ನಿತ್ಯದ ತುತ್ತಿಗೂ ಕಂಟಕವಾದ ಕೊರೊನಾ
ಮೈಸೂರು ಗ್ರಾಮಾಂತರ

ನಿತ್ಯದ ತುತ್ತಿಗೂ ಕಂಟಕವಾದ ಕೊರೊನಾ

April 7, 2020

ನಂಜನಗೂಡು, ಏ.6(ರವಿ/ ಲೋಕೇಶ್)- ಕೊರೊನಾ ಸೋಂಕು ಜನಸಾಮಾನ್ಯರ ಪ್ರಾಣ ಕಸಿದು ಕೊಳ್ಳುವ ಜೊತೆಗೆ ಬಡವರು, ಕೂಲಿ ಕಾರ್ಮಿಕರ ತುತ್ತಿಗೂ ಕಂಟಕಪ್ರಾಯವಾಗಿ ಪರಿಣಮಿಸಿದೆ. ಎರಡೂ ಕಾಲು ಸ್ವಾದೀನವಿಲ್ಲದಿದ್ದರೂ ಕಾಲುಗಳಿ ಲ್ಲದಿದ್ದರೂ ಮನೆ ಬಳಿಯೇ ಪಂಕ್ಚರ್ ಹಾಕುವ ವೃತ್ತಿ ಮೂಲಕ ಸ್ವಾವಲಂಬಿ ಜೀವನ ನಡೆಸು ತ್ತಿದ್ದ ವಿಕಲಚೇತನರೊಬ್ಬರು ಲಾಕ್‍ಡೌನ್ ನಿಂದ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

ನಂಜನಗೂಡು ತಾಲೂಕು ಕೋಣನೂರು ಗ್ರಾಮದ ನಿವಾಸಿ ರಮೇಶ್ (40) ಹುಟ್ಟುತ್ತಲೇ ವಿಕಲಾಂಗರಾಗಿದ್ದು, ತನ್ನ ವೃತ್ತಿಯಿಂದ ಬರುವ ಆದಾಯದಲ್ಲೇ ಮಡದಿ ಜಯಮ್ಮರೊಂದಿಗೆ ನೆಮ್ಮದಿ ಯಿಂದಿದ್ದರು. ಕೂಲಿ ಕೆಲಸದೊಂದಿಗೆ ಸಂಸಾರದ ಬಂಡಿ ಎಳೆಯಲು ಪತ್ನಿಯೂ ರಮೇಶ್‍ಗೆ ನೆರವಾಗಿದ್ದರು. ದಂಪತಿಗೆ ನಿತ್ಯ ಸಿಗುವ ಆದಾಯದಲ್ಲಿ ಹೇಗೋ ಸಂಸಾರ ಸಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ಹೆಚ್ಚಿದ ಪರಿಣಾಮ ದೇಶವ್ಯಾಪಿ ಲಾಕ್‍ಡೌನ್ ಜಾರಿಯಾಗಿದ್ದು, ಬಡವರು, ಕೂಲಿ ಕಾರ್ಮಿಕರ ಮೇಲೆ ಇದರ ನೇರ ಪರಿಣಾಮ ಬೀರುತ್ತಿದ್ದು, ರಮೇಶ್ ಅವರಂತೂ ಸಂಕಷ್ಟದಲ್ಲಿದ್ದಾರೆ.

ಸಾಮಾನ್ಯ ದಿನಗಳಲ್ಲಿ ರಮೇಶ್ ಬೆಳಿಗ್ಗೆ ಯಿಂದ ಸಂಜೆಯವರೆಗೆ 100 ರಿಂದ 200 ರೂ.ವರೆಗೆ ದ್ವಿಚಕ್ರ ವಾಹನಗಳಿಗೆ ಪಂಕ್ಚರ್ ಹಾಕಿ ಹಣ ಸಂಪಾದಿಸುತ್ತಿದ್ದರು. ಲಾಕ್‍ಡೌನ್ ನಂತರದಲ್ಲಿ ಬೆಳಿಗ್ಗೆಯಿಂದ ರಾತ್ರಿ ಕಳೆದರೂ 50 ರೂ. ಸಂಪಾದನೆ ಯಾಗುತ್ತಿಲ್ಲ. ಇದರಿಂದ ರಮೇಶ್ ದಿಕ್ಕು ತೋಚದಂತಾಗಿದ್ದಾರೆ.

