ಆರೇಳು ತಿಂಗಳಲ್ಲಿ ಮನೆ ಕಟ್ಟಿ  ಫಲಾನುಭವಿಗಳಿಗೆ ಒದಗಿಸಿ
ಮೈಸೂರು

ಆರೇಳು ತಿಂಗಳಲ್ಲಿ ಮನೆ ಕಟ್ಟಿ ಫಲಾನುಭವಿಗಳಿಗೆ ಒದಗಿಸಿ

July 24, 2022

ಮೈಸೂರು, ಜು.23(ಎಸ್‍ಬಿಡಿ)- ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಂಡ ಕಳ್ಳಿಯಲ್ಲಿ ಆರೇಳು ತಿಂಗಳಲ್ಲಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡ ಬೇಕು. ಜಾಗ ಒದಗಿಸಿದರೆ ಇನ್ನೂ ಸಾವಿರ ಮನೆ ನಿರ್ಮಾಣಕ್ಕೆ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ವಸತಿ ಹಾಗೂ ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ವಸತಿ ಇಲಾಖೆ, ರಾಜೀವ್ ಗಾಂಧಿ ವಸತಿ ನಿಗಮ, ಮೈಸೂರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ `ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು’ ಯೋಜನೆಯಡಿ ಮೈಸೂರು ನಗರ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಮಂಡಕಳ್ಳಿ ಪ್ರದೇಶದಲ್ಲಿ 2446 ಮನೆಗಳ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರು ರಾಷ್ಟ್ರದ ಪ್ರತಿಯೊಂದು ಕುಟುಂಬಕ್ಕೂ ಸೂರು ಕಲ್ಪಿಸುವ ಆಶಯದೊಂದಿಗೆ ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ 2022ರೊಳಗೆ ಸಾಧ್ಯವಾದಷ್ಟು ಪೂರೈಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಲಕ್ಷಾಂತರ ಮನೆಗಳನ್ನು ಮಂಜೂರು ಮಾಡಿದ್ದಾರೆ. ಅದರಂತೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈಗಿನಿಂದಲೇ ಮನೆ ನಿರ್ಮಾಣ ಕಾರ್ಯ ಆರಂಭಿಸಿ, 2023ರ ಮೊದಲೆರಡು ತಿಂಗಳೊಳಗೆ ಫಲಾನುಭವಿಗಳಿಗೆ ಹಂಚಿಕೆಯಾಗಬೇಕು. ಇದಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಅಲ್ಲದೆ ಜಾಗ ಗುರುತಿಸಿದರೆ ಇನ್ನೂ ಸಾವಿರ ಮನೆ ಗಳ ನಿರ್ಮಾಣಕ್ಕೆ ನೆರವು ನೀಡಲು ಸಿದ್ಧವಿರುವುದಾಗಿ ಭರವಸೆ ನೀಡಿದರು.

