ಮೈಸೂರಿನ ಮಾತೃಮಂಡಳಿ ವೃತ್ತ ತೆರವು
ಮೈಸೂರು

ಮೈಸೂರಿನ ಮಾತೃಮಂಡಳಿ ವೃತ್ತ ತೆರವು

December 31, 2021

ಮೈಸೂರು, ಡಿ.30(ಆರ್‍ಕೆ)- ವಿವಾದಕ್ಕೀಡಾ ಗಿದ್ದ ಮೈಸೂರಿನ ವಿವಿ ಮೊಹಲ್ಲಾದ ಮಾತೃ ಮಂಡಳಿ ಜಂಕ್ಷನ್‍ನಲ್ಲಿದ್ದ ವೃತ್ತವನ್ನು ನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಸರ್ಪ ಗಾವಲಿನಲ್ಲಿ ಗುರುವಾರ ತೆರವುಗೊಳಿಸಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದ ಭಾರೀ ಪೊಲೀಸ್ ಬಿಗಿ ಭದ್ರತೆ ನಡುವೆ ಮೈಸೂರು ನಗರ ಪಾಲಿಕೆ ವಲಯ ಕಚೇರಿ-4ರ ವಲಯಾಧಿಕಾರಿ ಚಂದ್ರಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮೊದಲಿಗೆ ವೃತ್ತದಲ್ಲಿ ಅಳವಡಿಸಿದ್ದ ಇಬ್ಬರು ಮಹನೀಯರ ಭಾವಚಿತ್ರ, ಕಟೌಟ್‍ಗಳನ್ನು ಗೌರವಯುತವಾಗಿ ಅಲ್ಲಿಂದ ತೆರವುಗೊಳಿಸಿದ ನಂತರ ಜೆಸಿಬಿ ಮೂಲಕ ವೃತ್ತವನ್ನು ತೆರವು ಗೊಳಿಸಲಾಯಿತು. ಇಂದು ಬೆಳಗ್ಗೆ 10.30 ಗಂಟೆಗೆ ಕಾರ್ಯಾಚರಣೆ ಆರಂಭಿಸಿ ಕೇವಲ ಒಂದೇ ಗಂಟೆಯಲ್ಲಿ ತೆರವುಗೊಳಿಸಿ, ಆ ಸ್ಥಳ ವನ್ನು ಸಮತಟ್ಟು ಮಾಡಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ಬಂಧನ-ಬಿಡುಗಡೆ: ವೃತ್ತ ತೆರವುಗೊಳಿಸುವ ಸಂದರ್ಭದಲ್ಲಿ ಕೆಲ ಯುವಕರ ಗುಂಪು ಅಡ್ಡಿ ಪಡಿಸಿ ಪ್ರತಿರೋಧ ವ್ಯಕ್ತಪಡಿಸಿತು. ಅಲ್ಲದೆ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿ ಗಳೊಂದಿಗೆ ವಾಗ್ವಾದ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾ ಯಿತು. ಪರಿಸ್ಥಿತಿ ಕೈ ಮೀರದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು, 10 ಮಂದಿಯನ್ನು ಬಂಧಿಸಿ, ಮಧ್ಯಾಹ್ನ ಬಿಡುಗಡೆ ಮಾಡಿದರು.

ಈ ವೃತ್ತದಲ್ಲಿ ಇಬ್ಬರು ಮಹನೀಯರ ಭಾವ ಚಿತ್ರವಿರುವ ಫ್ಲೆಕ್ಸ್‍ಗಳನ್ನು ಅಳವಡಿಸಿದ್ದರಿಂದ ಆಗಿಂದಾಗ್ಗೆ ವಿವಾದ ಸೃಷ್ಟಿಯಾಗುತ್ತಿತ್ತು. ನಗರ ಪಾಲಿಕೆಯಿಂದ ಇನ್ನೂ ನಾಮಕರಣವಾಗದ ವೃತ್ತಕ್ಕೆ ಮಹನೀಯರ ಹೆಸರಿಡುವಂತೆ ಒತ್ತಾ ಯಿಸಿದ್ದು ಹಾಗೂ ಅವರ ಫೋಟೋ ಅಳವಡಿ ಸಿದ್ದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಉಭಯ ಬಣಗಳು ಪಟ್ಟು ಸಡಿಲಿಸದ ಹಿನ್ನೆಲೆ ಯಲ್ಲಿ ಪಾಲಿಕೆ ಅಧಿಕಾರಿಗಳು ಇಂದು ವೃತ್ತ ನಿರ್ಮಾಣವನ್ನೇ ತೆರವುಗೊಳಿಸಿದ್ದಾರೆ.