ಇನ್ನೂ ರೈತರ ಜಮೀನುಗಳಲ್ಲಿ ಕೆಲಸ ಮಾಡಿ 150 ರೂ. ಕೂಲಿ ಗಳಿಸುತ್ತಿದ್ದ ಪತ್ನಿ ಜಯಮ್ಮ ಸಹ ಕೂಲಿ ಕೆಲಸವಿಲ್ಲದಂತಾಗಿದ್ದು, ದಿನದೂಡುವುದೇ ದಂಪತಿಗೆ ದುಸ್ತರವಾ ಗಿದೆ. ಲಾಕ್‍ಡೌನ್‍ನಿಂದ ಬೆಳೆದ ಬೆಳೆ ಕೊಳ್ಳುವವರಿಲ್ಲದೆ ಹಾಗೂ ಸೂಕ್ತ ಬೆಲೆ ಇಲ್ಲದೆ ರೈತರು ಬೇಸಾಯ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೂಲಿ ಕೆಲಸವನ್ನೇ ನಂಬಿದ್ದ ರಮೇಶ್ ಪತ್ನಿಗೂ ಕೆಲಸವಿಲ್ಲದೆ ಮನೆಯಲ್ಲೇ ಇರುವಂತಾಗಿದೆ.

ದೊರೆಯದ ಸೌಲಭ್ಯ: ಲಾಕ್‍ಡೌನ್ ನಿಂದ ಬಡವರು, ನಿರಾಶ್ರಿತರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಲು ಕೇಂದ್ರ-ರಾಜ್ಯ ಸರ್ಕಾರಗಳ 2 ತಿಂಗಳ ಪಡಿತರ, ಮಾಸಿಕ ಭತೆÀ್ಯಗಳನ್ನು ಘೋಷಿಸಿದ್ದು, ಎಲ್ಲೆಡೆ ವಿತರಣೆಯಾಗುತ್ತಿದೆ. ಸೂಕ್ತ ದಾಖಲಾತಿ, ಮಾಹಿತಿ ಕೊರತೆಯಿಂದ ದಂಪತಿ ಸೌಲಭ್ಯ ವಂಚಿತರಾಗಿದ್ದಾರೆ.

ಭತ್ಯೆ, ಪಡಿತರವಿಲ್ಲದೆ ಪರದಾಟ: ತಾಂತ್ರಿಕ ಸಮಸ್ಯೆಗಳಿಂದ ವಿಕಲಚೇತನ ಮಾಸಿಕ ಭತ್ಯೆ ಸಹ ಸ್ಥಗಿತಗೊಂಡಿದ್ದು, ಬ್ಯಾಂಕ್ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗದೆ ವರ್ಷದಿಂದ ರಮೇಶ್ ಪರಿತಪಿಸುತ್ತಿದ್ದಾರೆ. ಅಲ್ಲದೆ ಪಡಿತರ ಚೀಟಿ ಸಹ ಕಳೆದು ಕೊಂಡಿದ್ದು, ನಾಲ್ಕಾರು ವರ್ಷಗಳಿಂದ ಪಡಿ ತರವಿಲ್ಲದೆ ದಂಪತಿ ಜೀವನ ದೂಡುತ್ತಿದ್ದಾರೆ.

