ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಹತ್ಯೆ  ಪ್ರಕರಣ ಬಯಲು: ಇಬ್ಬರ ಬಂಧನ; ಕಾರು, ಸ್ಕೂಟರ್ ವಶ
ಮೈಸೂರು

ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಹತ್ಯೆ ಪ್ರಕರಣ ಬಯಲು: ಇಬ್ಬರ ಬಂಧನ; ಕಾರು, ಸ್ಕೂಟರ್ ವಶ

November 9, 2022

ಮೈಸೂರು,ನ.8(ಆರ್‍ಕೆ)-ಮಾನಸ ಗಂಗೋತ್ರಿ ಆವರಣದಲ್ಲಿ ವಾಯು ವಿಹಾರದ ವೇಳೆ ಕಾರು ಹರಿಸಿ ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ(82) ಅವರ ಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬ ರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಟಿ.ಕೆ.ಲೇಔಟ್ 4ನೇ ಹಂತ, 13ನೇ ಮೇನ್ ನಿವಾಸಿ ಮಾದಪ್ಪ ಎಂಬು ವರ ಮಗ ಮನು(30) ಹಾಗೂ ಆತನ ಸ್ನೇಹಿತ, ಕುವೆಂಪುನಗರ ನಿವಾಸಿ ವರುಣ್ ಗೌಡ (29) ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ್ದ ಹೋಂಡಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಂಗಳವಾರ ತಿಳಿಸಿದ್ದಾರೆ.

ಮೈಸೂರಿನ ನಜರ್‍ಬಾದ್‍ನ ತಮ್ಮ ಕಚೇರಿ ಸಭಾಂಗಣದಲ್ಲಿ ಈ ಕುರಿತು ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು, ನಿವೃತ್ತ ಐಬಿ ಅಧಿಕಾರಿ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದ್ದು, ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಲ್ಲಿ ಅವ ರನ್ನೂ ಬಂಧಿಸಿ, ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಬ್ಬರೂ ಸ್ನಾತಕೋತ್ತರ ಪದವೀಧರರು: ಹತ್ಯೆ ಆರೋಪಿಗಳಿಬ್ಬರೂ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಹತ್ಯೆಯಾದ ಕುಲ ಕರ್ಣಿ ಅವರ ಪಕ್ಕದ ಮನೆಯ ನಿವಾಸಿ ಮಾದಪ್ಪನ ಕಿರಿಯ ಮಗ ಮನು ಎಂಬಿಎ ಪದವೀಧರನಾಗಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಗೆ ಸಹ ಕರಿಸಿದ ಆತನ ಸ್ನೇಹಿತ ವರುಣ್‍ಗೌಡ ಎಂಸಿಎ ಪದವೀಧರ. ಸೆಟ್‍ಬ್ಯಾಕ್ ಬಿಡದೇ ಮನೆ ನಿರ್ಮಿಸುತ್ತಿದ್ದ ಮಾದಪ್ಪ ವಿರುದ್ಧ ಕುಲಕರ್ಣಿ ಅವರು ಕಾನೂನು ಮೊರೆ ಹೋಗಿ ದ್ದರು. ಈ ಕಾರಣಕ್ಕೆ ಉಂಟಾದ ವೈಷಮ್ಯ ತಾರಕ್ಕಕೇರಿದ್ದೇ ಕುಲಕರ್ಣಿ ಅವರನ್ನು ಕೊಲೆ ಮಾಡಲು ಪ್ರಮುಖ ಕಾರಣ ಎಂದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರ ಗುಪ್ತ ತಿಳಿಸಿದರು.

