ಮೈಸೂರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ; ಬೃಹತ್ ಸಮಾವೇಶದಲ್ಲಿ ಭಾಗಿ ಡಬಲ್ ಎಂಜಿನ್ ಸರ್ಕಾರದಿಂದ ದಾಖಲೆ ಅಭಿವೃದ್ಧಿ
ಮೈಸೂರು

ಮೈಸೂರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ; ಬೃಹತ್ ಸಮಾವೇಶದಲ್ಲಿ ಭಾಗಿ ಡಬಲ್ ಎಂಜಿನ್ ಸರ್ಕಾರದಿಂದ ದಾಖಲೆ ಅಭಿವೃದ್ಧಿ

June 21, 2022

ಮೈಸೂರು, ಜೂ.20- ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸುವ ಮೂಲಕ ಗಮನ ಸೆಳೆದರು.

`ಮೈಸೂರು ಹಾಗೂ ಕರ್ನಾಟಕ ರಾಜ್ಯದ ಸಮಸ್ತ ನಾಗರಿಕ ಬಂಧುಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಜೊತೆ ಸಂವಾದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಕನ್ನಡದಲ್ಲೇ ಹೇಳಿದ ನಂತರ ಹಿಂದಿಯಲ್ಲಿ ಭಾಷಣ ಮುಂದುವರೆಸಿದರು. ಈ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್, ಯೋಗ ಗುರು ಕೃಷ್ಣಮಾಚಾರಿ, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿದರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಸಂಜೆ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಮೈಸೂರು, ಜೂ. 20(ಆರ್‍ಕೆ)- ಡಬಲ್ ಎಂಜಿನ್ ಸರ್ಕಾರವು ಹಲವು ಜನಪರ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ ಎಂದು ಹೇಳುವ ಮೂಲಕ ಟೀಕಾಕಾರರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದರ ಜೊತೆಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಇಂದು ಮೈಸೂರಿಗೆ ಆಗಮಿಸಿದ ಅವರು, ಸಂಜೆ ಮಹಾರಾಜ ಕಾಲೇಜು ಮೈದಾನ ದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಪುರಸ್ಕøತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಠತೆ ಕೇಂದ್ರದ ಲೋಕಾರ್ಪಣೆ ಹಾಗೂ ಮೈಸೂರು ಮತ್ತು ನಾಗನಹಳ್ಳಿ ರೈಲು ನಿಲ್ದಾಣದ ಯಾರ್ಡ್ ಪುನರ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಡಬಲ್ ಎಂಜಿನ್ ಸರ್ಕಾರ ಎಂದು ಕುಹಕವಾಡು ತ್ತಿದ್ದ ಪ್ರತಿಪಕ್ಷದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿ ರುವ ಯೋಜನೆಗಳ ಪಟ್ಟಿ ಮೂಲಕ ಉತ್ತರ ನೀಡಿದ ಅವರು, ಈ ದೇಶದಲ್ಲಿ ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಸರ್ಕಾರಗಳು ನೀಡಿದ ಯೋಜನೆಗಳು ಹಾಗೂ ಕಳೆದ 8 ವರ್ಷಗಳಲ್ಲಿ ನಾವು ನೀಡಿದ ಜನಪರ ಕಾರ್ಯಕ್ರಮಗಳನ್ನು ತಾಳೆ ಮಾಡಿ ನೋಡಿ, ಫಲಿತಾಂಶ ನಿಮಗೇ ತಿಳಿಯುತ್ತದೆ. ಈ ವಿಚಾರ ತಿಳಿದಿದ್ದರೂ ಸಹ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸದಾ ಟೀಕಿಸುತ್ತಲ್ಲೇ ಇದ್ದಾರೆ ಎಂದರು.