ಸ್ವಂತ ಸೂರಿಗಾಗಿ ಎಣಗಾಟ: ಕೋಣ ನೂರು ಗ್ರಾಮದ ಗೌರಿಪತೇಶ್ವರ ದೇಗುಲ ಬಳಿ ಸಣ್ಣದೊಂದು ಗುಡಿಸಲು ಹಾಕಿ ಕೊಂಡು ದಿನದೂಡುತ್ತಿರುವ ದಂಪತಿ, ಸರ್ಕಾರ ಆಶ್ರಯ ಮನೆ ಯೊಜನೆಯಡಿ ಸ್ವಂತ ಸೂರಿಗಾಗಿ ಹಲವು ವರ್ಷಗಳಿಂದ ಎಣಗಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಮಳೆ-ಗಾಳಿ ಭಯದಿಂದಲೇ ಗುಡಿಸಲಲ್ಲೇ ಜೀವ ಬಿಗಿಹಿಡಿದು ಬದುತ್ತಿದ್ದಾರೆ.

ರಮೇಶ್ ಅವರಿಗೆ ಅನಾರೋಗ್ಯದ ತಾಯಿ ಸೇರಿದಂತೆ ಇಬ್ಬರು ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಲು ಆಗದೆ ಅಸಹಾಯಕ ರಾಗಿ ಮೂವರನ್ನು ಸಹೋದರಿಯ ಆಶ್ರಯದಲ್ಲಿಸಿದ್ದಾರೆ. ಸ್ವಂತ ಸೂರಿಲ್ಲ, ವಿಕಲಚೇತನ ಭತ್ಯವೂ ಇಲ್ಲ, ಪಡಿತರವೂ ಇದಲ್ಲದೆ ಇಲ್ಲಿಯವರೆಗೆ ತಮ್ಮ ದುಡಿಮೆ ಯನ್ನೇ ನಂಬಿ ಬದುಕುತ್ತಿದ್ದ ರಮೇಶ್ ದಂಪತಿ ಸದ್ಯದ ಲಾಕ್‍ಡೌನ್‍ನಿಂದ ಆದಾಯ ವಿಲ್ಲದೆ ಪೇಚಿಗೆ ಸಿಲುಕಿದೆ. ಜನಪ್ರತಿನಿಧಿ ಗಳು, ಸಂಘ-ಸಂಸ್ಥೆಗಳು, ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ದಂಪತಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ.

ಸಹಾಯಧನದ ಭರವಸೆ: ಕೋಣನೂರು ಪಿಡಿಓ ಜ್ಯೋತಿ ಪ್ರತಿಕ್ರಿಯಿಸಿ, ಗ್ರಾಪಂ ಕಂದಾಯ ವಸೂಲಾತಿಯ ಶೇ.5ರಷ್ಟು ಹಣವನ್ನು ವಿಕಲಚೇತನರ ನಿಧಿಗೆ ಮೀಸಲಿಡಲಾಗಿದ್ದು, ಆದ್ಯತೆ ಮೇರೆಗೆ ರಮೇಶ್‍ಗೆ ಸಹಾಯಧನ ವಿತರಿಸಲು ಗ್ರಾಪಂ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲೇ ಚೆÀಕ್ ವಿತರಿಸಲಾಗುವುದು. ರಮೇಶ್ ಕುಟುಂಬ ಸ್ವಂತ ನಿವೇಶನ ಹೊಂದಿಲ್ಲದ ಕಾರಣ ದಾನಿಗಳು ಯಾರಾದರೂ ನಿವೇಶನ ನೀಡದ್ದಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸದ್ಯ ಗ್ರಾಪಂ ಅಧಿಕಾರಿಗಳನ್ನು ಬೇರೆಡೆಗೆ ಕರ್ತವ್ಯಕ್ಕೆ ನಿಯೋಜಿಸಿದ್ದು, ಸಿಬ್ಬಂದಿ ಕೊರತೆ ಇದೆ. ರಮೇಶ್ ದಂಪತಿಯ ಪರಿಸ್ಥಿತಿ ಬಗ್ಗೆ ತಿಳಿದಿದ್ದು, ಶೀಘ್ರವೇ ಗ್ರಾಪಂನಿಂದ ಸಹಾಯಧನ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

Translate »