ಸ್ನೇಹಿತನ ಕಾರು ಬಳಕೆ: ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಮಾಡಿದ್ದಾರೆಂದು ಕುಲಕರ್ಣಿ ಅವರ ಬಗ್ಗೆ ಧ್ವೇಷ ಬೆಳೆಸಿಕೊಂಡಿದ್ದ ಮಾದಪ್ಪನ ಮಗ ಮನು, ಸ್ನೇಹಿತ ವರುಣ್ ಗೌಡನೊಂದಿಗೆ ಸೇರಿ ಹತ್ಯೆಗೆ ಯೋಜನೆ ರೂಪಿಸುತ್ತಾನೆ. ಅಲ್ಲದೆ ಕೃತ್ಯಕ್ಕೆ ಮತ್ತೋರ್ವ ಸ್ನೇಹಿತನ ಕಾರು ಬಳಕೆ ಮಾಡಿದ್ದಾನೆ. ಮಾರಾಟ ಮಾಡಿಸುವಂತೆ ತನ್ನ ಸ್ನೇಹಿತ ರಘು ನೀಡಿದ್ದ ಹೋಂಡಾ ಕಂಪನಿಯ ಕಾರಿನ ನಂಬರ್ ಪ್ಲೇಟ್ ತೆಗೆದು, ತಾನೇ ಚಾಲನೆ ಮಾಡಿಕೊಂಡು ಬಂದು ಮೈಸೂರಿನ ಮಾನಸ ಗಂಗೋತ್ರಿ ಆವರಣದ ಬಯೋಟೆಕ್ನಾ ಲಜಿ ವಿಭಾಗದ ಬಳಿ ನವೆಂಬರ್ 4ರ ಶುಕ್ರವಾರ ಸಂಜೆ ಸುಮಾರು 5.45 ಗಂಟೆಯಲ್ಲಿ ಒಂಟಿಯಾಗಿ ವಾಯುವಿಹಾರ ಮಾಡುತ್ತಿದ್ದ ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಅವರ ಮೇಲೆ ಹರಿಸಿ, ಪರಾರಿಯಾಗಿದ್ದ. ಮನುವಿನ ಸ್ನೇಹಿತ ವರುಣ್‍ಗೌಡ ದ್ವಿಚಕ್ರ ವಾಹನದಲ್ಲಿ ಅಂದು ಮಾನಸ ಗಂಗೋತ್ರಿಗೆ ಬಂದು ಕುಲಕರ್ಣಿ ಅವರು ವಾಯು ವಿಹಾರ ಮಾಡುತ್ತಿರುವುದನ್ನು ದೃಢಪಡಿಸಿಕೊಂಡು ಮಾಹಿತಿ ನೀಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ನೆರವಾದ ಸಿಸಿ ಕ್ಯಾಮರಾ: ಮಾನಸ ಗಂಗೋತ್ರಿ ಆವರಣದಲ್ಲಿ ಅಪಘಾತ ನಡೆದಿದೆ ಎಂಬ ಮಾಹಿತಿ ಬಂದ ತಕ್ಷಣ ವಿವಿ ಪುರಂ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನ ಹಾಗೂ ಸಿಬ್ಬಂದಿ ಸ್ಥಳಕ್ಕೆ ಮಹಜರು ನಡೆಸಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿದ್ದರು. ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಪತ್ತೆಗಾಗಿ ತನಿಖೆ ಆರಂಭಿಸಿ, ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಫುಟೇಜಸ್‍ಗಳ ಪರಿಶೀಲಿಸಿದಾಗ ಬೇರೆ ಯಾವುದೇ ವಾಹನ ಸಂಚಾರವಿಲ್ಲದ ರಸ್ತೆಯ ಎಡಬದಿಯಲ್ಲಿ ವಾಯು ವಿಹಾರ ಮಾಡುತ್ತಿದ್ದ ಕುಲಕರ್ಣಿ ಅವರ ಮೇಲೆ ಎದುರಿನಿಂದ ಬಂದ ಗ್ರೇ ಕಲರ್ ಕಾರು ಉದ್ದೇಶ ಪೂರ್ವಕವಾಗಿಯೇ ಡಿಕ್ಕಿ ಹೊಡೆದು ಪರಾರಿಯಾಗಿರುವುದು ತಿಳಿಯಿತು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ನಿರ್ಜನ ರಸ್ತೆಯಲ್ಲಿ ಉದ್ದೇಶ ಪೂರ್ವಕವಾಗಿ ಕುಲಕರ್ಣಿ ಅವರಿಗೆ ಕಾರು ಡಿಕ್ಕಿ ಹೊಡೆಸಿರುವುದು, ಆ ಕಾರಿನ ಹಿಂದೆ-ಮುಂದೆ ನೋಂದಣಿ ಸಂಖ್ಯೆ ಬೋರ್ಡ್ ಇಲ್ಲದಿರುವುದು, ಘಟನಾ ಸ್ಥಳದಲ್ಲಿ ಲಭ್ಯವಾದ ಸಾಕ್ಷ್ಯಗಳು ಹಾಗೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಗಮನಿಸಿದಾಗ ಅದು ಹಿಟ್ ಅಂಡ್ ರನ್ ಪ್ರಕರಣ ಅಲ್ಲ, ಇದೊಂದು ಪೂರ್ವ ಯೋಜಿತ ಕೊಲೆ ಎಂಬುದು ಖಾತರಿಯಾದ ಹಿನ್ನೆಲೆಯಲ್ಲಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾಗಿ ಅವರು ಇದೇ ವೇಳೆ ಹೇಳಿದರು.

