ಮೈಸೂರಿನ ಚಿತ್ರ ಕಲಾವಿದ ಬಿ.ಪಿ.ರಾಮಕೃಷ್ಣಗೆ ಪಿಆರ್‍ಟಿ ಕಲಾ ಪ್ರಶಸ್ತಿ ಪ್ರದಾನ
ಮೈಸೂರು

ಮೈಸೂರಿನ ಚಿತ್ರ ಕಲಾವಿದ ಬಿ.ಪಿ.ರಾಮಕೃಷ್ಣಗೆ ಪಿಆರ್‍ಟಿ ಕಲಾ ಪ್ರಶಸ್ತಿ ಪ್ರದಾನ

September 16, 2018

ಮೈಸೂರು: ಅಂತಾರಾಷ್ಟ್ರೀಯ ಚಿತ್ರ ಕಲಾವಿದ, ರಾಜ್ಯ ಲಲಿತ ಕಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಪಿ.ಆರ್. ತಿಪ್ಪೇಸ್ವಾಮಿ ಸ್ಮರಣಾರ್ಥ ತುಮಕೂರಿನ ರವೀಂದ್ರ ಕಲಾ ನಿಕೇತನ ಸ್ಕೂಲ್ ಆಫ್ ಆರ್ಟ್ ಮತ್ತು ಕನ್ನಡ ಸಾಹಿತ್ಯ ಭವನದಲ್ಲಿ ಸೆ.24ರಿಂದ ಮೂರು ದಿನಗಳ ಕಾಲ ಪಿ.ಆರ್.ತಿಪ್ಪೇ ಸ್ವಾಮಿ ಸಂಭ್ರಮ-2018 ಮತ್ತು ಪಿಆರ್‍ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪಿ.ಆರ್.ತಿಪ್ಪೇ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಸೆ.26ರಂದು ಸಂಜೆ 5 ಗಂಟೆಗೆ ಮೈಸೂರಿನ ಸಾಂಪ್ರದಾಯಿಕ ಶೈಲಿಯ ಹಿರಿಯ ಚಿತ್ರಕಲಾವಿದ ಬಿ.ಪಿ.ರಾಮಕೃಷ್ಣ ಅವರಿಗೆ ಈ ಬಾರಿಯ ಪಿಆರ್‍ಟಿ ಕಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. 50 ಸಾವಿರ ನಗದು ಜೊತೆಗೆ ಪಾರಿತೋಷಕ ನೀಡಿ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಜಯಮಾಲಾ, ಬಂಡೆಪ್ಪ ಕಾಶೆಂಪೂರ್, ಶ್ರೀನಿವಾಸ್, ವೆಂಕಟರಮಣಪ್ಪ ಸೇರಿದಂತೆ ಸ್ಥಳೀಯ ಶಾಸಕರು, ಲಲಿತಕಲೆ, ಜಾನಪದ, ಅಕಾಡೆಮಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕಲಾವಿದರು ಇನ್ನಿತರರು ಭಾಗವಹಿಸಲಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮ ದಲ್ಲಿ ರಾಜ್ಯಮಟ್ಟದ ಹಿರಿಯ ಕಲಾವಿದರ ಚಿತ್ರಕಲಾ ಕಾರ್ಯಾಗಾರ, ಶಾಲಾ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ, ಕಲೆ, ಸಾಹಿತ್ಯ, ಸಾಮಾಜಿಕ ಹಾಗೂ ಜಾನಪದ ಕ್ಷೇತ್ರಕ್ಕೆ ಕೊಡುಗೆ ಕುರಿತಂತೆ ವಿಚಾರ ಸಂಕಿರಣ, ಕಲಾ ಪ್ರದರ್ಶನ, ಬಹುಮಾನ ವಿತರಣೆ, ಹಿರಿಯ ಕಲಾವಿದರಿಗೆ ಸನ್ಮಾನ, ಪಿ.ಆರ್.ತಿಪ್ಪೇಸ್ವಾಮಿ ಅವರನ್ನು ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಹದೇವಶೆಟ್ಟಿ, ಪ್ರೊ.ಪರಮೇಶ್ವರಯ್ಯ, ಚಿಕ್ಕಣ್ಣ ಉಪಸ್ಥಿತರಿದ್ದರು.

Translate »