ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಗುಂಡಿಕ್ಕಿ ಸೋದರ ಸಂಬಂಧಿ ಹತ್ಯೆ ಜಮೀನು ವಿವಾದವೇ ಹತ್ಯೆಗೆ ಕಾರಣ
ಮೈಸೂರು

ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಗುಂಡಿಕ್ಕಿ ಸೋದರ ಸಂಬಂಧಿ ಹತ್ಯೆ ಜಮೀನು ವಿವಾದವೇ ಹತ್ಯೆಗೆ ಕಾರಣ

May 21, 2020

ವಿರಾಜಪೇಟೆ, ಮೇ 20- ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಸೋದರ ಸಂಬಂಧಿ ಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ತಾಲೂಕಿನ ಬಿಳಿಗುಂದ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗ್ರಾಮದ ಕುಮಾರ ಎಂಬಾತನೇ ತನ್ನ ಸೋದರ ಸಂಬಂಧಿ ಸುರೇಶ್‍ನನ್ನು ಹತ್ಯೆಗೈದು ಪರಾರಿಯಾದವನಾಗಿದ್ದು, ಕುಮಾರ ಮತ್ತು ಅದೇ ಗ್ರಾಮದ ಶಿವಣ್ಣ ಎಂಬಾತನ ನಡುವೆ ಜಮೀನು ವಿವಾದವಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುರೇಶನ ತಾಯಿ ಶಿವಣ್ಣನನ್ನು ಬೆಂಬಲಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಸುರೇಶ್‍ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವರ: ಇಂದು ಸಂಜೆ ಪಾನಮತ್ತನಾಗಿ ರಸ್ತೆಯಲ್ಲಿ ಬರುತ್ತಿದ್ದ ಕುಮಾರ, ತನ್ನ ಚಿಕ್ಕಮ್ಮ ಮನೆ ಮುಂದೆ ನಿಂತಿರುವುದನ್ನು ಕಂಡು ಜಮೀನು ವಿಚಾರದಲ್ಲಿ ಶಿವಣ್ಣನನ್ನು ಬೆಂಬಲಿ ಸುತ್ತಿದ್ದೀಯಾ ಎಂದು ಕ್ಯಾತೆ ತೆಗೆದು, ಬೈಯಲಾರಂಭಿಸಿದ್ದಾನೆ. ಈ ವೇಳೆ ಮನೆಯಿಂದ ಹೊರಗೆ ಬಂದ ಸುರೇಶ, “ನೀನು ಗಲಾಟೆ ಮಾಡುತ್ತಿರುವುದನ್ನು ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡುತ್ತೇನೆ” ಎಂದು ಹೇಳುತ್ತಾ ಮೊಬೈಲ್ ಕೈಯ್ಯಲ್ಲಿ ತೆಗೆಯುತ್ತಿದ್ದಾಗ ಕುಮಾರ ತನ್ನ ಕೈಯ್ಯಲ್ಲಿದ್ದ ಒಂಟಿ ನಳಿಕೆ
ಬಂದೂಕಿನಿಂದ ಸುರೇಶನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಸುರೇಶ್‍ನನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾ ಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಪಾನಮತ್ತನಾಗಿ ಕೈಯ್ಯಲ್ಲಿ ಬಂದೂಕು ಹಿಡಿದು ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಕುಮಾರ್, ಸುರೇಶ್‍ನ ಮೇಲೆ ಗುಂಡು ಹಾರಿಸುವ ಮುನ್ನ ಅದೇ ರಸ್ತೆಯಲ್ಲಿ ತೆರಳಿದ ಮಹಿಳೆಯೋ ರ್ವರನ್ನು ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಸಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಪೊಲೀಸರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೇಗೌಡ, ವಿರಾಜಪೇಟೆ ಗ್ರಾಮಾಂತರ ಠಾಣೆ ಸಬ್ ಇನ್ಸ್‍ಪೆಕ್ಟರ್ ವೀಣಾ ನಾಯಕ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Translate »