ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ್ ಅವರ  `ಬಿಜೆಪಿ ನಾ ಕಂಡಂತೆ 1990-2020’ ಪುಸ್ತಕ ಬಿಡುಗಡೆ
ಮೈಸೂರು

ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ್ ಅವರ `ಬಿಜೆಪಿ ನಾ ಕಂಡಂತೆ 1990-2020’ ಪುಸ್ತಕ ಬಿಡುಗಡೆ

December 31, 2021

ಮೈಸೂರು, ಡಿ.30(ಎಸ್‍ಬಿಡಿ)- ಮೈಸೂರು ಜಿಲ್ಲೆ (ಗ್ರಾಮಾಂತರ)ಯಲ್ಲಿ ಕಳೆದ ಮೂರು ದಶಕಗಳ ಬಿಜೆಪಿ ಸಂಘಟನೆ, ಬೆಳವಣಿಗೆ ಇನ್ನಿತರ ಸಂಗತಿಗಳನ್ನೊಳಗೊಂಡ ಪುಸ್ತಕ ಗುರುವಾರ ಬಿಡುಗಡೆಯಾಯಿತು.

ಮೈಸೂರಿನ ನಜರ್‍ಬಾದ್‍ನ ವಿಕೆ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಎಸ್.ಆರ್.ಗೋಪಾಲ ರಾವ್ ರಚಿಸಿರುವ `ಬಿಜೆಪಿ ನಾ ಕಂಡಂತೆ 1990-2020’ ಪುಸ್ತಕವನ್ನು ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಬಿಡುಗಡೆ ಮಾಡಿ, ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಮೈಸೂರು ವಿಭಾಗ ಉಸ್ತುವಾರಿ ಮೈ.ವಿ.ರವಿ ಶಂಕರ್ ಪುಸ್ತಕ ಕುರಿತು ಮಾತನಾಡಿ, ಎಲ್ಲರೊಡನೆ ಬೆರೆತು, ಉತ್ತಮ ಒಡನಾಟ ಹೊಂದಿರುವ ಎಸ್.ಆರ್.ಗೋಪಾಲ ರಾವ್ ಪಕ್ಷಕ್ಕೆ ಸಂಬಂಧಿಸಿದ ಹಲವು ಮಹತ್ವದ ಸಂಗತಿಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. 30 ವರ್ಷಗಳ ಪಕ್ಷದ ಇತಿಹಾಸ ವನ್ನು ಸರಳ ಭಾಷೆಯಲ್ಲಿ ತಿಳಿಸಿದ್ದಾರೆ. ತೋಂಟದಾರ್ಯ, ಡಾ.ತಮ್ಮಯ್ಯ ಸೇರಿದಂತೆ ಕಷ್ಟದ ಸಂದರ್ಭದಲ್ಲಿ ಪಕ್ಷ ಕಟ್ಟಿ, ಬೆಳೆಸಿದ ಮುಖಂಡರು, ಕಾರ್ಯಕರ್ತರಿಂದ ಹಿಡಿದು ಪ್ರಸ್ತುತದ ಪರಿಸ್ಥಿತಿವರೆಗೂ ವಿವರಿಸಿದ್ದಾರೆ. ಖುಷಿಯ ವಿಚಾರಗಳ ಜೊತೆಗೆ ಕಾರ್ಯಕರ್ತರು ತಿಳಿಯಬೇಕಾದ ಹಲವು ವಿಚಾರಗಳನ್ನು ನಿರ್ದಾಕ್ಷಿಣ್ಯವಾಗಿ ತಿಳಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ, ಬೆಳೆಸುವಲ್ಲಿ ಹಿರಿಯ ಚೇತನಗಳ ಕೊಡುಗೆ ಅವಿಸ್ಮರಣೀಯ. ಆದರೆ ಹೊಸ ಚಿಂತನೆಗಳು ಇನ್ನಿತರ ಕಾರಣಗಳಿಂದ ಹಿರಿಯರನ್ನು ಸ್ಮರಿಸುವ ವಾಡಿಕೆ ಸಹಜವಾಗಿ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಗೋಪಾಲ ರಾವ್ ಅವರ ಪುಸ್ತಕ ಹೆಚ್ಚು ಮಹತ್ವ ಪಡೆಯುತ್ತದೆ. ಮೂರು ದಶಕಗಳಲ್ಲಿ ಪಕ್ಷಕ್ಕಾಗಿ ಶ್ರಮಿಸಿದವರು, ಚುನಾವಣೆ ಸಂದರ್ಭ, ಫಲಿತಾಂಶದ ಪರಿಣಾಮ ಹೀಗೆ ಎಲ್ಲಾ ವಿಚಾರಗಳನ್ನೂ ಈ ಪುಸ್ತಕದಿಂದ ತಿಳಿಯಬಹುದು. ಈ ಪುಸ್ತಕ ಯುವ ಕಾರ್ಯಕರ್ತರಿಗೆ ಕೈಪಿಡಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲೇಖಕ ಎಸ್.ಆರ್.ಗೋಪಾಲ ರಾವ್ ಮಾತನಾಡಿ, ತೋಂಟದಾರ್ಯ, ಪುಟ್ಟಬುದ್ದಿ ಸೇರಿದಂತೆ ಪಕ್ಷದ ಹಿರಿಯ ರೊಂದಿಗೆ ಮಾತನಾಡಿ, ಮಹತ್ವದ ವಿಚಾರಗಳನ್ನು ಸಂಗ್ರಹಿಸಿ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಮೈಸೂರಿಗೆ ಭೇಟಿ ನೀಡಿದ್ದ ರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ಸ್ಥಳೀಯ ನಾಯಕರ ಅಪರೂಪದ ಫೋಟೋ ಸೇರಿದಂತೆ ಹೆಚ್ಚಿನವರಿಗೆ ತಿಳಿಯದ ವಿಚಾರಗಳು ಪುಸ್ತಕದಲ್ಲಿವೆ. ಹಿರಿಯರು ಹಾಗೂ ಯುವ ಸಮುದಾಯವನ್ನು ಬೆಸೆಯುವ ಉದ್ದೇಶದಿಂದ ಈ ಪುಸ್ತಕ ರಚಿಸಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್, ವಿಧಾನಪರಿಷತ್ ಮಾಜಿ ಸದಸ್ಯ ತೋಂಟ ದಾರ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಪಕ್ಷದ ಹಿರಿಯ ಮುಖಂಡ ಪುಟ್ಟಬುದ್ದಿ, ಮಾಜಿ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ, ಜಿಲ್ಲಾ ಮಾಧ್ಯಮ ಪ್ರಮುಖ್ ಎನ್.ರಾಜ್‍ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »