ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ಸರಿರಾತ್ರಿ ಮೈಸೂರು ದಂಪತಿಯ ಚಿನ್ನಾಭರಣ, ಹಣ ಸುಲಿಗೆ
ಮೈಸೂರು

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ಸರಿರಾತ್ರಿ ಮೈಸೂರು ದಂಪತಿಯ ಚಿನ್ನಾಭರಣ, ಹಣ ಸುಲಿಗೆ

February 8, 2023

ಮೈಸೂರು, ಫೆ.7(ಎಸ್‍ಬಿಡಿ)- ಬೆಂಗಳೂರಿನಿಂದ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ಮೈಸೂರು ದಂಪತಿಯಿಂದ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಭಾನುವಾರ(ಫೆ.5) ತಡರಾತ್ರಿ ನಡೆದಿದೆ.

ಮೈಸೂರಿನ ರೈಲ್ವೆ ಕಾರ್ಯಾಗಾರ ಕಾಲೋನಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ, ರಾಮಕೃಷ್ಣನಗರ ನಿವಾಸಿ ಎನ್.ನಾಗರಾಜು (58) ಹಾಗೂ ಎಲ್.ಜಯಶ್ರೀ ದಂಪತಿ ಬೆಂಗಳೂರಿನಿಂದ ದಶಪಥ ಹೆದ್ದಾರಿಯಲ್ಲಿ ವಾಪಸ್ಸಾಗುವಾಗ ಮಂಡ್ಯದ ಸಮೀಪ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದಾಗ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕಿ, ನಾಲ್ಕೈದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ್ದಾರೆ.