ಕರ್ನಾಟಕ ಆರ್ಥಿಕತೆ, ಆಧ್ಯಾತ್ಮ ಮತ್ತು ಸಂಸ್ಕøತಿಯಲ್ಲಿ ಸಮೃದ್ಧವಾಗಿದೆ. ಅದಕ್ಕಾಗಿಯೇ ಈ ಬಾರಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೈಸೂರಲ್ಲಿ ಆಚರಿಸಲು ಸಂಕಲ್ಪ ಮಾಡಲಾಯಿತು. 21ನೇ ಶತಮಾನದ ಗುರಿ ತಲುಪಲು ರಾಜ್ಯ ಮಾಡಿರುವ ಅಭಿವೃದ್ಧಿ ದೇಶಕ್ಕೇ ಮಾದರಿಯಾಗಿದೆ ಎಂದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವು ದೇಶ ಕಂಡ ಮಹನೀಯರನ್ನು ಕೊಟ್ಟ ನಾಡು ಇದು. ಅವರ ಅಸ್ಮಿತೆ ಇಂದಿಗೂ ಜೀವಂತವಾಗಿದ್ದು, ಅವರ ಕೊಡುಗೆಯನ್ನು ಮರೆಯಲಾಗದು. ಅದರಿಂದಾಗಿಯೇ ಸಾಮಾನ್ಯ ಜನರೂ ಇಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಸೀಮಿತ ಕಾರ್ಯಕ್ರಮಗಳಿಗೆ ಮಿತಗೊಳಿಸಿದ್ದರಿಂದ ಅದರ ಫಲಾನುಭವಿಗಳೂ ಸಹ ನಿಯಮಿತವಾಗಿದ್ದರು. ಆದರೆ 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಹಳ್ಳಿಗಳಿಗೂ ಅಭಿವೃದ್ಧಿ ವಿಸ್ತರಿಸಿ ಮಹಿಳೆಯರು, ರೈತರು, ಬಡವರು, ದೀನ ದಲಿತರ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಸರ್ಕಾರಿ ಯೋಜನೆಗಳು ಅರ್ಹ ವ್ಯಕ್ತಿಗಳಿಗೆ ತಲುಪಬೇಕೆಂಬ ಸಂಕಲ್ಪ ನಮ್ಮದಾಗಿದೆ ಎಂದು ಪ್ರಧಾನಿಗಳು ನುಡಿದರು.

‘ಸಬ್ ಕಾ ಸಾಥ್, ಸಬ್ ವಿಕಾಸ್, ಸಬ್ ಕಾ ಪರ್ಯಾಸ್’ ಎಂಬುದು ನಮ್ಮ ಧ್ಯೇಯ. ‘ಒನ್ ನೇಷನ್-ಒನ್ ರೇಷನ್ ಕಾರ್ಡ್’ ಯೋಜನೆಯಡಿ ಬಡತನ ಮುಕ್ತ, ಹಸಿವು ಮುಕ್ತ ಭಾರತ ಮಾಡುವ ನಮ್ಮ ಸಂಕಲ್ಪ ಸಾಕಾರವಾಗಿದೆ. ಕೇಂದ್ರ ಸರ್ಕಾರ ಮಹತ್ವದ ಯೋಜನೆಯಲ್ಲೊಂದಾದ ಆಯುಷ್ಮಾನ್ ಭಾರತ್‍ನಲ್ಲಿ 4,000 ಕೋಟಿ ರೂ. ಮಂಜೂರು ಮಾಡಿದ್ದು, 29 ಲಕ್ಷ ಮಂದಿ ಆರೋಗ್ಯ ಸೇವೆ ಪಡೆದಿದ್ದಾರೆ ಎಂದು ನರೇಂದ್ರ ಮೋದಿ ನುಡಿದರು. ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ 56 ಲಕ್ಷ ಸಣ್ಣ ರೈತರ ಬ್ಯಾಂಕ್ ಖಾತೆಗೆ 10,000 ಕೋಟಿ ರೂ. ವರ್ಗಾವಣೆಯಾಗಿದೆ. ಕಿಸಾನ್ ಮತ್ತು ಅತೀ ಸಣ್ಣ ರೈತರ ಬದುಕು ಹಸನಾಗಿದೆ ಎಂದ ಅವರು, ಸ್ಟಾರ್ಟ್‍ಅಪ್ ಯೋಜನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಉದ್ಯಮ ಆರಂಭಿಸುವ ಯುವಕರು ದಿವ್ಯಾಂಗರಿಗೆ ಅನುಕೂಲ ಮಾಡಿ ಅವರ ಜೀವನ ಸುಧಾರಿಸುವತ್ತ ಗಮನಹರಿಸಿ ಎಂದು ಸಲಹೆ ನೀಡಿದರು. ದೇಶದಲ್ಲಿರುವ ಕೋಟ್ಯಾಂತರ ದಿವ್ಯಾಂಗರಿಗಾಗಿಯೇ ಪ್ರತ್ಯೇಕ ಯೋಜನೆ ಜಾರಿ ಮಾಡಿ ವಿದ್ಯಾಭ್ಯಾಸ, ಉದ್ಯೋಗಕ್ಕೆ ಅನುಕೂಲ ಮಾಡಲಾಗಿದೆ. ರೈಲು ನಿಲ್ದಾಣಗಳಲ್ಲಿ ಅವರಿಗೆ ಅನುಕೂಲವಾಗಲೆಂದೇ ಬ್ರೈಲ್ ಲಿಪಿ ಒಳಗೊಂಡ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ದಿಮೆ ಮಾಡುವವರಿಗೆ ಆರ್ಥಿಕ ನೆರವು ನೀಡಿ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಪ್ರಧಾನಿಗಳು ಇದೇ ವೇಳೆ ನುಡಿದರು.

ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ನೀಡುತ್ತಿರುವ ಜನಪರ ಹಾಗೂ ಅಭಿವೃದ್ಧಿ ಯೋಜನೆಗಳು ದೇಶಕ್ಕೇ ಮಾದರಿಯಾಗಿದೆ. ಈ ಹಿಂದೆ ಆಡಳಿತ ನಡೆಸಿದ ಕೇಂದ್ರ ಸರ್ಕಾರಗಳು ರಾಜ್ಯದ ರೈಲ್ವೇ ಯೋಜನೆಗೆ 800 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಡುತ್ತಿದ್ದವು. ಆದರೆ ನಮ್ಮ ಸರ್ಕಾರ ಬಂದ ಮೇಲೆ 7000 ಕೋಟಿ ಕೊಟ್ಟಿದ್ದೇವೆ. 2004ರಿಂದ 2010ರವರೆಗೆ ಕೇವಲ 16 ಕಿ.ಮೀ. ರೈಲು ಮಾರ್ಗ ವಿದ್ಯುದ್ದೀಕರಣ ಮಾಡಲು ಸಾಧ್ಯವಾಗಿತ್ತು. 2014ರಿಂದ 2020ರವರೆಗೆ ನಾವು 1600 ಕಿ.ಮೀ. ಎಲೆಕ್ಟ್ರಿಫಿಕೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪ್ರಧಾನಿಗಳು ಇದೇ ವೇಳೆ ನುಡಿದರು.

ಈವರೆಗೆ 5 ಸಾವಿರ ಕಿ.ಮೀ. ರಸ್ತೆ ಉನ್ನತೀಕರಿಸಿದ್ದರೆ, ಮತ್ತಷ್ಟು ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಕರ್ನಾಟಕದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಂಡ ಬಳಿಕ ಇಲ್ಲಿನ ಚಿತ್ರಣವೇ ಬದಲಾಗಲಿದೆ ಎಂದ ಅವರು, ನಂತರ ರಾಜ್ಯದ ಕೈಗಾರಿಕೋದ್ಯಮ ನಿರೀಕ್ಷೆಗೂ ಮೀರಿ ಬೆಳೆಯಲಿದೆ. ಇಂತಹ ಅಭಿವೃದ್ಧಿ ಯೋಜನೆಗಳನ್ನು ಕಾಣಬೇಕಿದ್ದರೆ ನಿಮ್ಮ ಆಶೀರ್ವಾದ ನಮಗೆ ಬೇಕಿದೆ ಎಂದರು.

ಇತಿಹಾಸ ಮತ್ತು ಆಧುನೀಕರಣದ ಸಮ್ಮಿಶ್ರ ಮೈಸೂರಲ್ಲಿ ಕಾಣಬಹುದು. ಇಲ್ಲಿನ ಸಂಸ್ಕøತಿ, ಪಾರಂಪರಿಕತೆಯಿಂದಾಗಿಯೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರನ್ನು ಆಯ್ಕೆ ಮಾಡಲಾಯಿತು. ನಾಳೆ ಇಡೀ ವಿಶ್ವವೇ ಮೈಸೂರಿನತ್ತ ಗಮನ ಹರಿಸಲಿದೆ. ಪ್ರಧಾನಮಂತ್ರಿಗಳ ಸ್ವನಿಧಿ ಯೋಜನೆಯಡಿ 1.5 ಲಕ್ಷ ಬೀದಿ ಬದಿ ವ್ಯಾಪಾರಿಗಳು ನರೇಂದ್ರ ಮೋದಿ ಅವರು, 8 ವರ್ಷಗಳಲ್ಲಿ ನಮ್ಮ ಸರ್ಕಾರ 3.75 ಲಕ್ಷ ಬಡ ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಿಸಿಕೊಟ್ಟಿದೆ ಎಂದು ಅವರು ತಿಳಿಸಿದರು.

Translate »