ಇದನ್ನು ಖಂಡಿಸಿ ಕೆಲವರು ಧರಣಿ ನಡೆಸಿದರಾದರೂ ವೃತ್ತಕ್ಕೆ ನಾಮಕರಣ ವಿಚಾರವಾಗಿ ನಿರ್ಧಾರವಾಗುವವರೆಗೆ ಯಾವುದೇ ಫ್ಲೆಕ್ಸ್, ಬ್ಯಾನರ್, ಕಟೌಟ್ ಅಳವಡಿಸುವಂತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು. ಈ ವೇಳೆ ಪೊಲೀಸರು ಧರಣಿ ನಿರತರ ಮನವೊಲಿಸಿ, ವಾತಾವರಣ ತಿಳಿಗೊಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಮಾತೃಮಂಡಳಿ ಜಂಕ್ಷನ್‍ನಲ್ಲಿ ಕೆಎಸ್‍ಆರ್‍ಡಿ, ಸಿಎಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ನಿರ್ಮಾಣ ತೆರವುಗೊಳಿಸಿರುವ ಜಾಗಕ್ಕೆ ಬೇಗ ಡಾಂಬರೀಕರಣ ಮಾಡಿ ರಸ್ತೆಯನ್ನಾಗಿ ಪರಿವರ್ತಿಸಿ ವಾಹನ ಸಂಚಾರಕ್ಕೆ ಅನುವು ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಪಾಲಿಕೆ ವಲಯ ಕಚೇರಿ-4ರ ಅಭಿವೃದ್ಧಿ ಅಧಿಕಾರಿ ಮೇಘಾನಂದ, ಅಸಿಸ್ಟೆಂಟ್ ರೆವಿನ್ಯೂ ಆಫೀಸರ್ ಸತೀಶ್, ಎನ್‍ಆರ್ ಉಪವಿಭಾಗದ ಎಸಿಪಿ ಎಂ.ಶಿವಶಂಕರ, ವಿವಿ ಪುರಂ ಠಾಣೆ ಇನ್‍ಸ್ಪೆಕ್ಟರ್ ವೆಂಕಟೇಶ್, ಸಬ್ ಇನ್ಸ್‍ಪೆಕ್ಟರ್ ರಾಧ ಹಾಗೂ ಇತರರು ತೆರವು ಕಾರ್ಯಾಚರಣೆ ವೇಳೆ ಹಾಜರಿದ್ದರು.

ಸಿಗ್ನಲ್ ಅಳವಡಿಸಲು ಆಗ್ರಹ: ಇಬ್ಬರು ಮಹನೀಯರ ಹೆಸರನ್ನು ಮುಂದಿಟ್ಟು ಕೊಂಡು ಹೀಗೆ ವಿವಾದ ಮಾಡಿಕೊಳ್ಳುವುದು ಯಾರಿಗೂ ಗೌರವವಲ್ಲ. ಹೀಗೆ ವಿವಾದ ಸೃಷ್ಟಿಯಾಗುವುದಾದರೆ ಯಾರ ಫ್ಲೆಕ್ಸ್ ಅಳವಡಿಸುವುದಕ್ಕೂ ಅವಕಾಶ ಮಾಡಿಕೊಡಬಾರದು. ಇಲ್ಲಿ ಆಕರ್ಷಕವಾದ ಕಾರಂಜಿ ನಿರ್ಮಿಸಿ ಜಂಕ್ಷನ್‍ನ ಅಂದ ಹೆಚ್ಚಿಸಬಹುದು. ಜೊತೆಗೆ ಸಿಗ್ನಲ್(ಸಂಚಾರ ದೀಪ) ಅಳವಡಿಸುವ ಮೂಲಕ ಸುಗಮ-ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವೃತ್ತವಿದ್ದ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸುವ ಮೂಲಕ ಅಪಘಾತವಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿದುಬಂದಿದೆ.

2 ಕೋಟಿಯಲ್ಲಿ ವೃತ್ತ: ಮಾತೃ ಮಂಡಳಿ ಜಂಕ್ಷನ್‍ನಲ್ಲಿ 2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವೃತ್ತ ಅಭಿವೃದ್ಧಿಗೊಳಿಸುವ ಯೋಜನೆಯಿದ್ದು, ಈಗಾಗಲೇ ಅನುದಾನ ಮೀಸಲಿಡಲಾಗಿದೆ. ಇನ್ನೊಂದು ತಿಂಗಳಲ್ಲಿ ಅತ್ಯಾಕರ್ಷಕ ವೃತ್ತ ನಿರ್ಮಾಣ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ ಎಂದು ನಗರ ಪಾಲಿಕೆ ಮೂಲಗಳಿಂದ ತಿಳಿದುಬಂದಿದೆ.

Translate »