ನರಸೀಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ
ಮೈಸೂರು ಗ್ರಾಮಾಂತರ

ನರಸೀಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ

April 7, 2020

ತಿ.ನರಸೀಪುರ ಏ.6(ಎಸ್‍ಕೆ)-ಕೊರೊನಾ ಸೋಂಕು ನಿಯಂತ್ರಣಕ್ಕೆ ಸ್ವಚ್ಛತಾ ಕಾರ್ಯದ ಮೂಲಕ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಸನ್ಮಾನಿಸಿ, ಹಿರಿಯ ಖಾಸಗಿ ವೈದ್ಯರನ್ನು ಗೌರವಿಸಿ, ಬಡವರಿಗೆ ಆಹಾರ ಪದಾರ್ಥ ವಿತರಿಸುವ ಮೂಲಕ ಪಟ್ಟಣದಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಬಾಳೆ ಮಂಡಿಯ ಮುಂಭಾಗ ಸರಳವಾಗಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತೆಗೆ ದುಡಿಯುತ್ತಿರುವ ಇಬ್ಬರು ಪೌರ ಕಾರ್ಮಿಕರನ್ನು ಸನ್ಮಾನಿಸಿ, ಹಲವು ಕಾರ್ಮಿಕರಿಗೆ ದವಸ-ಧಾನ್ಯಗಳನ್ನು ವಿತರಿಸಲಾಯಿತು. ನಂತರ ಆಲಗೂಡು ಗ್ರಾಮಕ್ಕೆ ತೆರಳಿ, ಲಾಕ್‍ಡೌನ್ ಜಾರಿಯಲ್ಲಿರುವ ಪರಿಣಾಮ ಕೂಲಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಹಿರಿಯ ಖಾಸಗಿ ವೈದ್ಯ ಡಾ.ಬಸವಣ್ಣರನ್ನು ಗೌರವಿಸಲಾಯಿತು. ನಂತರ ಬ್ಯಾಂಕ್‍ವೊಂದರಲ್ಲಿ ರಕ್ಷಣಾ ಕರ್ತವ್ಯ ನಿರ್ವಹಿಸುತ್ತಿರುವ ನಿವೃತ್ತ ಸೈನಿಕನನ್ನೂ ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ ಮಾತನಾಡಿ, ಜಗತ್ತನ್ನೇ ಬಾಧಿಸುತ್ತಿರುವ ಕೊರೊನಾವನ್ನು ನಿಯಂತ್ರಣಕ್ಕೆ ತರಲು ವೈದ್ಯರು ಹಾಗೂ ಶ್ರುಶ್ರೂಷಕಿಯರು ದುಡಿಯುತ್ತಿದ್ದಾರೆ. ಅಲ್ಲದೆ ಸ್ವಚ್ಛತೆ ಕಾಪಾಡುವ ಮೂಲಕ ಪೌರ ಕಾರ್ಮಿಕರು ದುಡಿಯುತ್ತಿರುವುದನ್ನು ನಾವು ಸ್ಮರಿಸಬೇಕು ಎಂದರು.

ವರುಣಾ ಕ್ಷೇತ್ರಾಧ್ಯಕ್ಷ ಕೆ.ಬಿ.ವಿಜಯಕುಮಾರ್ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕಾ.ಪು.ಸಿದ್ದವೀರಪ್ಪ, ಆಲಗೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವೀರಭದ್ರಪ್ಪ, ಪುರಸಭೆ ಸದಸ್ಯ ಎಸ್.ಕೆ.ಕಿರಣ, ವಕೀಲ ಪರಮೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಡವಾಡಿ ಎನ್.ಮಹೇಶ್, ನಂದೀಶ್ ಬೆಳ್ಳಯ್ಯ, ಭಾಗ್ಯಶ್ರೀ ಭಟ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎಂ.ವಿಜಯಕುಮಾರ್, ಉಪಾಧ್ಯಕ್ಷ ಎಂ.ವೆಂಕಟರಮಣಶೆಟ್ಟಿ, ವರುಣಾ ಪ್ರಧಾನ ಕಾರ್ಯದರ್ಶಿ ಎ.ಎನ್.ರಂಗೂನಾಯಕ, ವರುಣಾ ಮಂಜು, ಮುಖಂಡರಾದ ಕುಪ್ಪೇಗಾಲ ಶಿವಬಸಪ್ಪ, ಕೆ.ಗಣೇಶ, ಡಿ.ಎಲ್.ಮಹದೇವಪ್ಪ, ನಾಗರಾಜು ಸೇರಿದಂತೆ ಇನ್ನಿತರರಿದ್ದರು.

Translate »