ನಾಳೆಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ
ಮೈಸೂರು

ನಾಳೆಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ

September 30, 2018

ಮೈಸೂರು ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ನಿರ್ಧಾರ
ಮೈಸೂರು: ವಿಶ್ವಸ್ತನ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಅ.1ರಿಂದ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಆಚರಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಈಗ ಗುಣಪಡಿಸಬಹುದಾದ ಸಾಮಾನ್ಯ ಖಾಯಿಲೆಯಾಗಿದೆ. ಆದರೆ ಸಾರ್ವಜನಿಕರು ಹಾಗೂ ರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದೆ ಎಂದರು.

ಇದೇ ವೇಳೆ ಸ್ತನ ಕ್ಯಾನ್ಸರ್ ತಜ್ಞ ಡಾ.ಅವಿನಾಶ್ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದ್ಕಕಾಗಿ ಮೀಸಲಿರಿಸಲಾಗಿದೆ. ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಹಾಗೂ ಆಪ್ತ ಸಮಾಲೋಚನೆಯನ್ನು ಏರ್ಪಡಿಸಲಾಗಿದ್ದು, ಇದರೊಂದಿಗೆ ನಗರದ ಆಯ್ದ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸ ಹಾಗೂ ಸಂವಾದವನ್ನು ನಡೆಸಲಾಗುತ್ತದೆ. ಅಲ್ಲದೆ, ಆಶಾ ಕಾರ್ಯಕರ್ತೆಯರಿಗೆ ಜಾಗೃತಿ ಮೂಡಿಸಿ ಹಾಗೂ ಅವರಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ನಡೆಸಲಾಗುವುದು. ಅ.14ರ ಬೆಳಿಗ್ಗೆ 6.30ರಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. ರೋಗಿಗಳಲ್ಲಿ 27 ವಿಧದ ಸ್ತನ ಕ್ಯಾನ್ಸರ್ ಅನ್ನು ಗುರುತಿಸಲಾಗಿದೆ. ಇವುಗಳು ಜೀವನ ಶೈಲಿ, ವಂಶಪಾರಂಪರ್ಯ ಹಾಗೂ ಹಲವು ಮೂಢನಂಬಿಕೆಗಳಿಂದ ಬರುತ್ತಿವೆ. ಮಹಿಳೆಯರು ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸ್ತನದ ಅಳತೆ, ಬಣ್ಣದಲ್ಲಿ ವ್ಯತ್ಯಾಸ, ನೋವು ರಹಿತ ಗಂಟುಗಳು ಕಂಡು ಬಂದರೆ ನಿರ್ಲಕ್ಷಿಸದೆ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ.ಕಿರಣ್ ಶಂಕರ್, ಡಾ.ಚೈತ್ರ ಇದ್ದರು.

Translate »