ಹಳೆ ಪಿಂಚಣಿ ಪದ್ಧತಿ ಮುಂದುವರೆಸಲು ಎನ್‍ಪಿಎಸ್  ನೌಕರರಿಂದ ಅ.3ರಂದು ರಕ್ತದಾನ ಶಿಬಿರ
ಮೈಸೂರು

ಹಳೆ ಪಿಂಚಣಿ ಪದ್ಧತಿ ಮುಂದುವರೆಸಲು ಎನ್‍ಪಿಎಸ್  ನೌಕರರಿಂದ ಅ.3ರಂದು ರಕ್ತದಾನ ಶಿಬಿರ

September 30, 2018

ಮೈಸೂರು: ಈ ಹಿಂದೆ ಜಾರಿಯಲ್ಲಿದ್ದ ಪಿಂಚಣಿ ಪದ್ಧತಿಯನ್ನು ಮುಂದುವರೆಸುವಂತೆ ಆಗ್ರಹಿಸಿ `ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ಘೋಷಣೆಯಡಿ ಅ.3ರಂದು ರಾಜ್ಯಾದ್ಯಂತ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಬಸವರಾಜು ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.3ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಮೈಸೂರಿನಲ್ಲಿ ಸುಬ್ಬರಾಯನ ಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಗುತ್ತಿದೆ. ಅಲ್ಲದೆ ತಾಲೂಕು ಕೇಂದ್ರಗಳಾದ ಪಿರಿಯಾಪಟ್ಟಣದಲ್ಲಿ ಸಾರ್ವ ಜನಿಕ ಆಸ್ಪತ್ರೆ, ಹುಣಸೂರಿನ ಗುರುಭವನ, ತಿ.ನರಸೀಪುರದ ಗುರುಭವನ, ಕೆ.ಆರ್. ನಗರದ ಸರ್ಕಾರಿ ನೌಕರರ ಭವನ, ಹೆಚ್.ಡಿ.ಕೋಟೆಯ ಗುರುಭವನ ದಲ್ಲಿಯೂ ರಕ್ತದಾನ ಶಿಬಿರ ನಡೆಸಲಾಗುತ್ತಿದೆ ಎಂದು ಹೇಳಿದರು. ಸರ್ಕಾರಿ ಸೇವೆಗೆ ಸೇರಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಸಂಧ್ಯಾಕಾಲದ ಬದುಕಿಗೆ ಭದ್ರತೆಯ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವಂತೆ ಒತ್ತಾಯಿಸಿ ಶಿಬಿರ ಹಮ್ಮಿಕೊಂಡಿದ್ದು, ಎನ್‍ಪಿಎಸ್‍ಗೆ ಒಳಪಡುವ ಸರ್ಕಾರಿ, ನಿಗಮ ಮಂಡಳಿ ಹಾಗೂ ಅನುದಾನಿತ ಸಂಸ್ಥೆಗಳ ನೌಕರರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಕಳಕಳಿಯೊಂದಿಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಇದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹರೀಶ್‍ಕುಮಾರ್ ಎನ್., ರವಿ, ಸಿದ್ದಮಲ್ಲಪ್ಪ, ಮಂಜುನಾಥ್, ಶ್ರೀಧರ್ ಉಪಸ್ಥಿತರಿದ್ದರು.

Translate »