ಅಕ್ರಮ ಪ್ರಶ್ನಿಸಿದ್ದೇ ಸಂಚಕಾರವಾಯ್ತು…
ಮೈಸೂರು

ಅಕ್ರಮ ಪ್ರಶ್ನಿಸಿದ್ದೇ ಸಂಚಕಾರವಾಯ್ತು…

November 9, 2022

ಮೈಸೂರು: ಸೆಟ್‍ಬ್ಯಾಕ್ ಬಿಡದೇ ನಿಯಮ ಉಲ್ಲಂಘಿಸಿ ಮಾದಪ್ಪ ಅವರು ಕಟ್ಟಡ ನಿರ್ಮಿಸುತ್ತಿದ್ದು, ಈ ವಿವಾದದಿಂದ ಉಂಟಾಗಿದ್ದ ವೈಷಮ್ಯವೇ ನಿವೃತ್ತ ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಹತ್ಯೆಗೆ ಪ್ರಮುಖ ಕಾರಣ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣಕ್ಕೆ ಬೇರೆ ಬೇರೆ ಆಯಾಮಗಳಿವೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ, ತೀವ್ರ ತನಿಖೆ ಮಾಡಿ, ಮಾದಪ್ಪನ ಮಗ ಮನು ಬಂಧಿಸಿ ವಿಚಾರಣೆ ನಡೆಸಿದಾಗ ನಿಯಮಾವಳಿ ಧಿಕ್ಕರಿಸಿ, ಮಾದಪ್ಪ ನಿರ್ಮಿಸುತ್ತಿದ್ದ ಕಟ್ಟಡ ತೆರವಿಗೆ ನೋಟಿಸ್ ಜಾರಿಯಾಗಿರುವುದೇ ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಅವರ ಹತ್ಯೆಗೆ ಪ್ರಮುಖ ಕಾರಣ ಎಂಬುದು ಖಚಿತವಾಯಿತು ಎಂದರು.

ಕುಲಕರ್ಣಿ ಅವರು ವಾಸ ಮಾಡುತ್ತಿದ್ದ ಟಿ.ಕೆ.ಲೇಔಟ್ ಮನೆಗೆ ಹೊಂದಿಕೊಂಡಂತೆ ಮಾದಪ್ಪ ಮನೆ ನಿರ್ಮಿಸುತ್ತಿದ್ದು, ಕಟ್ಟಡ ಬೈಲಾಗಳ ಪ್ರಕಾರ ಗಾಳಿ-ಬೆಳಕಿಗೆ ಸೆಟ್‍ಬ್ಯಾಕ್ ಬಿಡದೇ, ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದಾರೆ. ಅದಕ್ಕೆ ಕುಲಕರ್ಣಿ ಅವರು ಮೈಸೂರು ಮಹಾನಗರ ಪಾಲಿಕೆ, ಸಿಟಿ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ದಾವೆ ಹೂಡಿದ್ದರು. ಅದರನ್ವಯ ವಿವಿಧ ಹಂತಗಳಲ್ಲಿ ತೀರ್ಪುಗಳು ಬಂದಿದ್ದು, ಅಂತಿಮವಾಗಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡದ ಭಾಗವನ್ನು ಕೆಡವಲು ನಗರ ಪಾಲಿಕೆಯು ಮಾದಪ್ಪ ಅವರಿಗೆ ಅಂತಿಮ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕುಲಕರ್ಣಿ ಮತ್ತು ಮಾದಪ್ಪ ಕುಟುಂಬದ ನಡುವೆ ಈ ವಿವಾದವಿದ್ದು, ವೈಷಮ್ಯ ತಾರಕ್ಕೆ ಹೋಗಿದ್ದರಿಂದ ಮಾದಪ್ಪನ ಕಿರಿಯ ಮಗ ಮನು ಈ ಕೃತ್ಯ ಎಸಗಿದ್ದಾನೆ. ಕೊಲೆ ಮಾಡಲು ತನ್ನ ಸ್ನೇಹಿತ ವರುಣ್ ಗೌಡನ ಸಹಾಯ ಪಡೆದಿದ್ದ. ಮಾರಾಟ ಮಾಡಲೆಂದು ಸ್ನೇಹಿತ ರಘು ನೀಡಿದ್ದ ಹೋಂಡಾ ಕಾರಿನ ನಂಬರ್ ಪ್ಲೇಟ್ ತೆಗೆದು ಆರ್.ಎನ್.ಕುಲಕರ್ಣಿ ಅವರಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾನೆಂಬುದು ದೃಢಪಟ್ಟಿದೆ ಎಂದು ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Translate »