ದೂರಿನಿಂದ ಪ್ರಕರಣಕ್ಕೆ ಪುಷ್ಟಿ: ಮರುದಿನ (ನ.5) ಆರ್.ಎನ್.ಕುಲಕರ್ಣಿ ಅವರ ಅಳಿಯ ಸಂಜಯ್ ಕುಲಕರ್ಣಿ ಅವರೂ ಲಿಖಿತ ದೂರು ನೀಡಿ, ತಮ್ಮ ಮಾವನವರ ಪಕ್ಕದ ಮನೆಯವರಾದ ಮಾದಪ್ಪ ಮತ್ತು ಅವರ ಮಕ್ಕಳು, ಸೆಟ್‍ಬ್ಯಾಕ್ ಬಿಡದೇ ಮನೆ ಕಟ್ಟುತ್ತಿದ್ದ ವಿವಾದ ಸಂಬಂಧ ತಮ್ಮ ಮಾವ ಆರ್.ಎನ್.ಕುಲಕರ್ಣಿ ಅವರನ್ನು ಈಗಾಗಲೇ ಹತ್ಯೆ ಮಾಡಲು ಹುನ್ನಾರ ಮಾಡಿದ್ದರು. ಅಲ್ಲದೇ ಹಲವು ಬಾರಿ ಅವರನ್ನು ಹಿಂಬಾಲಿಸಿರುವ ವಿಷಯವನ್ನು ಮಾವನವರು ನನ್ನ ಬಳಿ ಹೇಳಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು ಎಂದು ಡಾ.ಚಂದ್ರಗುಪ್ತ ತಿಳಿಸಿದರು.