ರಿಯಾಯ್ತಿ ಭರವಸೆ: ಬಡವರಿಗೆ, ದುಡಿಯುವ ವರ್ಗದ ಎಲ್ಲರಿಗೂ ಸೂರು ಕಲ್ಪಿಸಬೇಕೆಂಬುದುದು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಕಲ್ಪ. ಈ ನಿಟ್ಟಿನಲ್ಲಿ ನಾವೆಲ್ಲಾ ಬಡವರಿಗಾಗಿ ಕೆಲಸ ಮಾಡ ಬೇಕು. ಈ ಹಿಂದೆ ಮನೆ ಕೊಡಿಸಲು ಹಣ ಪಡೆದಿರುವ ಮಾಹಿತಿ ಇದೆ. ಆದರೆ ಈ ಬಾರಿ ಒಂದು ಸಣ್ಣ ಅಪಚಾರವಿಲ್ಲದೆ ಅತ್ಯಂತ ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಮಾಡಿರುವುದಾಗಿ ತಿಳಿದಿದ್ದೇನೆ. ಇದಕ್ಕಾಗಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡರು ಹಾಗೂ ಸಂಸದ ಪ್ರತಾಪ್ ಸಿಂಹಗೆ ಅಭಿನಂದನೆ ತಿಳಿಸುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ಸಿಗುವ ಸಬ್ಸಿಡಿ ಹೊರತುಪಡಿಸಿ ಫಲಾನುಭವಿಗಳು ಪಾವತಿಸಬೇಕಾದ ಹಣದಲ್ಲೂ ರಿಯಾಯ್ತಿ ಕಲ್ಪಿಸುವ ಚಿಂತನೆಯಿದೆ. ಮೂಲಸೌಕರ್ಯಕ್ಕೆ ಸರ್ಕಾರವೇ ಭರಿಸಿದರೆ ನಿಮಗೆ 40-45 ಸಾವಿರ ರೂ. ಕಡಿಮೆಯಾಗಬಹುದು. ಬ್ಯಾಂಕ್ ಸಾಲ ಸೌಲಭ್ಯದಲ್ಲಿ ಏನಾದರೂ ತೊಂದರೆಯಾದರೆ ಗಮನಕ್ಕೆ ತನ್ನಿ. ಮನೆ ಹಂಚಿಕೆಯಾದಾಗಿನಿಂದ 3 ವರ್ಷ ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿದೆ. ಪ್ರಾರಂಭಿಕ ಶೇ.10ರಷ್ಟು ಮೊತ್ತವನ್ನು ಕಂತಿನ ರೂಪದಲ್ಲಿ ಮೂರು ತಿಂಗಳೊಳಗೆ ಪಾವತಿಸಿ. ಯಾರೂ ಕೂಡ ಮನೆಯನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಅಧಿಕಾರ-ಬಡತನ ಶಾಶ್ವತವಲ್ಲ: ಯಾರಿಗೂ ಅಧಿಕಾರವೂ ಶಾಶ್ವತವಲ್ಲ, ಬಡತನವೂ ಶಾಶ್ವತವಲ್ಲ. ಅವಕಾಶವಿದ್ದಾಗ ಒಳ್ಳೆಯ ಕೆಲಸ ಮಾಡಬೇಕು. ಕೊರಗ ಜನಾಂಗದವರಿಗೆ 437 ನಿವೇಶನ ಮಂಜೂರು ಮಾಡಿ, ಕೇಂದ್ರ ಹಾಗೂ ರಾಜ್ಯದ ನೆರವಿನಿಂದ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಕಲ್ಪಿಸುವ ಮೂಲಕ ನಿನ್ನೆಯಷ್ಟೇ ಹೊಸ ಅಧ್ಯಾಯ ಆರಂಭಿಸಿದ್ದೇವೆ. ಇದಕ್ಕೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮವೇ ಕಾರಣ. ವಿವಿಧ ಯೋಜನೆಗಳಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡಲಾಗುವ ನೆರವನ್ನು 2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 5 ಲಕ್ಷ ಮನೆ ನಿರ್ಮಿಸಿದ್ದು, ವರ್ಷಾಂತ್ಯದಲ್ಲಿ ಇನ್ನೂ 3 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸೋಮಣ್ಣ ಕಾರಣ: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಮಾತನಾಡಿ, ಕ್ಷೇತ್ರದ ಆಶ್ರಯ ಸಮಿತಿ ಕಚೇರಿಗೆ 15 ವರ್ಷದಿಂದ ಬಿದ್ದಿದ್ದ ಬೀಗ ತೆರೆದು ಹೊಸ ಅಧ್ಯಾಯ ಬರೆಯಲು ಸಚಿವ ವಿ.ಸೋಮಣ್ಣನವರೇ ಪ್ರಮುಖ ಕಾರಣ. 1983ರಿಂದಲೂ ನಮ್ಮಿಬ್ಬರ ಸ್ನೇಹ ಗಟ್ಟಿಯಾಗಿದೆ. ಹಿಂದೆ ನಾನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗಲೂ ಸೋಮಣ್ಣ ವಸತಿ ಸಚಿವರಾಗಿದ್ದರು. ರಾಜ್ಯದಲ್ಲಿ ವಸತಿ ಸೌಲಭ್ಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.50ರಷ್ಟು ಮೀಸಲಾತಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.22.10ರ ಕಾರ್ಯಕ್ರಮ ಜಾರಿಯಾಗಿದ್ದೇ ಇವರ ಕಾಲದಲ್ಲಿ. ವಸತಿ ಸಚಿವರಾಗಿ ಬೇರೆ ಯಾರೂ ಸೋಮಣ್ಣನವರಷ್ಟು ಕೆಲಸ ಮಾಡಿಲ್ಲ. 18ರ ಯುವಕನಂತೆ ಲವಲವಿಕೆಯಿಂದ ಜನರ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಹಾಗೂ ವಿ.ಸೋಮಣ್ಣನವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 70 ಸಾವಿರ ರೂ. ಪ್ರಾರಂಭಿಕ ಮೊತ್ತವನ್ನು ಕಟ್ಟಿ, ರಶೀದಿ ಪಡದುಕೊಳ್ಳಿ. ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವುದರಿಂದ ಮನೆಯ ಮೌಲ್ಯ ತುಂಬಾ ಹೆಚ್ಚಾಗುತ್ತದೆ ಯಾರೂ ಮಾರಾಟ ಮಾಡಬೇಡಿ ಎಂದು ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.