ಘಟನೆ ವಿವರ: ಶಿಕ್ಷಕ ನಾಗರಾಜು ಪುತ್ರ ಎಂ.ಎನ್. ಮದನ್ ಬೆಂಗಳೂರಿನಲ್ಲಿ ವೃತ್ತಿ ಮಾಡುತ್ತಿದ್ದಾರೆ. ಅಲ್ಲಿಯೇ ಬಾಡಿಗೆ ಮನೆಯಲ್ಲಿರುವ ಅವರು ಶುಕ್ರವಾರ(ಫೆ.3) ಮೈಸೂರಿಗೆ ಬಂದಿದ್ದರು. ತಮ್ಮ ಮಗುವಿನ ನಾಮಕರಣ ಕ್ಕಾಗಿ ಮನೆಯವರೊಂದಿಗೆ ಮದನ್, ಪತ್ನಿಯ ಊರಾದ ಹಿರಿಯೂರಿಗೆ ಶನಿವಾರ ತೆರಳಿದ್ದರು. ಕಾರ್ಯಕ್ರಮದ ಬಳಿಕ ಪತ್ನಿ ಹಾಗೂ ಮಗುವನ್ನು ಮೈಸೂರಿಗೆ ಕರೆತಂದು ಬಿಟ್ಟು, ಭಾನುವಾರ ಬೆಂಗಳೂರಿಗೆ ಹೊರಟಿದ್ದರು. ನಾಗ ರಾಜು ಅವರು ತಮ್ಮ ಸ್ವಿಫ್ಟ್ ಕಾರಿ(ಕೆಎ-09, ಎಂಎಫ್-2831)ನಲ್ಲೇ ಮಗ, ಸೊಸೆ ಹಾಗೂ ಮಗುವನ್ನು ಬೆಂಗ ಳೂರಿಗೆ ಬಿಟ್ಟು ಬರಲು ಹೋಗಿದ್ದರು. ಅವರೊಂದಿಗೆ ಪತ್ನಿ ಜಯಶ್ರೀ ಕೂಡ ತೆರಳಿದ್ದರು. ಸಂಜೆ 5 ಗಂಟೆಗೆ ಬೆಂಗಳೂರು ತಲುಪಿದ ಅವರು ಊಟ ಮುಗಿಸಿ ಕೊಂಡು ರಾತ್ರಿ 10.30ರ ವೇಳೆಗೆ ಅಲ್ಲಿಂದ ಹೊರಟರು. ದಶಪಥ ಹೆದ್ದಾರಿಯಲ್ಲಿ ಬರುತ್ತಿದ್ದ ನಾಗರಾಜು ದಂಪತಿ ತಡರಾತ್ರಿ 1.10ರಲ್ಲಿ ಮಂಡ್ಯ ಸಮೀಪದ ಮಲ್ಲಯ್ಯನ ದೊಡ್ಡಿ ಬಳಿ ಕಾರು ನಿಲ್ಲಿಸಿದ್ದಾಗ ಈ ದುಷ್ಕøತ್ಯ ನಡೆದಿದೆ. `ನಾನು ಮೂತ್ರ ವಿಸರ್ಜನೆ ಬಳಿಕ ನೀರಿನ ಬಾಟಲ್ ತೆಗೆದುಕೊಂಡು ಮುಖ ತೊಳೆದುಕೊಳ್ಳುತ್ತಿದ್ದೆ. ಆಗ 28-30 ವರ್ಷದ ಇಬ್ಬರು ಕಾರಿನ ಬಳಿ ಧಾವಿಸಿದರು. ಅವರಲ್ಲಿ ಒಬ್ಬ ನನ್ನನ್ನು ಡ್ರೈವಿಂಗ್ ಸೀಟ್‍ಗೆ ತಳ್ಳಿ, ಕಾರಿನ ಕೀ ಕಿತ್ತುಕೊಂಡು ಹಿಂದಿನ ಸೀಟ್‍ನಲ್ಲಿ
ಕುಳಿತು ಕತ್ತಿಗೆ ಡ್ರ್ಯಾಗರ್ ಇಟ್ಟು ಬೆದರಿಸಿದ. ಮತ್ತೊಬ್ಬ ಎಡಬದಿಯ ಡೋರ್ ತೆಗೆದು ನನ್ನ ಪತ್ನಿ ಕತ್ತಿಗೆ ಚಾಕು ಇಟ್ಟು ಹೆದರಿಸಿದ. ನನ್ನ ಪತ್ನಿ ಭಯದಿಂದ ಕಿರುಚಿದಾಗ ಆಕೆಗೆ ಥಳಿಸಿ ಕೊಲೆ ಮಾಡುವುದಾಗಿ ಬೆದರಿಸಿದ. ಹಣ, ಒಡವೆ ಎಲ್ಲವನ್ನೂ ಬೇಗ ಕೊಟ್ಟುಬಿಡಿ, ಇಲ್ಲವಾದರೆ ನಿಮ್ಮನ್ನು ಕೊಂದು ಕಿತ್ತುಕೊಂಡು ಹೋಗುತ್ತೇವೆ ಎಂದು ಬೆದರಿಸಿದರು. ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿದ್ದರೂ ನಾವು ಯಾರ ಸಹಾಯ ಕೇಳುವುದಕ್ಕೂ ಆಗದೆ ಭಯದಿಂದ ಕುಳಿತಿದ್ದೆವು. ಆಗ ನನ್ನ ಬಳಿ ಇದ್ದ 20 ಗ್ರಾಂ ಸರ, 1 ಗ್ರಾಂ ಡಾಲರ್, 4 ಗ್ರಾಂ ಉಂಗುರ ಜೇಬಿನಲ್ಲಿದ್ದ 25 ಸಾವಿರ ರೂ. ಹಣ ಹಾಗೂ ನನ್ನ ಪತ್ನಿಯ ಎರಡು ಎಳೆ ಚೈನ್, 2 ಗುಂಡುಗಳು, ತಾಳಿ ಸೇರಿ ಒಟ್ಟು 67 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡರು’ ಎಂದು ನಾಗರಾಜ್ ತಿಳಿಸಿದ್ದಾರೆ.