ತನಿಖೆಗೆ ನಾಲ್ಕು ತಂಡ: ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಎನ್‍ಆರ್ ಉಪವಿಭಾಗದ ಎಸಿಪಿ ಎಂ.ಶಿವಶಂಕರ್, ಸಿಸಿಬಿ ಎಸಿಪಿ ಸಿ.ಕೆ.ಅಶ್ವಥನಾರಾಯಣ ನೇತೃತ್ವದಲ್ಲಿ 4 ವಿಶೇಷ ತಂಡ ರಚಿಸಲಾಗಿದ್ದು, ಸಿಸಿಬಿ ಮತ್ತು ತಾಂತ್ರಿಕ ತಂಡದ ಸಿಬ್ಬಂದಿ ಸಹಾಯದೊಂ ದಿಗೆ ಮಾನಸ ಗಂಗೋತ್ರಿ ಆವರಣದ ಸಿಸಿ ಕ್ಯಾಮರಾ ಫುಟೇಜ್‍ಗಳಿಂದ ಲಭ್ಯವಾದ ಸುಳಿವಿನ ಆಧಾರದಲ್ಲಿ ಟವರ್ ಲೊಕೇಷನ್‍ಗಳ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಮೊದಲು ಮನುವನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಯಿತು. ನಂತರ ಇಂದು ಮಧ್ಯಾಹ್ನ ಸುಮಾರು 12.50 ಗಂಟೆಗೆ ವರುಣ್‍ಗೌಡ ಸಿಕ್ಕಿದ್ದಾನೆಂಬ ಮಾಹಿತಿ ತನಿಖಾ ತಂಡದ ಪೊಲೀಸರಿಂದ ಲಭ್ಯವಾಗಿದೆ ಎಂದು ಹೇಳಿದರು.

ಮಾದಪ್ಪನ ಕಿರಿಯ ಮಗ ಮನುವನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಸ್ಕೂಟರ್‍ನಲ್ಲಿ ಬಂದಿದ್ದ ತನ್ನ ಸ್ನೇಹಿತ ವರುಣ್‍ಗೌಡ, ಕುಲಕರ್ಣಿ ಅವರು ಏಕಾಂಗಿಯಾಗಿ ವಾಯು ವಿಹಾರ ಮಾಡುತ್ತಿರುವ ಸ್ಥಳದ ಮಾಹಿತಿ ನೀಡಿದ ನಂತರ ನಾನು ಹೋಗಿ ಅವರಿಗೆ ಕಾರಿನಿಂದ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾದೆ. ಕೃತ್ಯಕ್ಕೆ ಬಳಸಿದ್ದ ಕಾರು, ತನ್ನ ಮತ್ತೋರ್ವ ಸ್ನೇಹಿತ ರಘು ಮಾರಾಟ ಮಾಡಿಸಲೆಂದು ತನಗೆ ಕೊಟ್ಟಿದ್ದ ಎಂದು ಹೇಳಿಕೆ ನೀಡಿದ್ದಾನೆ ಎಂದು ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಸೆಟ್‍ಬ್ಯಾಕ್ ಬಿಡದೇ ಕುಲಕರ್ಣಿ ಅವರ ಮನೆಗೆ ಹೊಂದಿಕೊಂಡಂತೆ ಮಾದಪ್ಪ ವಸತಿ ಕಟ್ಟಡ ನಿರ್ಮಿಸುತ್ತಿರುವ ವಿವಾದ ತಾರಕಕ್ಕೇರಿದ್ದು, ಮೈಸೂರು ಮಹಾನಗರ ಪಾಲಿಕೆ, ಸಿಟಿ ಸಿವಿಲ್ ನ್ಯಾಯಾಲಯ ಹಾಗೂ ರಾಜ್ಯ ಉಚ್ಛ ನ್ಯಾಯಾಲಯಗಳಲ್ಲೂ ಈ ಸಂಬಂಧ ವಿವಿಧ ಹಂತಗಳಲ್ಲಿ ತೀರ್ಪು ಹೊರಬಂದಿರುವುದರಿಂದ ಅದೇ ವೈಷಮ್ಯದಿಂದ ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಕೊಲೆ ಮಾಡಲಾಗಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದರು.