ಸಾಂಘಿಕ ಪ್ರಯತ್ನದ ಫಲ: ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಯೋಜನೆಯಲ್ಲಿ ಕ್ಷೇತ್ರದ ಬಡವರಿಗೆ ಮಾತ್ರ ಮನೆಗಳನ್ನು ನೀಡುತ್ತಿರುವುದು ಇದೇ ಮೊದಲು. 2446 ಮನೆಗಳ ಯೋಜನೆ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಜಿ.ಟಿ.ದೇವೇಗೌಡರ ಸ್ನೇಹ, ವಿಶ್ವಾಸ ಹಾಗೂ ಸಾಂಘಿಕ ಪ್ರಯತ್ನದ ಪ್ರತಿಫಲ. ಕ್ಯಾಬಿನೆಟ್ ನಿರ್ಧಾರದೊಂದಿಗೆ ವಸತಿ ಯೋಜನೆ ಫಲಾನುಭವಿಗಳಿಗೆ ಸೋಮಣ್ಣ ಹಕ್ಕುಪತ್ರ ಒದಗಿಸಿದ್ದಾರೆ. ಈವರೆಗೆ ಯಾರೂ ಈ ನಿಟ್ಟಿನಲ್ಲಿ ಪ್ರಯತ್ನಿಸಿರಲಿಲ್ಲ. ಜಿಟಿಡಿ ಹಾಗೂ ಸೋಮಣ್ಣನವರ ಸಾಂಘಿಕ ಪ್ರಯತ್ನದಿಂದ ಇಲವಾಲ ಸಮೀಪ ಹಿಂದೆ ಕೆಹೆಚ್‍ಬಿ ಲೇಔಟ್ ಆಯಿತು. ಅದಕ್ಕಾಗಿ ಭೂಮಿ ನೀಡಿದವರಿಗೆ ಅಂತಃಕರಣದಿಂದ ಇತ್ತೀಚೆಗೆ ನಿವೇಶನವನ್ನೂ ನೀಡಿದ್ದಾರೆ. ಹಳೇ ಉಂಡುವಾಡಿ ಕುಡಿಯುವ ನೀರಿನ ಯೋಜನೆಯೂ ಅನುಷ್ಠಾನವಾಗಲಿದೆ. ಇವರಿಬ್ಬರ ಸಾರಥ್ಯದಲ್ಲಿ ಇಡೀ ಕ್ಷೇತ್ರಕ್ಕೆ ವಸತಿ ಹಾಗೂ ಕುಡಿಯುವ ನೀರು ಸೌಲಭ್ಯ ಕಲ್ಪಿತವಾಗಲಿದೆ ಎಂದು ತಿಳಿಸಿದರು. ಫಲಾನುಭವಿಗಳ ಪರವಾಗಿ ಶಶಿರೇಖಾ ಹಾಗೂ ಕಲಾವಿದೆ ಸರೋಜಿನಿ ಅವರು ಮಾತನಾಡಿ, ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಮೇಯರ್ ಸುನಂದಾ ಪಾಲನೇತ್ರ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇ ಗೌಡ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಮೈಸೂರು ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಹೆಚ್ಚುವರಿ ಆಯುಕ್ತರಾದ ಎಂ.ಜೆ.ರೂಪ, ಡಾ.ಎಂ.ದಾಸೇ ಗೌಡ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ನಿಕಟಪೂರ್ವ ಅಧ್ಯಕ್ಷ ಎಂ.ಶಿವಣ್ಣ, ಮೈಸೂರು ತಾಪಂ ಮಾಜಿ ಸದಸ್ಯ ಹನುಮಂತು, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಬಸವರಾಜು, ಪ್ರಧಾನ ವ್ಯವಸ್ಥಾಪಕ ಮಹದೇವ ಪ್ರಸಾದ್, ನಗರಪಾಲಿಕೆ ಸದಸ್ಯರಾದ ರಮೇಶ್, ಸವಿತಾ, ನಿರ್ಮಲಾ, ಲಕ್ಷ್ಮಿ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಬಿಜೆಪಿ ಮುಖಂಡರಾದ ಮಹದೇವಯ್ಯ, ಯಶಸ್ವಿನಿ ಸೋಮಶೇಖರ್, ಮಹದೇವಸ್ವಾಮಿ, ಜಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Translate »