ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ಪಡೆಗೆ ಸಿದ್ಧತೆ
News

ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ಪಡೆಗೆ ಸಿದ್ಧತೆ

November 9, 2022

ಬೆಂಗಳೂರು, ನ.8(ಕೆಎಂಶಿ)- ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅವರ ಕುಟುಂಬದವರು ಹಾಗೂ ಅವರ ಬೆಂಬಲಿಗರು ಬಿಜೆಪಿ ತೊರೆದು ಜೆಡಿಎಸ್ ಸೇರಲು ಮುಂದಾಗಿದ್ದಾರೆ. ಸರ್ಕಾರ ಮತ್ತು ಪಕ್ಷ ತಮ್ಮನ್ನು ಕಡೆಗಾಣಿಸುತ್ತಿದೆ ಎಂದು ಈ ಕುಟುಂಬ ಪಕ್ಷ ತೊರೆದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೇರಲು ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಎರಡು ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಕುಟುಂಬ ಜೆಡಿಎಸ್ ಸೇರಲು ದಕ್ಷಿಣ ಭಾರತದ ಪ್ರಭಾವಿ ಮುಖ್ಯಮಂತ್ರಿಯೊಬ್ಬರು ಕೈಜೋಡಿಸಿದ್ದಾರೆ. ಬಿಜೆಪಿಯಿಂದ ತಮ್ಮ ಕುಟುಂಬಕ್ಕಾಗಿರುವ ಅನ್ಯಾಯಗಳನ್ನು ಕುಮಾರಸ್ವಾಮಿ ಅವರ ಮುಂದೆ ಎಳೆ ಎಳೆಯಾಗಿ ಬಿಡಿಸಿಟ್ಟಿರುವ ಬಾಲಚಂದ್ರ ಜಾರಕಿಹೊಳಿ, ಹಿಂದೆ ತಮ್ಮಿಂದ ನಿಮಗೆ ಆಗಿರುವ ತೊಂದರೆಯ ಬಗ್ಗೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅನ್ನು ಬಲಗೊಳಿಸಿ, ಹೆಚ್ಚು ಸ್ಥಾನ ಪಡೆಯುವುದಾಗಿಯು ತಿಳಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರ ಮಾತಿಗೆ ಸ್ಪಂದಿಸಿರುವ ಕುಮಾರಸ್ವಾಮಿ ಕೆಲವು ಷರತ್ತುಗಳನ್ನು ವಿಧಿಸಿ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಜೆಡಿಎಸ್‍ನಿಂದಲೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭ ದಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು.

ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ 17 ಶಾಸಕರನ್ನು ಸೆಳೆದು, ಅಂದಿನ ಮೈತ್ರಿ ಸರ್ಕಾರ ಪತನಗೊಳ್ಳಲು ಪ್ರಮುಖ ರೂವಾರಿಗಳಾಗಿದ್ದರು.

ಆನಂತರ ಯಡಿಯೂರಪ್ಪ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರು ಸಚಿವರಾಗಿದ್ದ ಸಂದರ್ಭದಲ್ಲೇ ಲೈಂಗಿಕ ಹಗರಣಕ್ಕೆ ಸಿಲುಕಿ ತಮ್ಮ ಸ್ಥಾನ ತೊರೆಯಬೇಕಾಯಿತು. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಾಲಚಂದ್ರ ಜಾರಕಿಹೊಳಿಗೂ ಸಂಪುಟದಲ್ಲಿ ಅವಕಾಶ ನೀಡಿರಲಿಲ್ಲ. ಅಷ್ಟೇ ಅಲ್ಲ, ಇವರ ಕುಟುಂಬದವರನ್ನು ರಾಜಕೀಯವಾಗಿ ಬಿಜೆಪಿ ವರಿಷ್ಠರು ಕಡೆಗಾಣಿಸಲು ಮುಂದಾದರು. ಬಿಜೆಪಿಗೆ ತಮ್ಮ ಶಕ್ತಿ ತೋರಿಸಲೇಂದೇ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿ, ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನೇ ಪರಾಭವಗೊಳಿಸಿದರು. ಅಷ್ಟೇ ಅಲ್ಲ, ಆನಂತರ ನಡೆದ ಶಿಕ್ಷಕರ ಕ್ಷೇತ್ರದಿಂದ ಪರಿಷತ್ತಿಗೆ ನಡೆದ ಚುನಾವಣೆ ಯಲ್ಲೂ ಬಿಜೆಪಿ ಅಭ್ಯರ್ಥಿ ಸೋಲುಂಡರು. ಈ ಬೆಳವಣಿಗೆಯ ನಂತರ ಜಾರಕಿಹೊಳಿ ಕುಟುಂಬವನ್ನು ದೆಹಲಿ ವರಿಷ್ಠರು ಕಡೆಗಾಣಿಸುತ್ತಾ ಬಂದಿದ್ದರು. ದಕ್ಷಿಣ ಭಾರತದಲ್ಲಿ ಮತ್ತೆ ಅಧಿಕಾರಕ್ಕೆ ತಂದ ತಮ್ಮನ್ನೇ ಕಡೆಗಾಣಿಸಲಾಗಿದೆ ಎಂದ ಈ ಕುಟುಂಬ ಇದೀಗ ಪಕ್ಷವನ್ನೇ ತೊರೆದು, ತಮ್ಮ ಬೆಂಬಲಿಗರ ಜೊತೆಗೂಡಿ ಜೆಡಿಎಸ್ ಸೇರಲು ಮುಂದಾಗಿದೆ.

Translate »