ಇಂದು ಕರ್ನಾಟಕ ಬಂದ್ ಇಲ್ಲ
News

ಇಂದು ಕರ್ನಾಟಕ ಬಂದ್ ಇಲ್ಲ

December 31, 2021

ಬೆಂಗಳೂರು: ‘ಕರ್ನಾಟಕ ಬಂದ್’ ವಾಪಸ್ ಪಡೆದಿದ್ದೇವೆ, ಆದರೆ ರ್ಯಾಲಿ ಇರುತ್ತದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ಶುಕ್ರವಾರ ನಡೆಯ ಬೇಕಾಗಿದ್ದ ‘ಕರ್ನಾಟಕ ಬಂದ್’ ವಾಪಸ್ ಪಡೆದಿದ್ದೇವೆ. ಆದರೆ ಬೆಂಗಳೂರು ಟೌನ್‍ಹಾಲ್ ಮುಂಭಾಗದಿಂದ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು ಎಂದು ಆಗ್ರಹಿಸಿ ಈ ರ್ಯಾಲಿ ನಡೆಸಲಾಗುತ್ತಿದ್ದು, ಎಂಇಎಸ್ ವಿರುದ್ಧದ ಹೋರಾಟದ ಬಗ್ಗೆ ಶೀಘ್ರವೇ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ರೂಪು-ರೇಷೆಗಳನ್ನು ಸಿದ್ಧಪಡಿಸಲಾಗು ವುದು ಎಂದು ಅವರು ಇದೇ ವೇಳೆ ತಿಳಿಸಿದರು.

ಇಂದು ಎಲ್ಲಾ ವಹಿವಾಟು ನಡೆಸಬಹುದು:

ಸಿಎಂ ಬೆಂಗಳೂರು: ಕನ್ನಡದ ರಕ್ಷಣೆಗೆ ಸರ್ಕಾರ ಯಾವತ್ತೂ ಬದ್ಧವಾಗಿದೆ. ಕನ್ನಡ ಸಂಘಟನೆ ನಾಳೆ (ಶುಕ್ರವಾರ) ಕರೆ ಕೊಟ್ಟಿರುವ ಬಂದ್‍ನ್ನು ವಾಪಸ್ ತೆಗೆದುಕೊಂಡಿದೆ. ನಾಳೆ (ಡಿ.31) ಬಂದ್ ಇಲ್ಲ. ಎಲ್ಲರೂ ಎಂದಿನಂತೆ ವ್ಯಾಪಾರ ವ್ಯವಹಾರಗಳನ್ನು ನಡೆಸಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕನ್ನಡ ಸಂಘಟನೆಯ ಮುಖಂಡರೊಂದಿಗೆ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡದ ಹಿರಿಯ ಕಟ್ಟಾಳು ವಾಟಾಳ್ ನಾಗರಾಜ್ ಬಂದ್‍ಗೆ ಕರೆ ಕೊಟ್ಟಿದ್ದರು. ಮೊನ್ನೆ ಸಹ ನಾನು ವಾಟಾಳ್ ಜೊತೆ ಮಾತನಾಡಿದ್ದೆ. ಇಂದು ನನ್ನ ಮನವಿಗೆ ಗೌರವ ಕೊಟ್ಟು ಬಂದ್ ಹಿಂಪಡೆದಿದ್ದಾರೆ. ನಾಳೆ ಬಂದ್ ಇರುವುದಿಲ್ಲ ವ್ಯಾಪಾರ ವ್ಯವಹಾರಗಳಿಗೆ ಯಾವುದೇ ತೊಡಕಾಗುವುದಿಲ್ಲ. ಕನ್ನಡಿಗರ ಗಡಿ, ಕನ್ನಡಿಗರ ರಕ್ಷಣೆಗೆ ನಾವು ಯಾವತ್ತೂ ಸಿದ್ಧ. ಎಂಇಎಸ್ ಬಗ್ಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಬಂದ್ ವಾಪಸ್ ಪಡೆದ ಎಲ್ಲರಿಗೂ ಧನ್ಯವಾದಗಳು ಎಂದರು.

ಬೆಂಗಳೂರು, ಡಿ.30- ಬೆಳಗಾವಿಯಲ್ಲಿ ಪುಂಡಾಟ ನಡೆಸಿದ ಎಂಇಎಸ್ ಸಂಘಟನೆಯನ್ನು ನಿಷೇಧಿಸು ವಂತೆ ಒತ್ತಾಯಿಸಿ ನಾಳೆ (ಡಿ.31) ಕರೆಯಲಾಗಿದ್ದ `ಕರ್ನಾಟಕ ಬಂದ್’ ಹಿಂಪಡೆಯಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಪರ ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಹೊಸ ವರ್ಷ ಆಚರಣೆಗೆ ಉಂಟಾಗಿದ್ದ ಅಡ್ಡಿ-ಆತಂಕಗಳು ಇದರಿಂದ ನಿವಾರಣೆಯಾದಂತಾಗಿದೆ.
ಹೊಸ ವರ್ಷ ಆಚರಣೆಯ ಮುನ್ನಾ ದಿನವಾದ ಡಿ.31ರಂದು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕನ್ನಡಪರ ಸಂಘಟನೆ ಗಳೇ ಅಪಸ್ವರ ಎತ್ತಿದ್ದವು. ಇದರೊಂದಿಗೆ ಸಾರ್ವ ಜನಿಕರು ಸಹ ತಮ್ಮ ಹೊಸ ವರ್ಷ ಆಚರಣೆಗೆ ಅಡ್ಡಿಯಾಗುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು `ಕರ್ನಾಟಕ ಬಂದ್’ ಕುರಿತು ಚರ್ಚಿಸಲು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರಿಗೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರುಗಳು ಸಭೆಯಲ್ಲಿ ಪಾಲ್ಗೊಂಡು, ಚರ್ಚಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡಪರ ಸಂಘಟನೆ ಮುಖ್ಯಸ್ಥರೊಂದಿಗೆ ಮಾತನಾಡಿ ಸರ್ಕಾರ ಕನ್ನಡ ನಾಡು, ನುಡಿಗೆ ಅನ್ಯಾಯವಾಗಲು ಬಿಡಲ್ಲ. ನಾಡು, ನುಡಿ ರಕ್ಷಣೆಗೆ ಬದ್ಧವಾಗಿದ್ದು, ನಿಮ್ಮ ಆಶಯದಂತೆ ಎಂಇಎಸ್ ಮೇಲೆ ಕ್ರಮ ಜರುಗಿಸಲು ಕಾಲಾವ ಕಾಶ ಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್, ಮುಖ್ಯಮಂತ್ರಿಗಳ ಮಾತಿಗೆ ಸಮ್ಮತಿಸಿ ನಾಳಿನ `ಕರ್ನಾಟಕ ಬಂದ್’ ವಾಪಸ್ ಪಡೆಯಲು ತೀರ್ಮಾನಿಸಿದರಲ್ಲದೆ, ಜ.22ರವರೆಗೆ ಗಡುವು ನೀಡುವುದಾಗಿಯೂ ತಿಳಿಸಿದ್ದಾರೆ.

ಸಭೆಯ ನಂತರ ಹೊರ ಬಂದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕನ್ನಡ ಸಂಘಟನೆಗಳು ನಾಳೆ (ಶುಕ್ರವಾರ) ಕರೆ ನೀಡಿದ್ದ ಕರ್ನಾಟಕ ಬಂದ್ ಕೈ ಬಿಡಲು ಸಮ್ಮತಿಸಿದ್ದು, ನಾಳೆ ಕರ್ನಾಟಕ ಬಂದ್ ಇರುವುದಿಲ್ಲ ಎಂದರು.

ನನ್ನ ಮನವಿಗೆ ಓಗೊಟ್ಟು, ಕರ್ನಾಟಕ ಬಂದ್ ಕೈ ಬಿಟ್ಟಿರುವ ಕನ್ನಡಪರ ಹೋರಾಟ ಗಾರರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಮಾತನಾಡಿ, ಮುಖ್ಯಮಂತ್ರಿ ಮಾತಿಗೆ ಬೆಲೆ ಕೊಟ್ಟು ನಾಳೆ ಕರೆಯಲಾಗಿದ್ದ `ಕರ್ನಾಟಕ ಬಂದ್’ ವಾಪಸ್ ಪಡೆದಿದ್ದೇವೆ ಎಂದರಲ್ಲದೆ, ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡಲಾಗುವುದು ಎಂದರು.

ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಕಾಲಾವಕಾಶ ಕೋರಿರುವುದರಿಂದ, ನಾಳೆ (ಡಿ.31) ಕರೆ ನೀಡಿದ್ದ `ಕರ್ನಾಟಕ ಬಂದ್’ ವಾಪಸ್ ಪಡೆದಿದ್ದೇವೆ ಎಂದರು.

ತಜ್ಞರ ಜೊತೆ ಚರ್ಚಿಸಲು ಕಾಲಾವಕಾಶ ಬೇಕು ಎಂದು ಮುಖ್ಯಮಂತ್ರಿಗಳು ಕೋರಿದ್ದಾರೆ. ಜ.22ರೊಳಗೆ ಎಂಇಎಸ್ ಮೇಲೆ ಕ್ರಮ ಜರುಗಿಸದಿದ್ದರೆ ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ಎಂದು ಅವರು ನುಡಿದರಲ್ಲದೆ ಬಂದ್ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಗಳು ಮಾತುಕತೆಗೆ ಆಹ್ವಾನಿಸಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರು ಕನ್ನಡ ಚಳವಳಿ ಮುಖಂಡರಾದ ಪ್ರವೀಣ್ ಶೆಟ್ಟಿ, ಕೆ.ಆರ್.ಕುಮಾರ್ ಮತ್ತು ಮಂಜುನಾಥ್ ಅವರೊಂದಿಗೆ ಮಾತುಕತೆ ನಡೆಸಿ ಜ.22ರೊಳಗೆ ಎಂಇಎಸ್ ಸಂಘಟನೆ ಮೇಲೆ ಕ್ರಮ ಜರುಗಿಸದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು. ಆಗ ನೀವು ಬಂದ್‍ಗೆ ಬೆಂಬಲ ನೀಡಬೇಕು. ಈ ಮಾತಿಗೆ ನೀವು ಒಪ್ಪುವುದಾದರೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಬರುವುದಾಗಿ ತಿಳಿಸಿದರು. ವಾಟಾಳ್ ನಾಗರಾಜ್ ಅವರ ಷರತ್ತಿಗೆ ಈ ಮೂವರು ನಾಯಕರು ಒಪ್ಪಿಕೊಂಡ ನಂತರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಬಂದ್ ತೀರ್ಮಾನ ಕೈ ಬಿಡಲು ನಿರ್ಧರಿಸಲಾಯಿತು ಎನ್ನಲಾಗಿದೆ.

Translate »