ನನ್ನ ಪತ್ನಿ ಕೊರಳಿಗೆ ಚಾಕು ಹಿಡಿದಿದ್ದವನು ಚಿನ್ನಾಭರಣ ಕಿತ್ತುಕೊಂಡು ಕಾಲಿನಿಂದಲೇ ಕಾರಿನ ಡೋರ್ ಹಾಕಿ, ಹೆದ್ದಾರಿಯ ಪೆನ್ಸಿಂಗ್ ಹಾರಿ ಸರ್ವೀಸ್ ರಸ್ತೆಯಲ್ಲಿ ಪರಾರಿಯಾದ. ನನಗೆ ಡ್ರ್ಯಾಗನ್ ಹಿಡಿದಿದ್ದವನು ಕಾರಿನ ಕೀ ಕೊಟ್ಟು ಸಾರ್ಟ್ ಮಾಡುವಂತೆ ಹೇಳಿದ. ನಾನು ಸ್ಟಾರ್ಟ್ ಮಾಡಿದ ಕೂಡಲೇ ಆತ ಕಾರಿನಿಂದಿಳಿದು ಎಲ್ಲಿಯೂ ನಿಲ್ಲಿಸಬಾರದು. ಇನ್ನೂ 50 ಕಿಮೀ ದೂರದವರೆಗೂ ನಮ್ಮ ಹುಡುಗರಿದ್ದಾರೆ. ಎಲ್ಲಾದರೂ ಕಾರು ನಿಲ್ಲಿಸಿದರೆ ನಿಮ್ಮ ಪ್ರಾಣ ತೆಗೆಯುತ್ತಾರೆ ಎಂದು ಬೆದರಿಸಿದ. ತುಂಬಾ ಭಯವಾಗಿದ್ದರಿಂದ ಕಾರು ಚಾಲಿಸಿಕೊಂಡು ಮೈಸೂರಿನ ಮಣಿಪಾಲ್ ಆಸ್ಪತ್ರೆ(ಹಿಂದಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ) ಜಂಕ್ಷನ್ ಬಳಿ ನಿಲ್ಲಿಸಿಕೊಂಡು ಪೊಲೀಸರು ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿದೆ. ಸೋಮವಾರ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆವು. ಪೊಲೀಸ್ ಅಧಿಕಾರಿಗಳು ಸ್ಥಳ ಮಹಜರು ನಡೆಸಿ, ಆರೋಪಿಗಳ ಪತ್ತೆ ಹಚ್ಚುವುದಾಗಿ ಭರವಸೆ ನೀಡಿ, ಸ್ಥೈರ್ಯ ತುಂಬಿ ಕಳುಹಿಸಿದರು’ ಎಂದು ವಿವರಿಸಿದರು.

ಫೆನ್ಸಿಂಗ್ ಜಿಗಿದು ಬಂದಿರಬೇಕು: ನಾನು ಕಾರು ನಿಲ್ಲಿಸಿದ ಸ್ಥಳದಲ್ಲಿ ಸರ್ವೀಸ್ ರಸ್ತೆಯಲ್ಲಿ ಮುಚ್ಚಿದ ಅಂಗಡಿ, ಅದರ ಪಕ್ಕದಲ್ಲಿ ಸಿಮೆಂಟ್ ಇಟ್ಟಿಗೆ ಕಾರ್ಖಾನೆ ಇರುವು ದನ್ನು ಗಮನಿಸಿದ್ದೆ. ನಾನು ಮೂತ್ರ ವಿಸರ್ಜನೆ ನಂತರ ಬಾಟೆಲ್ ನೀರಿನಲ್ಲಿ ಮುಖ ತೊಳೆಯುವಷ್ಟರಲ್ಲಿ ಇಬ್ಬರು ಖದೀಮರು ಪ್ರತ್ಯಕ್ಷವಾಗಿದ್ದರು. ಸರ್ವೀಸ್ ರಸ್ತೆ ಕಡೆಯಿಂದ ಫೆನ್ಸಿಂಗ್ ಜಿಗಿದು ಬಂದಿರಬೇಕು. ಒಬ್ಬ ಕುಳ್ಳಗೆ ದಪ್ಪವಾಗಿದ್ದರೆ ಮತ್ತೋರ್ವ ತೆಳ್ಳಗೆ ಉದ್ದವಾಗಿದ್ದ. ಇಬ್ಬರೂ ಜರ್ಕಿನ್ ಧರಿಸಿದ್ದರು. ಒಬ್ಬ ಡ್ರ್ಯಾಗನ್, ಮತ್ತೋರ್ವ ಚಾಕು ಹಿಡಿದುಕೊಂಡಿದ್ದ. ಕತ್ತಿಗೆ ಮಾರಕಾಸ್ತ್ರ ಇಟ್ಟು ಸಾಯಿಸಿಬಿಡುವುದಾಗಿ ಬೆದರಿಸಿದ್ದರಿಂದ ಕಿರುಚುವುದಕ್ಕೂ ಆಗಲಿಲ್ಲ. ಒಬ್ಬ ಕುಯ್ದುಬಿಡು ಎಂದು ಹೇಳುತ್ತಿದ್ದ. ಆ ಕ್ಷಣ ನೆನಪಿಸಿಕೊಂಡರೂ ಭಯವಾಗುತ್ತದೆ. ಜೀವ ಉಳಿದಿದ್ದೇ ಹೆಚ್ಚು ಎನ್ನಿಸುತ್ತದೆ ಎಂದು ಆ ದುಷ್ಟರಿಂದ ಬಚಾವಾಗಿ ಬಂದಿರುವ ಬಗ್ಗೆ ನಾಗರಾಜ್ ಆತಂಕದಿಂದಲೇ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆದ್ದಾರಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

Translate »