ಮಳೆ ನೀರು ಚರಂಡಿ ಒತ್ತುವರಿ ಮಾಡಿ ನಿರ್ಮಿಸಿರುವ  ಕಟ್ಟಡಗಳ ಕೂಡಲೇ ತೆರವುಗೊಳಿಸಿ
ಮೈಸೂರು

ಮಳೆ ನೀರು ಚರಂಡಿ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳ ಕೂಡಲೇ ತೆರವುಗೊಳಿಸಿ

October 28, 2021

ಮೈಸೂರು, ಅ.27(ವೈಡಿಎಸ್)- ಮಳೆ ನೀರು ಚರಂಡಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆ ಅಥವಾ ಕಟ್ಟಡ ಗಳನ್ನು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವಂತೆ ಶಾಸಕ ಎಸ್.ಎ. ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಬುಧ ವಾರ ಕೆ.ಆರ್.ಕ್ಷೇತ್ರದ ನಿವಾಸಿಗಳಿಗೆ ಮಳೆ ಯಿಂದ ಆಗುತ್ತಿರುವ ತೊಂದರೆ ಹಾಗೂ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ಷೇತ್ರದ ಪಾಲಿಕೆ ಸದಸ್ಯರು, ಮುಡಾ ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತ ನಾಡಿದ ಅವರು, ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆಗಳಲ್ಲಿರುವ ಹೂಳನ್ನು ತೆರವುಗೊಳಿಸಬೇಕು. ಒಳಚರಂಡಿ ನೀರು ಹೊರಗೆ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಜೆಟ್ಟಿಂಗ್ ಮೆಷಿನ್, ಮತ್ತಿತರೆ ಪರಿಕರಗಳು, ವಾಹನ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.

ಎಲ್ಲೆಲ್ಲಿ ಮಳೆನೀರು ಚರಂಡಿ ಒತ್ತುವರಿ ಮಾಡಿಕೊಂಡು ಮನೆ ಅಥವಾ ಕಟ್ಟಡ ನಿರ್ಮಿಸಿಕೊಂಡಿದ್ದರೆ ಅಂತಹ ಕಟ್ಟಡವನ್ನು ಒಡೆದುಹಾಕಲು ಪಾಲಿಕೆ, ಮುಡಾ, ತಾಲೂಕು ಕಚೇರಿ ಮತ್ತು ಪೆÇಲೀಸ್ ಇಲಾಖೆ ಜಂಟಿ ಯಾಗಿ ಕಾರ್ಯನಿರ್ವಹಿಸಬೇಕು. ಜತೆಗೆ ಎಲ್ಲೆಲ್ಲಿ ಮಳೆ ನೀರು ಹರಿಯಲು ತಡೆಯಾಗು ತ್ತಿದೆಯೋ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಿರುವ ಹಣ ವನ್ನು ಬಿಡುಗಡೆ ಮಾಡಬೇಕು. ಪ್ರಕೃತಿ ವಿಕೋಪದ ಸಮಯದಲ್ಲಿ ನರೇಗಾ ಯೋಜನೆಯನ್ನು ನಗರ ಪ್ರದೇಶದಲ್ಲಿ ಪ್ರಾರಂಭಿಸಲು ಸರ್ಕಾರಕ್ಕೆ ಮನವಿ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪಾಲಿಕೆ ಅಧಿಕಾರಿಗಳು, ಸದಸ್ಯರು ಹಾಜರಿದ್ದರು.

Translate »