ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ: ತ್ವರಿತಗತಿಯಲ್ಲಿ ಸಾಗಿದೆ ಮೈಸೂರು ಭಾಗದ ಕೊನೆಯ ಹಂತದ ಕಾಮಗಾರಿ
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ: ತ್ವರಿತಗತಿಯಲ್ಲಿ ಸಾಗಿದೆ ಮೈಸೂರು ಭಾಗದ ಕೊನೆಯ ಹಂತದ ಕಾಮಗಾರಿ

February 8, 2023

ಮೈಸೂರು, ಫೆ. 7 (ಆರ್‍ಕೆ)- ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಅಂತಿಮ ಹಂತದ ಕಾಮಗಾರಿ ಮೈಸೂರು ಭಾಗದಲ್ಲಿ ತೀವ್ರಗತಿಯಲ್ಲಿ ಸಾಗಿದೆ.

ಮೈಸೂರು ಭಾಗದ ಕಳಸ್ತವಾಡಿ ಮತ್ತು ಸಿದ್ದ ಲಿಂಗಪುರ ಬಳಿ ಹೆದ್ದಾರಿಯಡಿ ಹಾದು ಹೋಗಿ ರುವ ಕಾಲುವೆಗೆ ಸಿಮೆಂಟ್ ಕಾಂಕ್ರೀಟ್ ತಡೆ ಗೋಡೆ ಮತ್ತು ಹಳೇ ಸೇತುವೆ ತೆರವುಗೊಳಿಸಿ ಹೊಸದಾಗಿ ನಿರ್ಮಿಸುವ ಕಾಮಗಾರಿಯನ್ನು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಧಿಕಾರಿಗಳು ಇದೀಗ ಕೈಗೆತ್ತಿಕೊಂಡಿದ್ದಾರೆ.

ಫೆಬ್ರವರಿ ಅಂತ್ಯಕ್ಕೆ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್‍ವೇ ಎನ್‍ಹೆಚ್-275 ಕಾಮಗಾರಿ ಯನ್ನು ಪೂರ್ಣಗೊಳಿಸಬೇಕೆಂಬ ಗುರಿ ಹೊಂದಿ ರುವ ಪ್ರಾಧಿಕಾರವು, ಮಾರ್ಚ್ ಮೊದಲು ಅಥವಾ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ದಶಪಥ ಹೆದ್ದಾರಿಯನ್ನು ಲೋಕಾ ರ್ಪಣೆಗೊಳಿಸುವ ಉದ್ದೇಶದಿಂದ ಅಂತಿಮ ಹಂತದ ಕಾಮಗಾರಿಯನ್ನು ತ್ವರಿತಗತಿಯಿಂದ ನಡೆಸುತ್ತಿದೆ. ಕಳಸ್ತವಾಡಿ ಬಳಿ ಕಾಲುವೆ ಮೇಲೆ ರಸ್ತೆ ಹಾದು ಹೋಗಿದ್ದು, ಅದಕ್ಕೆ ಎರಡೂ ಬದಿಯಲ್ಲಿ ತಡೆ ಗೋಡೆ ನಿರ್ಮಿಸಿ ನೀರು ಸರಾಗವಾಗಿ ಹಾದು ಹೋಗಲು ಅನುವು ಮಾಡಿಕೊಡಲಾಗುವುದು. ರಸ್ತೆ ನಿರ್ಮಾಣವಾಗಿರುವುದರಿಂದ ತಳಭಾಗದಲ್ಲಿರುವ ಕಾಲುವೆಗೆ ನೀರು ಹರಿಸಿದಾಗ ಸಲೀಸಾಗಿ ಹರಿದು ಹೋಗಲು ತೊಂದರೆಯಾಗಿದ್ದರಿಂದ ನೀರು ತುಂಬಿ ಹರಿದು ರಸ್ತೆ ಬದಿಯ ಕೆಲ ಮನೆಗಳಿಗೆ ನುಗ್ಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು.

ಈ ಸಮಸ್ಯೆಯನ್ನು ಅರಿತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಯೋಜನೆಯ ಮೂಲ ವಿನ್ಯಾಸಕ್ಕೆ ಕೆಲ ಮಾರ್ಪಾಡು ಮಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ನಾಲೆಗೆ ತಡೆಗೋಡೆ ನಿರ್ಮಿಸುವ ಕೆಲಸ ವೇಗವಾಗಿ ನಡೆಯುತ್ತಿದೆ. ಅದರಿಂದಾಗಿ ಯಾವುದೇ ಅಡೆತಡೆ ಇಲ್ಲದೆ ಕಾಲುವೆ ನೀರು ಸರಾಗವಾಗಿ ಹರಿದು ಹೋಗಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. 6 ಎಕ್ಸ್‍ಪ್ರೆಸ್ ಮೇನ್ ಕಾರಿಡಾರ್ ಮತ್ತು 4 ಸರ್ವೀಸ್ ರೋಡ್ ಹೊಂದಿರುವ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್‍ವೇ ಮಾರ್ಗ ಮಧ್ಯೆ ಹಲವು ಕಡೆಗಳಲ್ಲಿ ಬರುವ ಅಂಡರ್ ಬ್ರಿಡ್ಜ್, ಓವರ್ ಫ್ಲೈ, ಮೇಲ್ಸೆ ತುವೆ, ಆಗಮನ, ನಿರ್ಗಮನ ಸ್ಥಳಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲ ವಿನ್ಯಾಸವನ್ನು ಬದಲಾಯಿಸಿ ಕಾಮಗಾರಿಗಳನ್ನು ಮಾಡುವುದು ಅನಿವಾರ್ಯವಾಗಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಅದೇ ರೀತಿ ಸಿದ್ದಲಿಂಗಪುರ ಬಳಿ ಇದ್ದ ಹಳೇ ಬ್ರಿಡ್ಜ್ ಅನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡುವ ಕೆಲಸವೂ ವೇಗವಾಗಿ ನಡೆಯುತ್ತಿದ್ದು, 20 ದಿನದೊಳಗಾಗಿ ಕಾಮಗಾರಿ ಮುಗಿಸಿ ರಸ್ತೆ ಉದ್ಘಾಟನೆಗೆ ಅನುವು ಮಾಡಿಕೊಡಲಾಗುವುದು ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.

 

Translate »