ಬಿಜೆಪಿಯಲ್ಲಿ ವೀರಶೈವ  ಮುಖಂಡರು ಮೂಲೆಗುಂಪು
News

ಬಿಜೆಪಿಯಲ್ಲಿ ವೀರಶೈವ ಮುಖಂಡರು ಮೂಲೆಗುಂಪು

February 8, 2023

ಬೆಂಗಳೂರು,ಫೆ.7(ಕೆಎಂಶಿ)-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ದಿಂದ ವೀರಶೈವ ಮುಖಂಡರನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಜೋಶಿ ಅವರ ಬಗ್ಗೆ ನೀಡಿರುವ ಹೇಳಿಕೆ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಇವರು ಅಧಿಕಾರಕ್ಕೆ ಬಂದರೆ, ಕರ್ನಾಟಕ ಶೋಚನೀಯ ಸ್ಥಿತಿ ತಲುಪುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆಯೇ ಹೊರತು, ಯಾವುದೇ ಜಾತಿ, ಸಮಾಜಕ್ಕೆ ಅಗೌರವ ತೋರಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಭಾವಿಸುವ ಬ್ರಾಹ್ಮಣರ ಬಗ್ಗೆ ಮಾತನಾಡಿಲ್ಲ. ಗಾಂಧೀ ಕೊಂದ ಕುಟುಂಬ, ಶೃಂಗೇರಿಯನ್ನು ವಿಭಜನೆ ಮಾಡಿದ್ದ ಡಿಎನ್‍ಎ ಬಗ್ಗೆ ಅಷ್ಟೇ ಮಾತನಾಡಿದ್ದೇನೆ, ಅದಕ್ಕೆ ಈಗಲೂ ಬದ್ಧ ಎಂದು ಸಮರ್ಥಿಸಿಕೊಂಡರು. ಈ ಡಿಎನ್‍ಎ ಸಂಸ್ಕೃತಿ ಅವರಿಗೆ ಅಧಿಕಾರ ನೀಡಬಾರದು ಎಂಬು ದಷ್ಟೇ ನನ್ನ ಕಳಕಳಿ. ಮುಂದಾಗುವ ಅನಾಹುತ ತಪ್ಪಿಸಲು ಹೇಳಿಕೆ ನೀಡಿದ್ದೇನೆ. ಮುಖ್ಯಮಂತ್ರಿ ಸ್ಥಾನದಲ್ಲಿ ಬಸವರಾಜ ಬೊಮ್ಮಾಯಿ ಕೂರಿಸಿ ಯಾರು ಆಡಳಿತ ಮತ್ತು ರಾಜಕೀಯ ಮಾಡು ತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಹೆಸರಲ್ಲಿ ಹಿಂಬಾಗಿಲಿನಿಂದ ಎಲ್ಲವನ್ನು ನಡೆಸುತ್ತಿದ್ದಾರೆ. ಯಡಿ ಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ತಕ್ಷಣ ಬಿಜೆಪಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪ್ರಧಾನಿ ಅವರಿದ್ದ ವೇದಿಕೆ ಏರಲು ಬಿಡಲಿಲ್ಲ. ಇದೆಲ್ಲ ಏನನ್ನು ತೋರಿಸುತ್ತದೆ ಎಂದರು. ಡಿಎನ್‍ಎ ಬಗ್ಗೆ ಹೇಳಿಕೆ ನೀಡಿದ ನಂತರ ಬಿಜೆಪಿಯ ಕೆಲವು ನಾಯಕರು ಹೇಳಿಕೆ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಅಶ್ವತ್ಥನಾರಾಯಣ ಅವರು, ಮತ ವಿಭಜನೆ ಆಗುವುದಿಲ್ಲ. ನಮ್ಮದು ಲೂಟಿ ಕುಟುಂಬ ಎಂದಿದ್ದಾರೆ. ನಾವಲ್ಲ, ಲೂಟಿ ಮಾಡುತ್ತಿರುವುದು ಇವರು. ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಬಿಎಂಎಸ್ ಶಿಕ್ಷಣ ಸಂಸ್ಥೆಯನ್ನು ಉದ್ದಿಮೆದಾರರಿಗೆ ಮಾರಾಟ ಮಾಡಿ ಅವರೊಂದಿಗೆ ಯಾವ ರೀತಿ ಭಕ್ಷ್ಯ ಭೋಜನ ಸೇವಿಸುತ್ತಿದ್ದಾರೆ ನೋಡಿ ಎಂದು ಕೆಲವು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದರು. ಮುಂದಿನ ಚುನಾವಣೆಯಲ್ಲಿ ಲಿಂಗಾಯಿತ ಸಮುದಾಯ ದವರೇ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

Translate »