ಮೈಸೂರಲ್ಲಿರಕ್ತ ಚಂದ್ರ25 ನಿಮಿಷ ಗೋಚರ
ಮೈಸೂರು

ಮೈಸೂರಲ್ಲಿರಕ್ತ ಚಂದ್ರ25 ನಿಮಿಷ ಗೋಚರ

November 9, 2022

ಮೈಸೂರು,ನ.7(ಜಿಎ)-ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ರಕ್ತ ಚಂದ್ರ ಗ್ರಹಣ ಗೋಚರಿಸಿದ್ದು, ಅನೇಕ ಮಂದಿ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಂಡರು. ದೀಪಾವಳಿ ಕಳೆದು 15 ದಿನಗಳ ನಂತರ ಸಂಭವಿಸಿದ ಚಂದ್ರ ಗ್ರಹಣ ಮೈಸೂರಿನಲ್ಲಿ ಮಂಗಳ ವಾರ ಸಂಜೆ 5.54ರಿಂದ 6.19ರವರೆಗೂ ಸರಿ ಸುಮಾರು 25 ನಿಮಿಷಗಳ ಕಾಲ ಗೋಚರಿ ಸಿದ್ದು, ಹಾಸನ, ಮಂಡ್ಯ, ಬೆಂಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಬೀದರ್, ಹುಬ್ಬಳ್ಳಿ, ಕೊಪ್ಪಳ, ಧಾರವಾಡ, ಬೆಳಗಾವಿ, ರಾಯಚೂರು, ಕಲಬುರುಗಿ, ಕೋಲಾರ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಗ್ರಹಣ ಗೋಚರಿಸಿದೆ.

ಮೈಸೂರಿನ ಚಿತ್ರಣ:ರಕ್ತ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಶ್ರದ್ಧಾವಂತರು ಮನೆಯಲ್ಲೇ ದೇವರ ನಾಮ ಸ್ಮರಣೆ ಮಾಡಿದರು. ಹಲವು ದೇವಾಲಯಗಳನ್ನು ಬೆಳಗ್ಗೆಯಿಂದಲೇ ಬಂದ್ ಮಾಡಲಾಗಿತ್ತು. ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಕೆಲ ದೇವಾಲಯ ಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಭಕ್ತರಿಗೆ ದರ್ಶನ ಅವಕಾಶ ನೀಡಿ, ನಂತರ ನಿರ್ಬಂಧಿಸಲಾಯಿತು. ಮೈಸೂರಿನಲ್ಲಿ ಸಂಜೆ 5.54ರಿಂದ 6.19ವರೆಗೂ ರಕ್ತ ಚಂದ್ರ ಗ್ರಹಣ ಗೋಚರಿಸಿತು. ಸರಿ ಸುಮಾರು 25 ನಿಮಿಷಗಳ ಕಾಲ ಭಾಗಶಃ ಮೈಸೂರಿನಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಮೈಸೂರಿಗರು ಗ್ರಹಣ ಕಣ್ತುಂಬಿ ಕೊಂಡರಲ್ಲದೆ ಕ್ಯಾಮರಾಗಳಲ್ಲಿ ಚಂದ್ರನ ಚಿತ್ರಣವನ್ನು ಸೆರೆಹಿಡಿದರು. ಚಂದ್ರ ಗ್ರಹಣದ ನಂತರ ತಾಯಿ ಚಾಮುಂಡೇಶ್ವರಿ ದೇವಾಲಯವನ್ನು ಶುದ್ಧೀಕರಣ ಮಾಡಿ, ಮೂಲ ದೇವರು ಹಾಗೂ ಉತ್ಸವ ಮೂರ್ತಿಗೆ ಅಭಿಷೇಕ ಮಾಡಿ, ಮಹಾಮಂಗಳಾರತಿ ನೆರವೇರಿಸ ಲಾಯಿತು. ನಗರದಲ್ಲಿರುವ ಎಲ್ಲಾ ದೇವಾಲಯಗಳಲ್ಲೂ ಪೂಜಾ ಕೈಂಕರ್ಯ ನೆರ ವೇರಿಸಲಾಯಿತು. ಹಾಗೆಯೇ ಸಾರ್ವಜನಿಕರು ತಮ್ಮ ಮನೆಯನ್ನೆಲ್ಲಾ ಶುದ್ಧ ಮಾಡಿ, ದೇವರಿಗೆ ಪೂಜೆ ಸಲ್ಲಿಸಿ ತಾಜಾ ಆಹಾರ ಸಿದ್ಧಪಡಿಸಿಕೊಂಡು ಸೇವಿಸಿದರು.

ದೀಪಾವಳಿಯ 15 ದಿನದ ನಂತರ ಚಂದ್ರ ಗ್ರಹಣ ಗೋಚರಿಸುವುದು ವಾಡಿಕೆ. ಅದರಂತೆ ಈ ಬಾರಿಯೂ ಚಂದ್ರ ಗ್ರಹಣ ಗೋಚರಿಸಿದ್ದು, ಮೋಡ ಕವಿದ ವಾತಾವರಣ ಇಲ್ಲದೆ, ಎಲ್ಲರೂ ರಕ್ತ ಚಂದ್ರ ಗ್ರಹಣವನ್ನು ಕಣ್ತುಂಬಿಕೊಂಡರು. ಮೈಸೂರಿನಲ್ಲಿ 2017 ರಲ್ಲಿ ಭಾಗಶಃ ಚಂದ್ರ ಗ್ರಹಣ ಗೋಚರಿಸಿತ್ತು. ಹಾಗೇ 2018 ಮತ್ತು 19ರಲ್ಲಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು. ಈ ಬಾರಿ ಭಾಗಶಃ ಚಂದ್ರ ಗ್ರಹಣ ಗೋಚರಿಸಿದ್ದು, 2023ರಲ್ಲಿ ಭಾಗಶಃ ಗೋಚರಿಸಲಿದೆ. ಸಂಪೂರ್ಣ ಚಂದ್ರ ಗ್ರಹಣವು 2028ರಲ್ಲಿ ಗೋಚರಿಸುವ ಸಂಭವವಿದೆ ಎಂದು ಮೈಸೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಸಂಚಾಲಕರಾದ ಡಾ.ಎಸ್.ಎ.ಮೋಹನ್ ಕೃಷ್ಣ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »