಾತನಾಡಿದರೆ ಮಾತ್ರ ಇವರು ಅದಕ್ಕೆ ವಿವಾದದ ಸ್ವರೂಪ ಕೊಡುತ್ತಿದ್ದಾರೆ. ಇವರ ಉದ್ದೇಶ ಎಂಥದ್ದು ಎಂಬುದನ್ನು ಇದರಿಂದ ಅರಿಯಬಹುದು ಎಂದು ಬಿಜೆಪಿ ಮತ್ತು ಪ್ರಹ್ಲಾದ್ ಜೋಶಿ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಶೃಂಗೇರಿ ಚಂದ್ರಮೌಳೇಶ್ವರ ದೇವಾಲಯ ಒಡೆದವರು ಯಾರು. ಗಾಂಧೀಜಿ ಅವರನ್ನು ಕೊಂದವರು ಯಾರು, ಛತ್ರಪತಿ ಶಿವಾಜಿ ಅವರನ್ನು ಹತ್ಯೆ ಮಾಡಿದವರು ಯಾರು, ಅವರೆಲ್ಲ ಪೇಶ್ವೆ ವಂಶದವರು ಅಂತ ಹೇಳಿದ್ದೆ. ಇಂತಹವರನ್ನು ಸಿಎಂ ಮಾಡುವ ಹುನ್ನಾರ ನಡೆದಿದೆ ಎಂದು ಹೇಳಿದ್ದೆ ಎಂದರು. ಒಡೆದು ಹಾಕಲಾಗಿದ್ದ ಚಂದ್ರಮೌಳೇಶ್ವರ ದೇವಸ್ಥಾನವನ್ನು ಶೃಂಗೇರಿ ಮಠದವರು ಪುನರ್ ನಿರ್ಮಾಣ ಮಾಡಬಹುದಾಗಿತ್ತು. ಆದರೆ, ಇತಿಹಾಸ ಎಲ್ಲರಿಗೂ ಗೊತ್ತಾಗಲಿ ಎಂಬ ಉದ್ದೇಶದಿಂದೇನೋ ಅದನ್ನು ಹಾಗೇ ಬಿಟ್ಟಿದ್ದಾರೆ ಎಂದ ಕುಮಾರಸ್ವಾಮಿ, ಯಾರೇ ಆಗಲೀ ಇತಿಹಾಸವನ್ನು ತಿಳಿದು ಮಾತನಾಡಬೇಕು ಎಂದರು. ನಮ್ಮ ಭಾಗದ ಬ್ರಾಹ್ಮಣರು ‘ಸರ್ವೇ ಜನ ಸುಖಿನೋ ಭವಂತು’ ಎಂದು ಹರಸುತ್ತಾರೆ. ಆದರೆ ಪೇಶ್ವೆ ಬ್ರಾಹ್ಮಣರು ‘ಸರ್ವ ಜನ ನಾಶೋ ಭವಂತು’ ಎಂದು ಶಪಿಸುತ್ತಾರೆ. ನಮ್ಮದು ಕುವೆಂಪು ಹೇಳಿದಂತಹ ಸರ್ವ ಜನಾಂಗದ ತೋಟ. ಹೀಗಿರುವಾಗ ಪ್ರಹ್ಲಾದ್ ಜೋಶಿ ಯಂತಹವರು ಮುಖ್ಯಮಂತ್ರಿ ಆಗಬೇಕೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Translate »