ಮೈತ್ರಿ ಸರ್ಕಾರದ ಉಳಿವಿಗೆ ಸಂಪುಟ ವಿಸ್ತರಣೆ ಮದ್ದು
ಮೈಸೂರು

ಮೈತ್ರಿ ಸರ್ಕಾರದ ಉಳಿವಿಗೆ ಸಂಪುಟ ವಿಸ್ತರಣೆ ಮದ್ದು

May 28, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗಕ್ಕೊಳ ಗಾದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇದೀಗ ಅಧಿಕಾರ ಉಳಿಸಿಕೊಳ್ಳಲು ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದೆ.

ಚುನಾವಣಾ ಫಲಿತಾಂಶ ಪ್ರಕಟ ಗೊಳ್ಳುತ್ತಿದ್ದಂತೆ ಕಾಂಗ್ರೆಸ್‍ನ ಕೆಲವು ಭಿನ್ನಮತೀಯ ಶಾಸಕರು ಬಿಜೆಪಿಗೆ ವಲಸೆ ಹೋಗಲು ಮುಂದಾಗಿರುವುದನ್ನು ತಪ್ಪಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆ ಜೊತೆಗೆ ಕೆಲವು ಪ್ರಮುಖ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಮಾಡಲಿದ್ದಾರೆ. ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ತಮ್ಮ ಪಕ್ಷದ ಪಾಲಿನ ಎರಡು ಸಚಿವ ಸ್ಥಾನ ಸೇರಿದಂತೆ ಕೆಲವು ಅಧಿ ಕಾರವನ್ನು ಮಿತ್ರಪಕ್ಷ ಕಾಂಗ್ರೆಸ್‍ಗೆ ಬಿಟ್ಟು ಕೊಡುತ್ತಿದ್ದಾರೆ.

ಸದ್ಯಕ್ಕೆ ಸಂಪುಟದಲ್ಲಿ ಜೆಡಿಎಸ್‍ನ ಎರಡು, ಕಾಂಗ್ರೆಸ್ ಪಾಲಿನ ಒಂದು ಸ್ಥಾನ ಖಾಲಿ ಇದೆ. ಆದರೆ ಸರ್ಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿಯವರು ತಮ್ಮ ಪಾಲಿನ ಸ್ಥಾನಗಳನ್ನು ಮಿತ್ರ ಪಕ್ಷಕ್ಕೆ ಬಿಟ್ಟುಕೊಡು ತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತೆರೆಮರೆಯಲ್ಲಿ ಸರ್ಕಾರ ರಚನೆಗೆ ನಡೆಸುತ್ತಿರುವ ಪ್ರಯತ್ನಕ್ಕೆ ಬ್ರೇಕ್ ಹಾಕಲು ನಿನ್ನೆ ಸಂಜೆ ಮುಖ್ಯಮಂತ್ರಿಯವರು ಸಿಎಲ್‍ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಕಾಂಗ್ರೆಸ್ ಬಂಡಾಯ ನಾಯಕ ರಮೇಶ್ ಜಾರಕಿ ಹೊಳಿ ಅವರನ್ನು ಹೊರತುಪಡಿಸಿ, ಬಿಜೆಪಿ ಕಡೆ ಮುಖ ಮಾಡಿರುವ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ಇಲ್ಲವೇ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದೊರೆಯಲಿದೆ.

ರಮೇಶ್ ಜಾರಕಿಹೊಳಿ ಅವರನ್ನು ಏಕಾಂಗಿಯಾಗಿ ಮಾಡುವ ಉದ್ದೇಶದಿಂದ ಅವರ ಬೆನ್ನಿಂದೆ ನಿಂತಿರುವ ಶಾಸಕರಿಗೆ ಅಧಿಕಾರದ ಸ್ಥಾನಮಾನ ನೀಡಿ, ಸೆಳೆದು ಕೊಳ್ಳುವ ಪ್ರಯತ್ನ ಇದಾಗಿದೆ. ಬಹುತೇಕ ಬುಧವಾರ ಇಲ್ಲವೆ ಗುರುವಾರ ಸಂಪುಟ ವಿಸ್ತರಣೆಯಾಗಲಿದೆ. ಕೊನೆ ಯಲ್ಲಿ ಕೆಲ ಬದಲಾವಣೆಯಾದರೆ ಅಲ್ಪಮಟ್ಟಿಗೆ ಪುನಾ ರಚನೆ ಆಗುವುದನ್ನು ತಳ್ಳಿ ಹಾಕುವಂತಿಲ್ಲ. ಜಾರಕಿಹೊಳಿಗೆ ಬಲವಾಗಿ ನಿಂತಿರುವ ಇಬ್ಬರು ಪಕ್ಷೇತರರು ಸೇರಿದಂತೆ ನಾಲ್ಕು ಶಾಸಕರಿಗೆ ಮೊದಲು ಅಧಿಕಾರ ನೀಡುವ ತೀರ್ಮಾನ ಕೈಗೊಳ್ಳ ಲಾಗಿದೆ. ಕೇವಲ ಸಂಪುಟ ವಿಸ್ತರಣೆ ಮಾಡಿದರೆ ನಾಲ್ವರಲ್ಲಿ ಮೂವರಿಗೆ ಸಚಿವ ಸ್ಥಾನ, ಒಬ್ಬರಿಗೆ ಪ್ರಮುಖ ನಿಗಮದ ಅಧ್ಯಕ್ಷ ಸ್ಥಾನ ದೊರೆಯಲಿದೆ.

ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿಯವರು ಬಿಜೆಪಿಗೆ ಹೋಗುವವರ ಬಗ್ಗೆ ಎಲ್ಲಾ ಕೋನಗಳಿಂದಲೂ ಪರಿ ಶೀಲಿಸಿದ ನಂತರ ಪಕ್ಷೇತರ ಸದಸ್ಯರಾದ ಆರ್. ಶಂಕರ್, ಹೆಚ್. ನಾಗೇಶ್, ಕಾಂಗ್ರೆಸ್‍ನ ಡಾ. ಕೆ. ಸುಧಾಕರ್ ಹಾಗೂ ಬಿ.ಸಿ. ಪಾಟೀಲ್ ಮೊದಲ ಸಾಲಿನಲ್ಲಿದ್ದಾರೆ. ಇವರಿಗೆ ಅಧಿಕಾರ ನೀಡಿ, ರಮೇಶ್ ನಾಯಕತ್ವ ಕೊನೆಗಾಣಿಸುವುದು ನಂತರ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಸಿಕೊಂಡು ಹೋಗಲು ತೀರ್ಮಾನ ಕೈಗೊಳ್ಳಲಾಗಿದೆ. ದೊಡ್ಡ ಪ್ರಮಾಣದಲ್ಲಿ ಸಂಪುಟ ಪುನರಚನೆ ಮಾಡುವ ಬಗ್ಗೆಯು ಮಾತುಕತೆಯಲ್ಲಿ ಪ್ರಸ್ತಾಪವಾಯಿತು, ಆದರೆ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಸಚಿವರನ್ನು ಕೈಬಿಟ್ಟರೆ ಅವರ ಮೇಲೆ ಆರೋಪ ಹೊರಿಸಿದಂತಾಗುತ್ತದೆ.

ಇಂತಹ ಸನ್ನಿವೇಶದಲ್ಲೂ ಸದ್ಯಕ್ಕೆ ಯಾರನ್ನು ಕೈಬಿಡುವುದು ಬೇಡ. ಮುಂದಿನ ಡಿಸೆಂಬರ್‍ನಲ್ಲಿ ನಮ್ಮ ಕೆಲ ಸಚಿವರನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಲು ವರಿಷ್ಠರು ನಿರ್ಧರಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೆಲವರನ್ನು ಬಿಟ್ಟು ಹೊಸಬರನ್ನು ತೆಗೆದುಕೊಳ್ಳೋಣ ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಬಂಡಾಯದಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುತ್ತಿದ್ದ, ಬಳ್ಳಾರಿಯ ನಾಗೇಂದ್ರ ಹಾಗೂ ಬೆಳಗಾವಿಯ ಕಮಟಳ್ಳಿ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಾವು ಪಕ್ಷ ತೊರೆಯುವುದಿಲ್ಲ. ಪ್ರತಿನಿತ್ಯ ಟಿ.ವಿ. ಮಾಧ್ಯಮದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಎಷ್ಟೋ ಬಾರಿ ಸ್ಪಷ್ಟಪಡಿಸಿದ್ದರೂ ಅವರು ಮಾಡಿದ್ದನ್ನೇ ಮಾಡುತ್ತಿದ್ದಾರೆ. ನಾನೇನು ಮಾಡಲಿ ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.
ಅವರ ಕೆಲವು ಸ್ಥಳೀಯ ಸಮಸ್ಯೆಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸ್ಥಳದಲ್ಲೇ ಪರಿಹರಿಸಿಕೊಟ್ಟಿದ್ದಾರೆ. ನಾಗೇಂದ್ರ ಅವರಿಗೂ ಕೊನೆ ಗಳಿಗೆಯಲ್ಲಿ ಮಂತ್ರಿ ಸ್ಥಾನ ದೊರೆತರೆ ಆಶ್ಚರ್ಯಪಡಬೇಕಾಗಿಲ್ಲ.

Translate »