ಬಿ.ವೈ.ವಿಜಯೇಂದ್ರ ಸ್ಪರ್ಧೆ  ನಿರ್ಧರಿಸುವವರು ವರಿಷ್ಠರು!
News

ಬಿ.ವೈ.ವಿಜಯೇಂದ್ರ ಸ್ಪರ್ಧೆ ನಿರ್ಧರಿಸುವವರು ವರಿಷ್ಠರು!

July 24, 2022

ಬೆಂಗಳೂರು, ಜು.23- ನಿನ್ನೆಯಷ್ಟೇ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ.ವೈ.ವಿಜ ಯೇಂದ್ರಗೆ ಬಿಟ್ಟುಕೊಟ್ಟಿರುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಂದು ಯೂಟರ್ನ್ ಹೊಡೆದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಹೈಕಮಾಂಡ್ ಟಿಕೆಟ್ ಘೋಷಣೆಗೂ ಮೊದಲೇ ಪುತ್ರನಿಗೆ ಟಿಕೆಟ್ ಕೊಡಿಸಲು ಕ್ಷೇತ್ರ ಬಿಟ್ಟುಕೊಡುವ ಮಾತಾಡಿದ್ದಾರೆಂಬ ವಿಶ್ಲೇಷಣೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ನನಗೆ ಶಿಕಾರಿಪುರದ ಜನ ಚುನಾವಣೆಗೆ ನಿಲ್ಲಲು ಒತ್ತಾಯ ಮಾಡಿದರು. ಆದರೆ ನಾನು ನಿಲ್ಲೋದಿಲ್ಲ. ವಿಜಯೇಂದ್ರ ನಿಲ್ತಾರೆ ಎಂದು ಹೇಳಿದೆ. ನಿನ್ನೆ ಅಲ್ಲಿಯ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ. ಆದರೆ ಅಂತಿಮ ತೀರ್ಮಾನ ಮೋದಿ, ಅಮಿತ್ ಶಾ, ನಡ್ಡಾ ಅವರದ್ದು. ಪಕ್ಷದ ತೀರ್ಮಾನವೇ ಅಂತಿಮ ಎಂದರು. ಹಳೆ ಮೈಸೂರು, ಶಿಕಾರಿಪುರ ಎಲ್ಲೇ ನಿಂತರೂ ವಿಜಯೇಂದ್ರ ಗೆಲ್ಲುತ್ತಾರೆ. ಆದರೆ ಅಂತಿಮ ವಾಗಿ ತೀರ್ಮಾನ ಮಾಡೋದು ಪ್ರಧಾನಿ ಮೋದಿಯವರು ಎಂದರು.
ನನಗೆ ಪಕ್ಷದಲ್ಲಿ ಸಾಕ್ಕಷ್ಟು ಅವಕಾಶ ಸಿಕ್ಕಿದೆ. ನನ್ನನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ್ದಾರೆ. ನಾಲ್ಕು ಬಾರಿ ಸಿಎಂ ಮಾಡಿದ್ದಾರೆ. ಮೋದಿ ಮೊತ್ತೊಮ್ಮೆ ಪ್ರಧಾನಿ ಆಗಬೇಕು. ಅದನ್ನು ನಾನು ನೋಡಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ 140 ಸ್ಥಾನ ಗೆಲ್ಲೋದೇ ನಮ್ಮ ಗುರಿ. ನಾನು ನಾಳೆ ನಾಡಿದ್ದರಿಂದಲೇ ಕೆಲಸ ಶುರು ಮಾಡ್ತೇನೆ ಎಂದು ಪಕ್ಷ ಸಂಘಟನೆಗೆ ಮುಂದಾಗುವುದಾಗಿ ಹೇಳಿದರು. ಇದೇ ವೇಳೆ ಪಿಎಸ್‍ಐ ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮೇಲೆ ಗರಂ ಆದ ಯಡಿಯೂರಪ್ಪ, ಇದು ಮೂರ್ಖತನದ ಪರಮಾವಧಿ ಹೇಳಿಕೆ ಎಂದರು. ಅವರು ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಸಿಎಂ, ಆರ್.ಅಶೋಕ್ ಹೇಳಿಕೆ: ಬಿ.ವೈ.ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಟಿಕೆಟ್ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀರ್ಮಾನ ಮಾಡ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ. ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುತ್ತೇನೆಂದು ನಿನ್ನೆ ಯಡಿಯೂರಪ್ಪನವರು ಸಲಹೆ ನೀಡಿದ್ದಾರಷ್ಟೇ. ಕ್ಷೇತ್ರದ ಜನ ಪದೇ ಪದೇ ಕೇಳುತ್ತಿದ್ದರು. ಹಾಗಾಗಿ ಯಡಿಯೂರಪ್ಪನವರು ನಿನ್ನೆ ಆ ಹೇಳಿಕೆ ನೀಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಯಡಿಯೂರಪ್ಪ ಅಂದರೆ ಒಂದು ದೊಡ್ಡ ಶಕ್ತಿ. ನಾಲ್ಕು ದಶಕಗಳಿಂದ ಯಡಿಯೂ ರಪ್ಪ ಇದ್ದಾರೆ. ಯಡಿಯೂರಪ್ಪ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ. ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಲಿಲ್ಲ. ಈಗ ಸೃಷ್ಟಿ ಮಾಡ್ತಾರಾ? ಎಂದು ಪ್ರಶ್ನಿಸಿದರು. ಇನ್ನೂ ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಟಿಕೆಟ್ ಕೊಡಬಾರದೆಂದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಹೇಳಿದ್ದಾರೆ. ಗಟ್ಟಿಯಾದ ಹೈಕಮಾಂಡ್ ನಮ್ಮದು. ಯಾರಿಗೆ ಟಿಕೆಟ್ ಕೊಡ್ಬೇಕು, ಕೊಡಬಾರದೆಂದು ನಮ್ಮ ಹೈಕಮಾಂಡ್ ತೀರ್ಮಾನಿಸುತ್ತೆ. ಸಿಎಂ ಮತ್ತು ನಾನು ಬಿಎಸ್‍ವೈ ಭೇಟಿ ಮಾಡಿದ್ವಿ. ಅವರು ನಗುನಗುತ್ತಲೇ ಮಾತನಾಡಿ ದರು. ದೊಡ್ಡ ದೊಡ್ಡ ರ್ಯಾಲಿ ಮಾಡೋಣ ಎಂದಿದ್ದಾರೆ. ದೊಡ್ಡಬಳ್ಳಾಪುರ ರ್ಯಾಲಿ ಅನೌನ್ಸ್ ಮಾಡಿದ್ದೇನೆ. ಮುಂದೆ ಯಾವ್ಯಾವ ಜಿಲ್ಲೆಯಲ್ಲಿ ಮಾಡಬೇಕೆಂಬುದರ ಬಗ್ಗೆಯೂ ಮಾತನಾಡ್ತೇನೆ. ನನ್ನ ಜೀವವೇ ಬಿಜೆಪಿ ಅಂತ ಹೇಳ್ತಿದ್ದಾರೆ ಎಂದರು.

Translate »