ಹೊಂಚು ಹಾಕಿ ದುಷ್ಕøತ್ಯ: ಬಿಲ್ಡಿಂಗ್ ಬೈಲಾಗಳನ್ನು ಉಲ್ಲಂಘಿಸಿ ಮಾದಪ್ಪ ನಿರ್ಮಿಸು ತ್ತಿದ್ದ ಕಟ್ಟಡದ ಅನಧಿಕೃತ ಭಾಗವನ್ನು ನೆಲಸಮಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆಯು ಅಂತಿಮ ನೋಟಿಸ್ ನೀಡಿದ್ದರಿಂದ ಕೆರಳಿದ ಮಾದಪ್ಪನ ಮಗ ಮನು, ಇದಕ್ಕೆ ಕಾರಣರಾಗಿದ್ದ ಕುಲಕರ್ಣಿ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಕಳೆದ ಬುಧವಾರದಿಂದ ಹಿಂಭಾಲಿಸಿ ಕುಲಕರ್ಣಿ ಅವರು ವಾಯು ವಿಹಾರ ಮಾಡುವ ಜಾಗ, ಅವರ ಕಾರು ಮತ್ತು ಚಾಲಕ ನಿಲ್ಲುವ ಸ್ಥಳವನ್ನು ನೋಡಿಕೊಂಡು ಪೂರ್ವ ಯೋಜನೆ ಮಾಡಿಕೊಂಡಿದ್ದರು. ಅದರಂತೆ ನವೆಂಬರ್ 4ರಂದು ಸಂಜೆ ಸ್ಕೂಟರ್‍ನಲ್ಲಿ ಕುಲಕರ್ಣಿ ಅವರ ಕಾರನ್ನು ಹಿಂಬಾಲಿಸಿದ ವರುಣ್‍ಗೌಡ ನೀಡಿದ ಮಾಹಿತಿ ಆಧರಿಸಿ ನಂಬರ್ ಪ್ಲೇಟ್ ತೆಗೆದಿದ್ದ ಕಾರಿನಲ್ಲಿ ಮಾನಸ ಗಂಗೋತ್ರಿಗೆ ಬಂದು ಬಯೋಟೆಕ್ನಾಲಜಿ ವಿಭಾಗದ ನಿರ್ಜನ ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದ ಆರ್.ಎನ್.ಕುಲಕರ್ಣಿ ಅವರಿಗೆ ಡಿಕ್ಕಿ ಹೊಡೆದು ಮನು ಪರಾರಿಯಾಗಿದ್ದ ಎಂದು ಡಾ.ಚಂದ್ರಗುಪ್ತ ವಿವರಿಸಿದರು.

ಇನ್ನೊಂದು ಕೇಸ್ ಇದೆ: ಕುಲಕರ್ಣಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮನು ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲೂ ಹೊಡೆದಾಟ, ಹಲ್ಲೆ ಪ್ರಕರಣ ದಾಖಲಾಗಿದೆ. ಇದೀಗ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಕೊಲೆಗೆ ಪ್ರೇರಣೆ ನೀಡಿದವರು, ಸುಳಿವು ನೀಡಿದವರು, ಕೃತ್ಯದ ಬಳಿಕ ಆರೋಪಿಗಳಿಗೆ ಆಶ್ರಯ ನೀಡಿದವರು ಹಾಗೂ ಇನ್ನಿತರ ನೆರವು ನೀಡಿದವರನ್ನೂ ಪತ್ತೆ ಮಾಡಿ ಬಂಧಿಸಲಾಗುವುದು. ಸದ್ಯಕ್ಕೆ ಮನು ಮತ್ತು ವರುಣ್‍ಗೌಡನನ್ನು ಬಂಧಿಸಲಾಗಿದೆ. ಮನು ತಂದೆ ಹಾಗೂ ಕುಟುಂಬದವರೂ ಭಾಗಿಯಾಗಿದ್ದಾರೆಂಬುದು ದೃಢಪಟ್ಟಲ್ಲಿ ಅವರ ವಿರುದ್ಧವೂ ಕಾನೂನು ರೀತಿಯ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದ ಎನ್.ಆರ್. ಉಪವಿಭಾಗದ ಎಸಿಪಿ ಎಂ. ಶಿವಶಂಕರ ಹಾಗೂ ಸಿಸಿಬಿ ಎಸಿಪಿ ಸಿ.ಕೆ. ಅಶ್ವಥನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.

Translate »