ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‍ಗೆ ಗುಡ್ ಬೈ
ಮೈಸೂರು

ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‍ಗೆ ಗುಡ್ ಬೈ

June 2, 2022

ಮೈಸೂರು, ಜೂ.1-ಸುಪ್ರೀಂಕೋರ್ಟ್ ಹಿರಿಯ ವಕೀಲ ರಾದ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿ ಕೊಂಡು ಪಕ್ಷ ತೊರೆಯುತ್ತಿರುವ ಪ್ರಮು ಖರ ಸಾಲಿಗೆ ಇವರೂ ಸೇರಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಎನ್ನಲಾಗುತ್ತಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿ ರುವ ರಾಜೀನಾಮೆ ಪತ್ರವನ್ನು ಬ್ರಿಜೇಶ್ ಕಾಳಪ್ಪ ಯಥಾವ ತ್ತಾಗಿ ಬುಧವಾರ ಬೆಳಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. `ಪಕ್ಷದಲ್ಲಿ ನೀವು ನನಗೆ ಹಲವಾರು ಅವಕಾಶಗಳನ್ನು ಒದಗಿಸಿಕೊಟ್ಟಿರುವುದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಿದ್ದೇನೆ. ನಾನು ರಾಷ್ಟ್ರದ ಎಲ್ಲಾ ಭಾಗಗಳಲ್ಲೂ ಪರಿಚಿತ ಮುಖವೆಂದು ಗುರುತಿಸಲ್ಪಟ್ಟಿದ್ದರೆ ಅದು ನಿಮ್ಮ ಪ್ರೋತ್ಸಾಹದಿಂದ. ನಿಮ್ಮ ಆಶೀರ್ವಾದದಿಂದ ನಾನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನಗಳೊಂ ದಿಗೆ ನೇಮಕಗೊಂಡಿದ್ದೆ. ಅದಕ್ಕಾಗಿ ಧನ್ಯವಾದಗಳು. 2013 ರಿಂದಲೂ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಚಾನಲ್‍ಗಳಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ. ಸುಮಾರು ದಶಕ ಕಾಲ ನಾನು 6497 ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಇದಲ್ಲದೇ ಪಕ್ಷ ನನಗೆ ರಾಜಕೀಯ ಕೆಲಸಗಳನ್ನು ನಿಯಮಿತವಾಗಿ ನೀಡುತ್ತಿದ್ದು, ಅದನ್ನು ನನ್ನ ತೃಪ್ತಿಗೆ ತಕ್ಕಂತೆ ನಿರ್ವಹಿಸಿದ್ದೇನೆ. ಟಿ.ವಿ., ಡಿಬೇಟ್‍ಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಮಯದಲ್ಲೂ ನಾನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಯಾವುದೇ ಪೂರ್ವ ತಯಾರಿ ಇಲ್ಲದೇ ಯಾವುದೇ ಚರ್ಚೆಯಲ್ಲೂ ಎಂದಿಗೂ ನಾನು ಭಾಗವಹಿ ಸಿಲ್ಲ. 2014 ಮತ್ತು 2019ರ ಸೋಲುಗಳ ನಂತರ ಪಕ್ಷಕ್ಕೆ ಅತ್ಯಂತ ಕೆಟ್ಟ ಸಮಯವಿ ದ್ದಾಗಲೂ ನಾನು ಎಂದಿಗೂ ಉತ್ಸಾಹದ ಕೊರತೆಯನ್ನು ಅನುಭವಿಸಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಏನೋ ಕೊರತೆಯನ್ನು ಎದುರಿಸುತ್ತಿದ್ದೇನೆ. ಈ ಪರಿಸ್ಥಿತಿಯಲ್ಲಿ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ 1997ರಿಂದ ಅಖಿಲ ಭಾರತ ಕಾಂಗ್ರೆಸ್ ಜೊತೆಗೆ ಹೊಂದಿದ್ದ ನನ್ನ ನಂಟನ್ನು ಬಿಡಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಬ್ರಿಜೇಶ್ ಕಾಳಪ್ಪ ತಮ್ಮ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.
ಪಕ್ಷ ಬಿಡುವ ಬಗ್ಗೆ ಸ್ಪಷ್ಟವಾದ ಕಾರಣಗಳನ್ನು ಅವರು ತಿಳಿಸಿಲ್ಲವಾದರೂ, ರಾಜ್ಯಸಭೆ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಬ್ರಿಜೇಶ್ ಕಾಳಪ್ಪ ಅವರನ್ನು ಪರಿಗಣಿಸದೇ ನಾಲ್ಕು ಬಾರಿ ರಾಜ್ಯಸಭೆ ಪ್ರವೇಶ ಪಡೆದಿದ್ದ ಜೈರಾಂ ರಮೇಶ್ ಅವರಿಗೆ ಮಣೆ ಹಾಕಿದ್ದರಿಂದ ಬೇಸರ ಗೊಂಡು ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಕಳೆದ 5 ತಿಂಗಳಲ್ಲಿ ಪ್ರಭಾವಿ ನಾಯಕರಾದ ಹಾರ್ದಿಕ್ ಪಟೇಲ್, ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್, ಸುನೀಲ್ ಜಾಕ್ಹರ್, ರತ್ನಜಿತ್ ಪ್ರತಾಪ್ ನರೈನ್ ಸಿಂಗ್, ಕ್ಯಾಪ್ಟನ್ ಅಮೇರಿಂದರ್ ಸಿಂಗ್, ರಾಜ್ಯದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ತೊರೆದಿದ್ದಾರೆ. ಇದೇ ಸಾಲಿನಲ್ಲಿ ಬ್ರಿಜೇಶ್ ಕಾಳಪ್ಪ ಪಕ್ಷ ತೊರೆದಿರುವುದು ಕಾಂಗ್ರೆಸ್‍ಗೆ ಹಿನ್ನಡೆ ಎಂದು ಹೇಳಲಾಗುತ್ತಿದೆ.

Translate »