ದಿವ್ಯಾಂಗ ಯುವತಿಯಿಂದ ಲಂಚ ಕೊಡಗು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಸಿಬಿ ಬಲೆಗೆ
ಕೊಡಗು

ದಿವ್ಯಾಂಗ ಯುವತಿಯಿಂದ ಲಂಚ ಕೊಡಗು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಸಿಬಿ ಬಲೆಗೆ

April 27, 2021

ಮಡಿಕೇರಿ,ಏ.26-ದಿವ್ಯಾಂಗ ಯುವತಿಯೊಬ್ಬರಿಂದ 9 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಂಪತ್‍ಕುಮಾರ್ ಬಂಧಿತ ಆರೋಪಿ. ಆತನ ಬಳಿಯಿಂದ 9 ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿವರ: ಮಡಿಕೇರಿ ತಾಲೂಕು ಬೆಟ್ಟಗೇರಿ ಗ್ರಾಮದ ಅಪ್ಪಂಗಳ ನಿವಾಸಿ ಎಂ.ಎನ್.ವೀಣಾ(29) ಶೇ.75ರಷ್ಟು ದಿವ್ಯಾಂಗರಾಗಿದ್ದು, ಸ್ಥಳೀಯ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದಿಂದ ಜಿಲ್ಲಾ ಅಂಗವಿಕಲ ಸಬಲೀಕರಣ ಇಲಾಖೆ ಮೂಲಕ ದಿವ್ಯಾಂಗರಿಗೆ ದ್ವಿಚಕ್ರ ವಾಹನ ನೀಡುವ ಬಗ್ಗೆ ಮಾಹಿತಿ ತಿಳಿದ ವೀಣಾ ಅವರು 2020ರ ಮಾರ್ಚ್ ತಿಂಗಳಲ್ಲಿ ವಾಹನ ಪಡೆಯಲು ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಇದೇ ಏ.20ರಂದು ವೀಣಾ ಅವರಿಗೆ ಕರೆ ಮಾಡಿದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಂಪತ್‍ಕುಮಾರ್, ಕಚೇರಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರು. ಅದರಂತೆ ವೀಣಾ ಅಂಗವಿಕಲ ಕಲ್ಯಾಣಾಧಿಕಾರಿ ಕಚೇರಿಗೆ ತೆರಳಿ ಸಂಪತ್ ಕುಮಾರ್‍ನನ್ನು ಭೇಟಿಯಾದ ಸಂದರ್ಭ 12 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ತದನಂತರ ಏ.23ರಂದು ಸಂಪತ್‍ಕುಮಾರ್ ಬೆಟ್ಟಗೇರಿ ಗ್ರಾಪಂ ಕಚೇರಿಗೆ ತೆರಳಿ ಅಲ್ಲಿ ವೀಣಾ ಅವರನ್ನು ಭೇಟಿಯಾಗಿ 3 ಸಾವಿರ ರೂ. ಲಂಚದ ಹಣ ಮುಂಗಡ ವಾಗಿ ಪಡೆದಿದ್ದ. ಇನ್ನುಳಿದ 9 ಸಾವಿರ ರೂ.ಗಳನ್ನು ಸೋಮವಾರ ತನ್ನ ಕಚೇರಿಗೆ ತಂದು ಕೊಡುವಂತೆ ಹೇಳಿದ ಹಿನ್ನೆಲೆಯಲ್ಲಿ ವೀಣಾ ಅವರು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ದೂರು ನೀಡಿದ್ದರು. ಅದರಂತೆ ಏ.26ರಂದು ಮಡಿಕೇರಿ ಟೋಲ್‍ಗೇಟ್ ಬಳಿ ವೀಣಾ ಅವರಿಂದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ 9 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪ್ರಭಾರ ಉಪಅಧೀಕ್ಷಕ ಸದಾನಂದ ಎ.ತಿಪ್ಪಣ್ಣವರ್, ವೃತ್ತನಿರೀಕ್ಷಕ ಎನ್.ಪಿ.ಹರೀಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

Translate »